ಎಸ್‍ಸಿ, ಎಸ್‍ಟಿ ಉದ್ಯಮಿಗಳಿಗೆ ಎರಡು ಕೋಟಿ ರೂ.ವರೆಗೆ ಬಡ್ಡಿರಹಿತ ಸಾಲ ಒದಗಿಸಿ
ಮೈಸೂರು

ಎಸ್‍ಸಿ, ಎಸ್‍ಟಿ ಉದ್ಯಮಿಗಳಿಗೆ ಎರಡು ಕೋಟಿ ರೂ.ವರೆಗೆ ಬಡ್ಡಿರಹಿತ ಸಾಲ ಒದಗಿಸಿ

September 3, 2021

ಮೈಸೂರು,ಸೆ.2(ಪಿಎಂ)-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 2 ಕೋಟಿ ರೂ.ವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿಕೊಡ ಬೇಕೆಂದು ಕರ್ನಾಟಕ ರಾಜ್ಯ ದಲಿತ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಒತ್ತಾಯಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ಇಂಜಿನಿಯರ್ ಗಳ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳು ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಕುಂದು-ಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಶೇ.24ರಷ್ಟು ಜಾಗ ವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗಾಗಿ ಮೀಸಲಿಡಬೇಕು. ಜೊತೆಗೆ ಈ ವರ್ಗದ ಎಲ್ಲಾ ಉದ್ಯಮಿಗಳಿಗೆ ಸಬ್ಸಿಡಿ ದೊರ ಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಕೈಗಾರಿಕಾ ಪ್ರದೇಶದಲ್ಲಿ 500ರಿಂದ 600 ಎಕರೆ ಯಷ್ಟು ಜಮೀನು ಮಾತ್ರವೇ ಈ ವರ್ಗದ ಉದ್ಯಮಿ ಗಳಿಗೆ ದೊರೆಯುತ್ತಿದೆ. ಕಾನೂನುಬದ್ಧವಾಗಿ 10 ಸಾವಿರ ಎಕರೆ ಭೂಮಿ ದೊರೆಯಬೇಕು. ಹಾಗಾ ದರೆ ಉಳಿಕೆ ಭೂಮಿ ಏನಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಬೂಬು ಹೇಳು ತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ, ಪಂಗಡದ ಉದ್ಯಮಿಗಳಿಗೆ ಬ್ಯಾಂಕ್ ಗಳಲ್ಲಿ ಸಾಲವೇ ಸಿಗುವುದಿಲ್ಲ. ಆದರೆ ದೇಶದಲ್ಲಿ ಕೆಲವು ಉದ್ಯಮಿಗಳು ಸಾವಿರಾರು ಕೋಟಿ ರೂ. ಸಾಲ ಪಡೆದು ವಂಚಿಸಿದ್ದಾರೆ. ಅವರನ್ನು ಜೈಲಿಗೂ ಕಳುಹಿಸಿಲ್ಲ. ಇದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮವರು ಈವರೆಗೆ ಬೇರೆ ಬೇರೆ ಕಡೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇನ್ನು ಮುಂದೆ ಉದ್ದಿಮೆದಾರರಾಗಿ ಉದ್ಯೋಗ ಕೊಡುವ ಶಕ್ತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವರು ಯಶಸ್ಸು ಕಂಡಿದ್ದಾರೆ. ಆರ್ಥಿಕವಾಗಿ ಸಬಲರಾದರೆ ರಾಜಕೀಯ ಮತ್ತು ಸಾಮಾಜಿಕವಾಗಿಯೂ ಪ್ರಾಬಲ್ಯ ಸಾಧಿಸಬಹುದು. ಜೊತೆಗೆ ಸಮಾಜದಲ್ಲಿ ಘನತೆಯೂ ನಮ್ಮ ಸಮುದಾಯಕ್ಕೆ ಹೆಚ್ಚಾಗಲಿದೆ ಎಂದರು.

ಕುಂದು-ಕೊರತೆ: ಸಭೆಯಲ್ಲಿ ಹಲವು ರೀತಿಯ ಕುಂದು-ಕೊರತೆಗಳು ಕೇಳಿಬಂದವು. ಬ್ಯಾಂಕ್ ಗಳು, ರಾಜ್ಯ ಹಣಕಾಸು ನಿಗಮ ಉದ್ಯಮಿಗಳಿಗೆ ಸಾಲ ನೀಡಲು ವಿಳಂಬ ಧೋರಣೆ ಅನುಸರಿಸು ತ್ತಿದ್ದು, ಸಮಸ್ಯೆ ಪರಿಹರಿಸಬೇಕೆಂದು ಹಲವರು ಕೋರಿದರು. ಅಲ್ಲದೆ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶ ದಲ್ಲಿ 2014ರಿಂದ ದಲಿತರಿಗೆ ನಿವೇಶನ ಹಂಚಿಕೆ ಯಾಗಿಲ್ಲ. 38.68 ಎಕರೆ ನೀಡಬೇಕಿದ್ದು. ಶೀಘ್ರ ಸೂಕ್ತ ಕ್ರಮ ವಹಿಸಬೇಕೆಂಬ ಒತ್ತಾಯಗಳು ಕೇಳಿಬಂದವು.

ಕರ್ನಾಟಕ ರಾಜ್ಯ ದಲಿತ ಉದ್ಯಮಿದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್, ಮೈಸೂರು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿದಾರರ ಸಂಘದ ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ವಿಜಯಶಂಕರ್, ನಿರ್ದೇ ಶಕ ಈಶ್ವರ ಚಕ್ಕಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಕೆ.ಲಿಂಗರಾಜು, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಬಿ.ಎಲ್.ಅರುಣಕುಮಾರ್, ರಾಜ್ಯ ಹಣಕಾಸು ಸಂಸ್ಥೆ ಹಿರಿಯ ವ್ಯವಸ್ಥಾಪಕ ಎ.ಟಿ. ನಟರಾಜ್, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ಯತೀಶ್ವರನ್ ಮತ್ತಿತರರು ಪಾಲ್ಗೊಂಡಿದ್ದರು.

Translate »