ಸಾಂಪ್ರದಾಯಿಕ ಗಂಜೀಫಾ ಕಲೆಯಲ್ಲಿ ಅರಳಿದ  ರಾಮಾಯಣದ ನಾನಾ ಸನ್ನಿವೇಶಗಳು
ಮೈಸೂರು

ಸಾಂಪ್ರದಾಯಿಕ ಗಂಜೀಫಾ ಕಲೆಯಲ್ಲಿ ಅರಳಿದ  ರಾಮಾಯಣದ ನಾನಾ ಸನ್ನಿವೇಶಗಳು

November 16, 2018

ಮೈಸೂರು:  ರಾಷ್ಟ್ರಕವಿ ಕುವೆಂಪು ವಿರಚಿತ `ಶ್ರೀ ರಾಮಾಯಣ ದರ್ಶನಂ’ ರಂಗಪ್ರಸ್ತುತಿ ಅಂಗವಾಗಿ ರಂಗಾಯಣದ ಆವರಣದಲ್ಲಿ ಹಮ್ಮಿ ಕೊಂಡಿರುವ ರಾಮಾಯಣದ ನಾನಾ ರೋಚಕ ಸನ್ನಿವೇಶಗಳನ್ನು ಕಣ್ಮುಂದೆ ತರುವ ಕಲಾಕೃತಿಗಳ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಸಾಂಪ್ರದಾಯಿಕ ಗಂಜೀಫಾ ಕಲೆಯಲ್ಲಿ ಅಂತಾ ರಾಷ್ಟ್ರೀಯ ಖ್ಯಾತಿ ಗಳಿಸಿರುವ ಗಂಜೀಫಾ ರಘುಪತಿ ಭಟ್ ಕೈಚಳಕದಲ್ಲಿ ಈ ಕಲಾಕೃತಿಗಳು ಅರಳಿದ್ದು, ಇವರು 12 ಕಲಾಕೃತಿಗಳಲ್ಲಿ ರಾಮಾಯಣದ ಪ್ರಮುಖ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದಾರೆ.
ರಾಮ ಹಾಗೂ ರಾವಣನ ನಡುವಿನ ಕಾಳಗದ ರೋಚಕ ದೃಶ್ಯ, ವನವಾಸಕ್ಕೆ ಹೊರಟ ರಾಮ, ಲಕ್ಷ್ಮಣ ಹಾಗೂ ಸೀತೆಯು ಗಂಗಾನದಿಯಲ್ಲಿ ನವಿಲಿನ ವಿನ್ಯಾಸದ ದೋಣಿ ಯಲ್ಲಿ ಸಾಗುತ್ತಿರುವ ದೃಶ್ಯ ಸೇರಿದಂತೆ ರಾಮಾಯಣದ ನಾನಾ ಸಂಗತಿಗಳು ಅನಾವರಣಗೊಂಡಿವೆ. 6 ಫ್ಲೈವುಡ್‍ಗಳಲ್ಲಿ ಎರಡು ಬದಿಗಳಲ್ಲೂ ಚಿತ್ರಗಳನ್ನು ಮೂಡಿಸಲಾಗಿದ್ದು, ರಂಗಾಯಣದ ಉದ್ಯಾನವನದಲ್ಲಿ ಪ್ರದರ್ಶನಕ್ಕಿಡಲಾಗಿದೆ. 8×4 ಅಳತೆಯ ಫ್ಲೈವುಡ್ ಮೇಲೆ ಕಂದು ಬಣ್ಣದ ಹಿನ್ನೆಲೆಯಲ್ಲಿ ಈ ಚಿತ್ತಾರಗಳು ಅರಳಿದ್ದು, ಸುಮಾರು 12 ದಿನಗಳಲ್ಲಿ ಈ ಎಲ್ಲಾ ಕಲಾ ಕೃತಿಗಳನ್ನು ರಘುಪತಿ ಭಟ್ ಸಿದ್ಧಗೊಳಿಸಿದ್ದಾರೆ. ಬಿಳಿಯ ಬಳಪಗಳಿಂದ ಈ ಎಲ್ಲಾ ಚಿತ್ರಗಳನ್ನು ಮೂಡಿಸಿದ್ದಾರೆ.

ಬಿಲ್ಲುಗಾರಿಕೆ ಪಟುಗಳಾದ ಎಲ್.ದೀಕ್ಷಿತ್‍ರಾಜ್ ಹಾಗೂ ಕೆ.ವೆಂಕಟೇಶ್ ಪ್ರಸಾದ್ ಜೊತೆಗೂಡಿ ಬಾಣವನ್ನು ಹಾರಿಸುವ ಮೂಲಕ ಈ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ರಾಮಾಯಣದಲ್ಲಿ ರಾಮನ ಅಸ್ತ್ರ ಬಿಲ್ಲು-ಬಾಣವಾಗಿದ್ದ ಹಿನ್ನೆಲೆಯಲ್ಲಿ ಈ ರೀತಿಯ ಪರಿ ಕಲ್ಪನೆಯಲ್ಲಿ ವಿಭಿನ್ನವಾಗಿ ಚಾಲನೆ ನೀಡಲಾಯಿತು.

ನೇಪಥ್ಯ ರಾಮಾಯಣ: ಶ್ರೀರಾಮಾಯಣ ದರ್ಶನಂ ರಂಗಪ್ರಸ್ತುತಿಯ ಕಲಾವಿದರ ನೇಪಥ್ಯದಲ್ಲಿನ ರಂಗ ಚಟುವಟಿಕೆ ಹವ್ಯಾಸದ ದೃಶ್ಯಾವಳಿಗಳು ಹಾಗೂ ಜನ ಸಾಮಾನ್ಯನಾಗಿ ರಾಮ ಯಾವ ರೀತಿ ಇರಬಹುದು ಎಂಬ ಪರಿಕಲ್ಪನೆಯಲ್ಲಿ `ನೇಪಥ್ಯ ರಾಮಾಯಣ’ ಶೀರ್ಷಿಕೆ ಯಡಿ ಚಿತ್ರಕಲೆಯನ್ನು ಮೂಡಿಸಲಾಗಿದೆ.

ಸುಮಾರು 35×4 ಅಡಿ ಅಳತೆಯ ಫ್ಲೈವುಡ್‍ನಲ್ಲಿ ಈ ಬಗೆಯ ಚಿತ್ರಕಲೆಯನ್ನು ರಂಗಾಯಣದ ವಿನ್ಯಾಸಕ ಹೆಚ್.ಕೆ. ದ್ವಾರಕನಾಥ್ ತಮ್ಮ ಕುಂಚದ ಮೂಲಕ ಅರಳಿಸಿದ್ದಾರೆ. ಈ `ನೇಪಥ್ಯ ರಾಮಾಯಣ’ದ ಚಿತ್ರಕಲೆಯನ್ನು ಪತ್ರಿಕಾ ಛಾಯಾಗ್ರಾಹಕ ನೇತ್ರರಾಜು ಅನಾವರಣಗೊಳಿಸಿದರು.

ಕುಟೀರದಲ್ಲಿ ಕುವೆಂಪು ದರ್ಶನ: ಈ ವಿಶೇಷತೆ ಗಳೊಂದಿಗೆ ರಾಷ್ಟ್ರಕವಿ ಕುವೆಂಪು ಹಾಗೂ ಅವರ ಕುಟುಂಬ ಸದಸ್ಯರ ಹಲವು ಛಾಯಾಚಿತ್ರಗಳನ್ನು ಇಲ್ಲಿನ ಕುಟೀರದಲ್ಲಿ ಪ್ರದರ್ಶನ ಮಾಡುವ ಮೂಲಕ ವಿಶ್ವ ಮಾನವ ಸಂದೇಶ ನೀಡಿದ ಕುವೆಂಪು ಅವರ ಮೇರು ವ್ಯಕ್ತಿತ್ವದ ದರ್ಶನ ಮಾಡಿಸಲಾಗಿದೆ. ಗಂಜೀಫಾ ಕಲಾ ವಿದ ರಘುಪತಿಭಟ್, ರಾಜ್ಯ ಮಟ್ಟದ ಬಿಲ್ಲುಗಾರಿಕೆ ತರಬೇತುದಾರ ಬಿ.ಎಂ.ಅನಿಲ್‍ಕುಮಾರ್, ರಂಗಾ ಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ರಂಗ ಕಲಾವಿದ ಪ್ರಶಾಂತ ಹಿರೇಮಠ ಮತ್ತಿತರರು ಹಾಜರಿದ್ದರು.

Translate »