ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಫುಡ್ ಡೆಲಿವರಿ ಬಾಯ್ ಸಾವು
ಮೈಸೂರು

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಫುಡ್ ಡೆಲಿವರಿ ಬಾಯ್ ಸಾವು

May 21, 2022

ಮಡಿಕೇರಿ, ಮೇ ೨೦- ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಹಾರ ಡೆಲಿವರಿ ಮಾಡಲು ತೆರಳುತ್ತಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ನಗರದ ಚೈನ್ ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೂಲತಃ ಮೈಸೂರು ವಿಜಯನಗರ ೨ನೇ ಹಂತದ ನಿವಾಸಿ, ಕುಶಾಲನಗರ ದಲ್ಲಿ ನೆಲೆಸಿದ್ದ ಎ.ಸಿ.ತಿಮ್ಮಯ್ಯ ತೇಜಸ್(೨೭) ಅಪಘಾತ ದಲ್ಲಿ ಮೃತಪಟ್ಟ ಯುವಕ.

ವಿವರ: ಕಳೆದ ೨ ತಿಂಗಳ ಹಿಂದೆ ತಿಮ್ಮಯ್ಯ ತೇಜಸ್ ಮಡಿಕೇರಿಯಲ್ಲಿ ಆನ್‌ಲೈನ್ ಮೂಲಕ ಆಹಾರ ಪೂರೈಕೆ ಮಾಡುವ ಖಾಸಗಿ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದರು ಎನ್ನ ಲಾಗಿದೆ. ಪ್ರತಿ ದಿನವೂ ಕುಶಾಲನಗರದಿಂದ ಮಡಿಕೇರಿಗೆ ಕೆಲಸಕ್ಕೆ ಬರುತ್ತಿದ್ದ ತಿಮ್ಮಯ್ಯ ತೇಜಸ್, ಶುಕ್ರವಾರ ಸಂಜೆ ೩.೩೦ ಗಂಟೆಯ ವೇಳೆಗೆ ಚೆಟ್ಟಳ್ಳಿಯ ಗ್ರಾಹಕರೊಬ್ಬರಿಗೆ ಪುಡ್ ಡೆಲಿವರಿ ಮಾಡಲು ತೆರಳುತ್ತಿದ್ದರು. ಈ ವೇಳೆ ಚೈನ್ ಗೇಟ್ ಬಳಿ ಅಪರಿಚಿತ ವಾಹನವೊಂದು ತಿಮ್ಮಯ್ಯ ತೇಜಸ್ ಅವರು ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿ ವಾಹನ ನಿಲ್ಲಿಸದೇ ಚಾಲಕ, ವಾಹನ ಸಹಿತ ಪರಾರಿಯಾಗಿದ್ದಾನೆ. ಇದೇ ವೇಳೆ ಆ ದಾರಿಯಲ್ಲಿ ಬರುತ್ತಿದ್ದ ಮಿನಾಜ್ ಪ್ರವೀಣ್ ಎಂಬ ಸಮಾಜ ಸೇವಕಿ ಗಾಯಾಳು ತಿಮ್ಮಯ್ಯ ತೇಜಸ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ಗಾಯಗೊಂಡು ರಕ್ತ ಸ್ರಾವದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣದ ಕುರಿತು ಮಡಿಕೇರಿ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಓರ್ವನ ಸಾವಿಗೆ ಕಾರಣವಾದ ವಾಹನ ಮತ್ತು ಅದರ ಚಾಲಕನ ಪತ್ತೆಗಾಗಿ ಪೊಲೀಸರು ಆ ಮಾರ್ಗದಲ್ಲಿರುವ ಸಿ.ಸಿ. ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಸ್ಥಳ ಮಹಜರು ನಡೆಸಿದ ಪೊಲೀಸರು ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Translate »