ಪರಿಷತ್ ಚುನಾವಣೆಗೆ ಸ್ಪರ್ಧಿಸಲು ವಾಟಾಳ್ ನಿರ್ಧಾರ
ಮೈಸೂರು

ಪರಿಷತ್ ಚುನಾವಣೆಗೆ ಸ್ಪರ್ಧಿಸಲು ವಾಟಾಳ್ ನಿರ್ಧಾರ

November 21, 2021

ಮೈಸೂರು,ನ.20(ಎಂಟಿವೈ)-ಮೈಸೂರು-ಚಾಮರಾಜ ನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ನ ದ್ವಿಸದಸ್ಯತ್ವ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಮೈಸೂರಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಕರ್ನಾಟಕ ವಿಧಾನಪರಿಷತ್‍ನ ಪಕ್ಷೇತರ ಅಭ್ಯರ್ಥಿಯಾಗಿ ನ.23ರಂದು ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಕಳೆದ ಹಲವು ವರ್ಷಗಳಿಂದ ಕನ್ನಡದ ಭಾಷೆ ಉಳಿವಿಗಾಗಿ, ನಾಡು, ನುಡಿ, ಜಲ ಸಂರಕ್ಷಣೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಹಿನ್ನೆಲೆ ಯಲ್ಲಿ ನನ್ನ ಒಡನಾಟ ಇರುವ ಮೈಸೂರು, ಚಾಮ ರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.

ಚಿನ್ನ, ಬೆಳ್ಳಿ ವ್ಯಾಪಾರಿಗಳು ಅಥವಾ ರಿಯಲ್ ಎಸ್ಟೇಟ್ ಮಾಡುವವರಿಗಲ್ಲ ವಿಧಾನಪರಿಷತ್ ಸದಸ್ಯ ಸ್ಥಾನ. ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಬುದ್ಧ ರಾಜಕಾರಣಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ಬೇಕಾದವರು. ಅವರ ಸಹಕಾರ ಸಿಗಬಹುದು ಎಂಬ ನಿರೀಕ್ಷೆಯಿದೆ. ಇತರರಿಗೂ ಬೆಂಬಲ ನೀಡುವಂತೆ ಕೋರಿದ್ದೇನೆ. ವಿಧಾನಪರಿಷತ್‍ನ 25 ಸ್ಥಾನಗಳಿಗೆ ಡಿ.10ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ನನಗೆ ಬೆಂಬಲ ಕೊಟ್ಟರೆ ನಿಮಗೂ (ಕಾಂಗ್ರೆಸ್)-ನನಗೂ ಅನುಕೂಲವಾಗುತ್ತದೆ. ಈ ಮಾತನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರ ಕೊಡಿ ಎಂದು ಮನವಿ ಮಾಡಿದ್ದೇನೆ. ಚುನಾವಣೆಗೆ ನಿಂತ ಎಲ್ಲರಿಗೂ ನೀವು ಮತ ಹಾಕಿ. ಒಂದೇ ಒಂದು ಮತ ಹಾಕಿ ಎಂದರೆ ಅದನ್ನು ಮಾಡಬೇಡಿ ಎಂದರು.

Translate »