ಗ್ರಾಪಂ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲೇ ವರುಣಾ ಕ್ಷೇತ್ರದಲ್ಲಿ   ಅತೀ ಹೆಚ್ಚು ಕಾಂಗ್ರೆಸ್ ಬೆಂಬಲಿತರ ಆಯ್ಕೆ
ಮೈಸೂರು

ಗ್ರಾಪಂ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲೇ ವರುಣಾ ಕ್ಷೇತ್ರದಲ್ಲಿ  ಅತೀ ಹೆಚ್ಚು ಕಾಂಗ್ರೆಸ್ ಬೆಂಬಲಿತರ ಆಯ್ಕೆ

January 14, 2021

ಮೈಸೂರು, ಜ.12 (ಆರ್‍ಕೆಬಿ)- ಗ್ರಾಮ ಪಂಚಾಯಿತಿ ಚುನಾ ವಣೆಗಳಲ್ಲಿ ಮೈಸೂರು ಜಿಲ್ಲೆಯಲ್ಲಿಯೇ ವರುಣಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ ಎಂದು ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.

ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರ ದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ನೂತನ ಗ್ರಾಪಂ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಕ್ಷೇತ್ರದ 602 ಗ್ರಾಪಂ ಸದಸ್ಯ ಸ್ಥಾನಗಳ ಪೈಕಿ 426 ಮಂದಿ ಆಂದರೆ ಶೇ.70ರಷ್ಟು ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ವರುಣಾ ಕಾಂಗ್ರೆಸ್‍ನ ಭದ್ರಕೋಟೆ ಎಂಬುದನ್ನು ಮತದಾರರು ಸಾಬೀತು ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ಮತ್ತು ಶಾಸಕನಾಗಿ ನಾನು ಕೊಟ್ಟ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಪ್ಪಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಬೆಂಬಲಿತರ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಹಾಗಾಗಿ ಸದಸ್ಯರ ಜವಾಬ್ದಾರಿ ಈಗ ಹೆಚ್ಚಾಗಿದ್ದು, ಮುಂಬರುವ ಜಿಪಂ, ತಾಪಂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪರ ಕೆಲಸಗಳನ್ನು ಮಾಡುವಂತೆ ನೂತನ ಗ್ರಾಪಂ ಸದಸ್ಯರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಬಿಜೆಪಿಯವರಿಗೆ ಸಾಮಾಜಿಕ ನ್ಯಾಯ, ವಿಕೇಂದ್ರೀಕರಣ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಬಿಜೆಪಿ ಬಂದ ನಂತರ ಪ್ರಧಾನಿ ನರೇಂದ್ರಮೋದಿಯವ ರಾಗಲೀ, ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲೀ ಯಾವುದೇ ಹೊಸ ಕಾರ್ಯಕ್ರಮಗಳನ್ನು ನೀಡಿಲ್ಲ. ಬದಲಾಗಿ ಕಾಂಗ್ರೆಸ್ ನೀಡಿದ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಹಸಿವು ಮುಕ್ತ ರಾಜ್ಯದ ಚಿಂತನೆಯಡಿ ಸಿದ್ದರಾಮಯ್ಯನವರು `ಅನ್ನಭಾಗ್ಯ’ ಯೋಜನೆಯಡಿ ಪ್ರತಿಯೊಬ್ಬರಿಗೂ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದಾರೆ. ಹಾಗಾಗಿ ಜನರು ತಮ್ಮಲ್ಲಿರುವ ಕೋಪವನ್ನು ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೀರಿಸಿಕೊಂಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ನೂತನ ಗ್ರಾಪಂ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಬಳಿಕ ಗ್ರಾಪಂವಾರು ಗ್ರಾಪಂ ಸದಸ್ಯರನ್ನು ವೇದಿಕೆಗೆ ಕರೆದು ಕೂರಿಸಿ, ಅವರಿಗೆ ಸಿದ್ದರಾಮಯ್ಯ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ವರುಣಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಮುಖಂಡ ವರುಣಾ ಮಹೇಶ್, ಪಿಎಲ್‍ಡಿ ಬ್ಯಾಂಕ್ ಸದಸ್ಯ ಮಹದೇವಯ್ಯ, ಜಿಪಂ ಸದಸ್ಯೆ ಲತಾ ಸಿದ್ದಶೆಟ್ಟಿ, ಯುವ ಕಾಂಗ್ರಸ್ ಮೊಹಿಸಿನ್ ಖಾನ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಮತ್ತು ಆರ್‍ಟಿಇ ಘಟಕದ ರಾಜ್ಯ ಕಾರ್ಯದರ್ಶಿ ಸವಿತಾ ಕಾಳೆ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಸಿ.ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.

 

 

Translate »