ವಾಹನಗಳ ನೋಂದಣಿ ಶುಲ್ಕ ಹೆಚ್ಚಳ
ಮೈಸೂರು

ವಾಹನಗಳ ನೋಂದಣಿ ಶುಲ್ಕ ಹೆಚ್ಚಳ

April 8, 2022

ಮೈಸೂರು,ಏ.7(ಜಿಎ)-ದೇಶಾದ್ಯಂತ ದಿನಸಿ ಪದಾರ್ಥ, ಪೆಟ್ರೋಲ್-ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು, ಇದರ ನಡುವೆಯೇ ಹೊಸ ವಾಹನಗಳ ನೋಂದಣಿ ಮತ್ತು ಹಳೆ ವಾಹನಗಳ ಮರು ನೋಂದಣಿ ಮತ್ತು ಫಿಟ್‍ನೆಸ್ ಸರ್ಟಿಫಿಕೇಟ್ (ಎಫ್‍ಸಿ) ಶುಲ್ಕ ಕೂಡ ಹೆಚ್ಚಳವಾಗಿದ್ದು, ಏ.1ರಿಂದ ಜಾರಿಗೆ ಬಂದಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಅದರಂತೆ ಎಲ್ಲಾ ಬಗೆಯ ವಾಹನಗಳ ನೋಂದಣಿ ಮತ್ತು 15 ವರ್ಷ ಮೇಲ್ಪಟ್ಟ ಖಾಸಗಿ ಮತ್ತು ವಾಣಿಜ್ಯ ವಾಹನಗಳ ಸುರಕ್ಷತಾ ಪ್ರಮಾಣಪತ್ರ(ಎಫ್‍ಸಿ) ನವೀಕರಣ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಲಾಗಿದ್ದು, ಇದು ವಾಹನ ಸವಾರರಿಗೆ ಹೊರೆಯಾಗಿದೆ.

ಹೊಸ ವಾಹನಗಳ ನೋಂದಣಿ ಶುಲ್ಕ: ಹೊಸ ವಾಹನಗಳ ನೋಂದಣಿ ಶುಲ್ಕ ಹೆಚ್ಚಳವಾಗಿದ್ದು, ಅದ ರಂತೆ ದ್ವಿಚಕ್ರ ವಾಹನ ನೋಂದಣಿ 300 ರೂ., ತ್ರಿಚಕ್ರ ವಾಹನ 600 ರೂ., ಲಘು ಮೋಟಾರ್ ವಾಹನಗಳಿಗೆ (ಕಾರು ಅಥವಾ ಜೀಪ್) 600 ರೂ., ಲಘು ಸರಕು ಸಾಗಣೆ, ಪ್ರಯಾಣಿಕರ ವಾಹನಗಳಿಗೆ (ಮ್ಯಾಕ್ಸಿ ಕ್ಯಾಬ್) 1000 ರೂ., ಭಾರೀ ಸರಕು ಸಾಗಣೆ ಮತ್ತು ಪ್ರಯಾಣಿಕರ ವಾಹನಗಳ ನೋಂದಣಿಗೆ 1500 ರೂ. ಹಾಗೂ ಆಮದು ಮಾಡಿ ಕೊಂಡಿರುವ ವಾಹನಗಳಿಗೆ 5 ಸಾವಿರ ರೂ. ನಿಗದಿಪಡಿಸಲಾಗಿದೆ.

ನೋಂದಣಿ ನವೀಕರಣ ಪ್ರಮಾಣಪತ್ರ ವಾಹನಗಳಿಗೆ: ನೋಂದಣಿ ನವೀಕರಣಕ್ಕಾಗಿ ದ್ವಿಚಕ್ರ ವಾಹನ 1000 ರೂ., ತ್ರಿಚಕ್ರ ವಾಹನ 2500 ರೂ., ಲಘು ಮೋಟಾರ್ ವಾಹನಗಳಿಗೆ (ಕಾರು ಅಥವಾ ಜೀಪ್) 5000 ರೂ., ಆಮದು ಮಾಡಿಕೊಂಡಿರುವ ಕಾರಿಗೆ 10,000 ರೂ., ಮತ್ತು ಇತರೇ ವಾಹನಗಳಿಗೆ 6000 ರೂ. ಗಳನ್ನು ನಿಗದಿಪಡಿಸಲಾಗಿದೆ. ನಿಗದಿತ ಸಮಯದಲ್ಲಿ ವಾಹನ ನೋಂದಣಿ ನವೀಕರಣ ಪ್ರಮಾಣಪತ್ರ ಪಡೆಯಲು ದಾಖಲೆಗಳನ್ನು ಸಲ್ಲಿಸಲು ವಿಳಂಬ ಮಾಡಿದರೆ, ಪ್ರತಿ ತಿಂಗಳಿನಂತೆ ದ್ವಿಚಕ್ರ ವಾಹನಕ್ಕೆ 300 ರೂ., ಮತ್ತು ಲಘು ಮೋಟಾರ್ ವಾಹನಗಳಿಗೆ (ಕಾರು ಅಥವಾ ಜೀಪ್) 500 ರೂ., ದಂಡ ಶುಲ್ಕ ವಿಧಿಸಲಾಗುತ್ತದೆ.

15 ವರ್ಷದ ಹಳೆಯ ವಾಹನಗಳಿಗೆ(ಎಫ್‍ಸಿ): 15 ವರ್ಷ ಹಳೆಯ ವಾಹನಗಳ ಶುಲ್ಕ ಕೂಡ ಹೆಚ್ಚಳವಾಗಿದೆ. ದ್ವಿಚಕ್ರ ವಾಹನಕ್ಕೆ 400 ರೂ., ಸ್ವಯಂಚಾಲಿತ ವಾಹನಕ್ಕೆ 500 ರೂ., ತ್ರಿಚಕ್ರ ವಾಹನಕ್ಕೆ 800 ರೂ., ಸ್ವಯಂಚಾಲಿತ ವಾಹನಕ್ಕೆ 1000 ರೂ,. ನಿಗದಿ ಪಡಿಸಲಾಗಿದೆ. ಲಘು ಸರಕು ಸಾಗಣೆ, ಪ್ರಯಾಣಿಕರ ಮತ್ತು ಭಾರೀ ಸರಕು ಸಾಗಣೆ, ಪ್ರಯಾಣಿಕರ ವಾಹನಕ್ಕೆ 800 ರೂ., ಸ್ವಯಂ ಚಾಲಿತ ವಾಹನಕ್ಕೆ 1300 ರೂ,. ನಿಗದಿಪಡಿಸಲಾಗಿದೆ. ಭಾರೀ ಸರಕುಗಳ ವಾಹನ ಮತ್ತು ಭಾರೀ ಪ್ರಯಾಣಿಕ ವಾಹನಗಳಿಗೆ 1000 ರೂ., ಸ್ವಯಂಚಾಲಿತ ವಾಹನಕ್ಕೆ 1500 ರೂ,. ನಿಗದಿಪಡಿಸಲಾಗಿದೆ.ಎಫ್‍ಸಿ ನವೀಕರಣ ಶುಲ್ಕ : ದ್ವಿಚಕ್ರ ವಾಹನಕ್ಕೆ 1000 ರೂ., ತ್ರಿಚಕ್ರ ವಾಹನಗಳಿಗೆ 3500 ರೂ., ಕಾರುಗಳಿಗೆ 7500 ರೂ., ಲಘು ಸರಕು ಸಾಗಣೆ, ಪ್ರಯಾಣಿಕರ ಮತ್ತು ಭಾರೀ ಸರಕು ಸಾಗಣೆ, ಪ್ರಯಾಣಿಕರ ವಾಹನ ಗಳಿಗೆ 10,000 ರೂ., ಮತ್ತು ಭಾರೀ ಸರಕುಗಳ ವಾಹನ ಮತ್ತು ಭಾರೀ ಪ್ರಯಾಣಿಕ ವಾಹನಗಳಿಗೆ 12,000 ರೂ., ನಿಗದಿಪಡಿಸಲಾಗಿದೆ. ವಾಹನಗಳ ಎಫ್‍ಸಿ ಅವಧಿ ಮೀರಿದರೂ ನವೀಕರಣ ಮಾಡಿಕೊಳ್ಳಲು ವಿಳಂಬ ಮಾಡಿದ್ದರೇ, ವಾಹನದ ಎಫ್‍ಸಿ ಅವಧಿ ಮುಕ್ತಾಯ ವಾದ ದಿನದಿಂದ ಪ್ರತಿದಿನ 50 ರೂ. ಗಳ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

Translate »