ಬಳಿಕ ಬೆಂಕಿಯಲ್ಲಿ ದಹಿಸಿ ನಾಶಪಡಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ
ಮೈಸೂರು, ಜು.19(ಪಿಎಂ)- ಮೈಸೂರಿನಲ್ಲಿ ಕೊರೊನಾ ಸೋಂಕು ದಿನೇ ದಿನೆ ವ್ಯಾಪಿಸುತ್ತಿದೆ. ಇದರ ನಡುವೆ ಬಳಸಿ ಬಿಸಾಡಿದ ಪಿಪಿಇ ಕಿಟ್‍ಗಳು ನಗರದ ರಮಾಬಾಯಿನಗರದ ಮುಖ್ಯ ರಸ್ತೆಬದಿ ಭಾನುವಾರ ಗೋಚರಿಸಿದ್ದು, ಕೆಲಕಾಲ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.
ಕೊರೊನಾ ಸೋಂಕಿತರ ಸೇವೆಗಾಗಿ ಅವರ ಸಮೀಪ ತೆರಳ ಬೇಕಾದ ಆರೋಗ್ಯ ಸಿಬ್ಬಂದಿಗಳಷ್ಟೇ ಹೆಚ್ಚಾಗಿ ಈ ಪಿಪಿಇ ಕಿಟ್‍ಗಳನ್ನು ಬಳಸುತ್ತಾರೆ. ಸೋಂಕು ಇರುವ ಶಂಕೆಯ ವ್ಯಕ್ತಿಗಳನ್ನು ತಪಾಸಣೆ ಮಾಡಬೇಕಾದ ಸಂದರ್ಭದಲ್ಲೂ ಮುನ್ನೆಚ್ಚರಿಕೆ ಕ್ರಮವಾಗಿ ಇಂಥ ಪಿಪಿಇ ಕಿಟ್ ಬಳಸುವುದುಂಟು. ಬಳಕೆ ಮಾಡಿದ ಪಿಪಿಇ ಕಿಟ್‍ಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಅವನ್ನು ವೈಜ್ಞಾನಿಕವಾಗಿಯೇ ವಿಲೇವಾರಿ ಮಾಡಬೇಕು. ಆದರೆ ಕೆಲವರು ಬಳಸಿದ ಪಿಪಿಇ ಕಿಟ್‍ಗಳನ್ನು ರಸ್ತೆಬದಿ ಬಿಸಾಡುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸುವುದು ಅಲ್ಲಲ್ಲಿ ನಡೆಯುತ್ತಲೇ ಇದೆ. ರಮಾಬಾಯಿನಗರದ ಮುಖ್ಯ ರಸ್ತೆಯ ಸೇತುವೆ ಬಳಿ ಗಾಳಿಯಲ್ಲಿ ಹಾರಾಡು ತ್ತಿದ್ದು, ಸೋಂಕು ವ್ಯಾಪಿಸುವ ಭೀತಿ ಮೂಡಿಸಿದ್ದವು. ಸ್ಥಳೀಯರು, ತಾಪಂ ಸದಸ್ಯ ಹನುಮಂತು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಕೂಡಲೇ ಹನುಮಂತು ಅವರು ತಾಲೂಕು ಆರೋಗ್ಯಾಧಿಕಾರಿ ಡಾ.ಮಹದೇವ ಪ್ರಸಾದ್ ಅವರಿಗೆ ದೂರ ವಾಣಿಯಲ್ಲಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಡಾ.ಮಹದೇವಪ್ರಸಾದ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ರಸ್ತೆಬದಿ ಬಿದ್ದಿದ್ದ ಬಳಸಿದ ಪಿಪಿಇ ಕಿಟ್‍ಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ ಒಂದೆಡೆ ಇಟ್ಟು ಬೆಂಕಿ ಹಚ್ಚಿ ನಾಶಪಡಿಸಿದರು. ಕೊರೊನಾ ವ್ಯಾಪಿಸುತ್ತಿರುವ ಸಂದರ್ಭ ಬಳಸಿದ ಪಿಪಿಇ ಕಿಟ್‍ಗಳನ್ನು ರಸ್ತೆಬದಿ ಎಸೆದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.