ಮೈಸೂರು ಮಹಾನಗರ ಪಾಲಿಕೆಯಲ್ಲಿ ಪರಿಸರ ಸ್ನೇಹಿ `ಇ-ವಾಹನ’ಗಳ ಬಳಕೆ
ಮೈಸೂರು

ಮೈಸೂರು ಮಹಾನಗರ ಪಾಲಿಕೆಯಲ್ಲಿ ಪರಿಸರ ಸ್ನೇಹಿ `ಇ-ವಾಹನ’ಗಳ ಬಳಕೆ

October 12, 2022

ಮೈಸೂರು, ಅ.11- ಇಂಧನ ಮಿತವ್ಯಯದೊಂದಿಗೆ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ `ಇ-ವಾಹನ’ಗಳ ಬಳಕೆ ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ತ್ಯಾಜ್ಯ ಸಾಗಿಸಲು ಪ್ರಾಯೋಗಿಕ ವಾಗಿ 5 ಬ್ಯಾಟರಿ ಚಾಲಿತ ಆಟೋ ಟಿಪ್ಪರ್‍ಗಳನ್ನು ಬಳಸು ತ್ತಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು `ಇ-ವಾಹನ’ ಬಳಸಲು ಪಾಲಿಕೆ ಆಡಳಿತ ನಿರ್ಧರಿಸಿದೆ.

ಇಂಧನ ಬೆಲೆ ಹೆಚ್ಚಳದಿಂದ ತತ್ತರಿಸಿರುವ ಜನರಿಗೆ ಬ್ಯಾಟರಿ ಚಾಲಿತ `ಇ-ವಾಹನ’ಗಳು ವರದಾನವಾಗಿ ಪರಿಣಮಿಸುತ್ತಿದ್ದು, ಸರ್ಕಾರವೂ ಬ್ಯಾಟರಿ ಚಾಲಿತ ವಾಹನ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಸೆಸ್ಕ್ ವತಿಯಿಂದ ಮೈಸೂರು ವಿಭಾಗ ದಲ್ಲಿ 150 ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಖಾಸಗಿ ಸಹಭಾಗಿತ್ವದಲ್ಲೂ `ಇ-ವಾಹನ’ಗಳ ಚಾರ್ಜಿಂಗ್ ಕೇಂದ್ರ ಆರಂಭಿಸಲು ನಿರ್ಧರಿಸಿದೆ. ಜನರಿಗೆ ಬ್ಯಾಟರಿ ಚಾಲಿತ ವಾಹನಗಳ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು ಸರ್ಕಾರಿ ಕಚೇರಿಗಳಲ್ಲಿ ಇ-ವಾಹನ ಬಳಸಲು ನಿರ್ಧರಿಸಲಾಗಿದೆ. ಪ್ರಥಮ ಹಂತದಲ್ಲಿ ಚೆಸ್ಕಾಂ, ಎರಡು ಬ್ಯಾಟರಿ ಚಾಲಿತ ವಾಹನ ಬಳಸುವ ಮೂಲಕ ಇತರರಿಗೂ ಇ-ವಾಹನ ಬಳಕೆ ಕುರಿತಂತೆ ಸಂದೇಶ ರವಾನಿಸುತ್ತಿತ್ತು. ಇದೀಗ ಮೈಸೂರು ಮಹಾನಗರ ಪಾಲಿಕೆ ಬ್ಯಾಟರಿ ಚಾಲಿತ 5 ಆಟೋ ಟಿಪ್ಪರ್ ಖರೀದಿಸಿ, ಮೈಸೂರಲ್ಲಿ ತ್ಯಾಜ್ಯ ಸಾಗಿಸಲು ಬಳಸಲಾಗುತ್ತಿದೆ.

ಸರಾಗವಾಗಿ ಸಾಗುತ್ತಿರುವ ವಾಹನ: ಮೈಸೂರು ಮಹಾನಗರ ಪಾಲಿಕೆ ಖರೀದಿಸಿರುವ ಈ 5 ಇ-ವಾಹನಗಳನ್ನು ಆರಂಭದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಿಕೊಳ್ಳ ಲಾಗಿತ್ತು. ಇದೀಗ ಮೈಸೂರಿನ ಹೃದಯ ಭಾಗದಲ್ಲಿ ಸಂಗ್ರಹವಾಗುವ ನಾನಾ ತ್ಯಾಜ್ಯ ಸಾಗಿಸಲು ಬಳಸಲಾಗುತ್ತಿದೆ. ದೇವರಾಜ ಅರಸ್ ರಸ್ತೆ, ಕೆ.ಟಿ.ಸ್ಟ್ರೀಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಂಗ್ರಹವಾಗುವ ಕಸ ಸಾಗಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಚಾಲಿತ ಆಟೋ ಟಿಪ್ಪರ್‍ನಂತೆ ಅಷ್ಟೇ ಸಾಮಥ್ರ್ಯದ ಕಸವನ್ನು ಸರಾಗವಾಗಿ ಸಾಗಿಸುತ್ತಿ ರುವುದರಿಂದ ಪಾಲಿಕೆ ಅಧಿಕಾರಿಗಳಲ್ಲಿ ಭರವಸೆ ಮೂಡಿದೆ. ಕೇವಲ 4 ಗಂಟೆ ಚಾರ್ಜ್ ಮಾಡಿದರೆ, 80 ಕಿ.ಮೀ. ಸಂಚರಿಸುತ್ತಿರುವುದರಿಂದ ಸಾಕಷ್ಟು ಉಳಿತಾಯ ಮಾಡಬಹುದಾಗಿದೆ. ಹಾಗಾಗಿ ಇ-ವಾಹನಗಳ ಬಳಕೆ ಹೆಚ್ಚಿಸಲು ಪಾಲಿಕೆ ನಿರ್ಧರಿಸಿದೆ.

ನಿರ್ವಹಣೆಯೂ ಸುಲಭ: ಇಂಧನ ಚಾಲಿತ ವಾಹನಗಳ ನಿರ್ವಹಣೆ ಅಧಿಕ ದುಬಾರಿ. ಇಂಧನದ ಸೋರಿಕೆಯೂ ಆಗುತ್ತಿರುವುದರಿಂದ ಪಾಲಿಕೆಗೆ ಹೊರೆಯಾಗಿ ಪರಿಣಮಿ ಸುತ್ತಿದೆ. ಆದರೆ ಇ-ವಾಹನಗಳು ಇದುವರೆಗೂ ದೊಡ್ಡ ಪ್ರಮಾಣದಲ್ಲಿ ದುರಸ್ತಿಗೆ ಬರದೇ ಇರುವುದರಿಂದ ನಿರ್ವಹಣೆ ಸುಲಭ ಎಂಬ ಲೆಕ್ಕಾಚಾರಕ್ಕೆ ಪಾಲಿಕೆ ಬಂದಿದೆ.

ಇ-ವಾಹನದ ಮೇಲೆ ಒಲವು: ಇಂಧನ ಬೆಲೆ ಹೆಚ್ಚಳ ಹಾಗೂ ಮುಂಬರುವ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹು ದೆಂಬ ಲೆಕ್ಕಾಚಾರ ಹಾಕಿ, ಇದಕ್ಕೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯತ್ತ ಒಲವು ವ್ಯಕ್ತವಾಗಿದೆ. ಒಂದೆಡೆ ಸಿಎನ್‍ಜಿ ಅನಿಲದಿಂದ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ವಿದ್ಯುತ್ ಚಾಲಿತ ವಾಹನಗಳ ಬಳಕೆಯೂ ಹೆಚ್ಚಾಗುತ್ತಿದೆ. ಈಗಾಗಲೇ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಲಘು ವಾಹನಗಳು ಮಾರುಕಟ್ಟೆಗೆ ಲಗ್ಗೆ ಹಾಕಿದ್ದು, ವಿವಿಧ ವಿನ್ಯಾಸದಿಂದ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ವಿವಿಧ ಕಂಪನಿಗಳು ಪೈಪೋಟಿಗಿಳಿದಿವೆ. ಇದರಿಂದ ಮೈಸೂರು ಸೇರಿದಂತೆ ಜಿಲ್ಲೆಯಾದ್ಯಂತ ಇ-ವಾಹನಗಳ ಸಂಚಾರ ಹೆಚ್ಚಾಗಿದೆ.

Translate »