ಮೈಸೂರು, ಜೂ.19(ಎಂಟಿವೈ)- ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಮೈಸೂರಿಗೆ ಆಗಮಿ ಸುತ್ತಿರುವುದನ್ನು ಖಂಡಿಸಿ, ಗೋ ಬ್ಯಾಕ್ ಮೋದಿ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ ಎಡ ಪಕ್ಷಗಳು, ರೈತ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.
ಮೈಸೂರಿನ ಮಹಾತ್ಮಗಾಂಧಿ ವೃತ್ತದಲ್ಲಿರುವ ಗಾಂಧಿಜಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಕಾರ್ಯ ಕರ್ತರು `ಗೋ ಬ್ಯಾಕ್ ಮೋದಿ’ ಕೂಗುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು. ಮೋದಿ ಅವರು ಈ ಹಿಂದೆ ಮೈಸೂರಿಗೆ ಬಂದು ಭಾಷಣ ಮಾಡುವ ವೇಳೆ ಸಾಂಸ್ಕøತಿಕ ನಗರಿ ಮೈಸೂರನ್ನು ಪ್ಯಾರಿಸ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದರು. ಆ ಹೇಳಿಕೆ ಮೇಲೆ ವಿಶ್ವಾಸ ಇಟ್ಟ ಮೈಸೂರಿನ ಜನತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಆದರೆ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ 8 ಬಜೆಟ್ ಮಂಡನೆಯಾಗಿದೆ. ಆದರೆ ಅವರು ಮೈಸೂರಿಗೆ ಏನು ಕೊಡುಗೆ ನೀಡಿಲ್ಲ. ನೀಡಿದ್ದ ಭರವಸೆ ನೀಡುವುದಕ್ಕಾದರೂ ಯಾವುದೇ ಯೋಜನೆ ಪ್ರಕಟಿಸಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಸೇನಾ ನೇಮಕಾತಿ ಸಂಬಂಧ ಅಗ್ನಿಪಥ ಯೋಜನೆ ಕೈಬಿಡಬೇಕು. ಕಾರ್ಮಿಕ ವಿರೋಧಿಯೂ ಮಾಲೀಕರ ಪರವಾದ ನಾಲ್ಕು ಸಂಹಿತೆಗಳನ್ನು ಹಿಂಪಡೆಯಬೇಕು. ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಬೇಕು. ಇಂಧನ ಮತ್ತು ಅಡುಗೆ ಅನಿಲದ ಬೆಲೆ ಇಳಿಸಬೇಕು. ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ-ಪಂಗಡದ ಅನುದಾನ ಹೆಚ್ಚಳ ಮಾಡಬೇಕು. ನೂತನ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಕೆಲಕಾಲ ಪ್ರತಿಭಟನೆ ನಡೆಸಿದ ಬಳಿಕ ಸುಮಾರು 20ಕ್ಕೂ ಹೆಚ್ಚು ಪ್ರತಿಭಟನಾಕಾರರು ಪೊಲೀಸರು ಬಂಧಿಸಿದರು. ಬಳಿಕ ಸಿಎಆರ್ ಮೈದಾನಕ್ಕೆ ಕರೆದೊಯ್ದು ಎಲ್ಲರ ವಿಳಾಸ ಪಡೆದು ಬಿಡುಗಡೆ ಮಾಡಿದರು.
ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಉಗ್ರನರಸಿಂಹೇಗೌಡ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಎಸ್‍ಯುಸಿಐ ಜಿಲ್ಲಾ ಕಾರ್ಯದರ್ಶಿ ರವಿ, ಸದಸ್ಯೆ ಸಂಧ್ಯಾ, ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಅನಿಲ್‍ಕುಮಾರ್, ಜಯರಾಂ, ಮಹದೇವಯ್ಯ ಇನ್ನಿತರರು ಉಪಸ್ಥಿತರಿದ್ದರು.