ವೃತ್ತಗಳಿಗೆ ಕಾರ್ಪೊರೇಟರ್‍ಗಳ ಹೆಸರು ನಾಮಕರಣ ಮಾಡದಂತೆ ಆಗ್ರಹ
ಮೈಸೂರು

ವೃತ್ತಗಳಿಗೆ ಕಾರ್ಪೊರೇಟರ್‍ಗಳ ಹೆಸರು ನಾಮಕರಣ ಮಾಡದಂತೆ ಆಗ್ರಹ

October 23, 2020

ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಪತ್ರ
ಮೈಸೂರು, ಅ.22-ಮೈಸೂರು ನಗರದ ಕೆಲವು ವೃತ್ತಗಳಿಗೆ ನಗರ ಪಾಲಿಕೆ ಸದಸ್ಯರ ಹಾಗೂ ಕೆಲವು ಮೃತಪಟ್ಟ ಗಣ್ಯರ ಹೆಸರಿಡುವ ಮೈಸೂರು ನಗರ ಪಾಲಿಕೆ ನಿರ್ಧಾರವನ್ನು ಬೆಂಗಳೂರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್.ಶೆಟ್ಟಿ ವಿರೋಧಿಸಿದ್ದಾರೆ.

ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪತ್ರ ಬರೆದಿರುವ ಅವರು, ಮೈಸೂರು ನಗರ ಪ್ರಖ್ಯಾತ ಪ್ರೇಕ್ಷಣೀಯ-ಸ್ಥಳವಾಗಿದ್ದು, ಪ್ರವಾಸಿಗರು ಪ್ರಪಂಚದಾದ್ಯಂತ ಮೈಸೂರಿಗೆ ಬರುವಂತಹ ಸ್ಥಳ. ನಗರ ಪಾಲಿಕೆ ಸದಸ್ಯರ ಹೆಸರಿಡುತ್ತಾ ಹೋದರೆ ಇನ್ನು ಐದು ವರ್ಷಗಳಲ್ಲಿ ಮೈಸೂರಿಗೆ ಹೊಸಹೊಸ ವೃತ್ತಗಳನ್ನು ಹುಡುಕಬೇಕಾಗುತ್ತದೆ. ಈಗಿರುವ ನಗರ ಪಾಲಿಕೆಯ ಸದಸ್ಯರುಗಳನ್ನು ಸಂತೋಷಪಡಿಸುವುದಕೋಸ್ಕರ ಈ ತರದ ಹೆಸರಿಡುವ ಸಂಸ್ಕೃತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಅದಕ್ಕಿಂತ ದೇಶದ ಪ್ರಮುಖರ ಅದರಲ್ಲೂ ಸ್ವಾತಂತ್ರ ಹೋರಾಟಗಾರರ ಹೆಸರಿಟ್ಟು ಅಂತಹ ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ಅಲ್ಲಿ ಸೂಕ್ತ ರೀತಿ ವಿವರಿಸಿದರೆ, ಹೊರದೇಶ, ರಾಜ್ಯ ಗಳಿಂದ ಬರುವ ಪ್ರವಾಸಿಗರಿಗೆ ಕರ್ನಾಟಕದ ಧೀಮಂತ ವ್ಯಕ್ತಿಗಳು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗ ವಹಿಸಿದ್ದರು ಎನ್ನುವ ಪರಿಚಯ ಮಾಡಿಕೊಟ್ಟಂತಾಗುವುದು.

ಇದರಿಂದ ದೇಶದ ಸ್ವಾತಂತ್ರ್ಯ ಸಮಯದಲ್ಲಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಕಾಣಿಕೆಯನ್ನು ಪ್ರಪಂಚಕ್ಕೆ ಪರಿಚಯಿಸಿದಂತಾಗು ತ್ತದೆ. ನಮ್ಮ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಬಿಟ್ಟರೆ ರಾಣಿ ಅಬ್ಬಕ್ಕ ನವರ ಹೆಸರು ಎಲ್ಲೂ ಕಾಣುತ್ತಿಲ್ಲ. ಕಾರ್ನಾಡ ಸದಾಶಿವರಾಯರು, ಡಾಕ್ಟರ್ ಎಂ.ಎಸ್.ಹರ್ಡೀಕರ್, ಗೋಪಾಲಕೃಷ್ಣ ಗೋಖಲೆ, ನಿಜಲಿಂಗಪ್ಪನವರು, ನಿಟ್ಟೂರು ಶ್ರೀನಿವಾಸ್ ರಾಯರು, ಆಲೂರು ವೆಂಕಟರಾವ್‍ರವರು, ಬಳ್ಳಾರಿಯ ಸುಬ್ರಮಣ್ಯಂ, ಸಂಗೊಳ್ಳಿ ರಾಯಣ್ಣ, ಉಮಾಬಾಯಿ ಕುಂದಾಪುರ, ಯಶೋಧರ ದಾಸಪ್ಪ, ವಿ.ಎನ್.ಓಕೆರು, ಕಮಲಾದೇವಿ ಚಟ್ಟೋಪಾಧ್ಯಾಯರು ಇನ್ನು ಅನೇಕ ಮಹನೀಯರ ಹೆಸರನ್ನು ಇಟ್ಟರೆ ಸಾಂಸ್ಕøತಿಕ ನಗರಕ್ಕೆ ಒಂದು ಗೌರವ ತಂದಂತಾಗುತ್ತದೆ. ನಮ್ಮಲ್ಲಿ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಧಕ ಸಾಹಿತಿಗಳಿದ್ದಾರೆ. ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತ ಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರ ಹೆಸರುಗಳನ್ನಿಡಬಹುದು. ಮೈಸೂರು ನಗರದ ವೃತ್ತ ಹಾಗೂ ರಸ್ತೆಗಳಿಗೆ ಈಗಾಗಲೇ ನಾಮಕರಣ ಮಾಡಲಾಗಿರುವ ಎಲ್ಲಾ ಹೆಸರುಗಳನ್ನು ಬದಲಾವಣೆ ಮಾಡಬೇಕು. ರಾಜ್ಯಕ್ಕೆ ಕೊಡುಗೆ ನೀಡಿದ, ಜ್ಞಾನಪೀಠ ಪ್ರಶಸ್ತಿ ಪಡೆದವರ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರ, ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಮಾತ್ರ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Translate »