ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಗೆ `ರಜತ’ ಸಂಭ್ರಮ
ಮೈಸೂರು

ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಗೆ `ರಜತ’ ಸಂಭ್ರಮ

November 27, 2018

ಮೈಸೂರು:  ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ `ರಜತ ಮಹೋತ್ಸವ’ ನ.28ರಂದು ಬೆಳಿಗ್ಗೆ 10ಕ್ಕೆ ಮೈಸೂರು -ಬನ್ನೂರು ಮುಖ್ಯ ರಸ್ತೆಯಲ್ಲಿರುವ ಸಂಸ್ಥೆಯ ಕ್ರೀಡಾಂಗಣದಲ್ಲಿ ನೆರವೇರಲಿದ್ದು, ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಸು ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1983ರಿಂದ 89ರವರೆಗೆ ಮೈಸೂರಿನಲ್ಲಿ ಶಿಕ್ಷಣ ಪಡೆಯಲು ಬೇಡಿಕೆ ಇತ್ತಾದರೂ ಶಿಕ್ಷಣ ಸಂಸ್ಥೆಗಳ ಕೊರತೆಯಿತ್ತು. ಈ ಹಿನ್ನೆಲೆಯಲ್ಲಿ ಹಲವು ಹಿತೈಷಿಗಳ ಸಲಹೆಯ ಮೇರೆಗೆ 1991ರಲ್ಲಿ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ಪಾಲಿಟೆಕ್ನಿಕ್ ಕಾಲೇಜನ್ನು ಆರಂಭಿಸಲಾಯಿತು. ಬಳಿಕ ಹಂತಹಂತವಾಗಿ ನರ್ಸರಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್, ಹೋಟೆಲ್ ಮ್ಯಾನೇಜ್‍ಮೆಂಟ್, ಬಿಇಡಿ, ಕಂಪ್ಯೂಟರ್ ಅಪ್ಲಿಕೇಷನ್, ಎಂಬಿಎ, ಎಂಎಸ್‍ಡಬ್ಲ್ಯೂ, ಕಾನೂನು ಪದವಿ, ಎಂಟಿಎ ಶಿಕ್ಷಣ ಆರಂಭಿಸಲಾಯಿತು. ಪ್ರಸ್ತುತ ಸಂದರ್ಭದಲ್ಲಿ 18 ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಒಂದು ಜಾತಿಗೆ ಸೀಮಿತವಾಗದೆ ಸಮಾಜದ ಎಲ್ಲಾ ವರ್ಗದವರಿಗೂ ಕೈಗೆಟಕುವ ಶುಲ್ಕದಲ್ಲಿ ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲ ಉದ್ದೇಶ ಹೊಂದಿರುವ ಸಂಸ್ಥೆಯಲ್ಲಿ ಮೈಸೂರು ನಗರ, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಿಂದ ಬಡ ಕುಟುಂಬದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯು ತ್ತಿದ್ದಾರೆ. ಮೂಲ ಸೌಲಭ್ಯಗಳು, ಗುಣಮಟ್ಟದ ಗ್ರಂಥಾ ಲಯಗಳು, ನುರಿತ ಮತ್ತು ಅನುಭವವುಳ್ಳ ಅಧ್ಯಾಪಕ ವರ್ಗ, ವಸತಿ ನಿಲಯ ಹೊಂದಿರುವ ಈ ಸಂಸ್ಥೆ ಯಲ್ಲಿ 5700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ನ.28ರಂದು ರಜತ ಮಹೋತ್ಸವ: ಮೈಸೂರು-ಬನ್ನೂರು ಮುಖ್ಯ ರಸ್ತೆಯಲ್ಲಿರುವ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನ.28ರಂದು ಬೆಳಿಗ್ಗೆ 10ಕ್ಕೆ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ದಲ್ಲಿ ನಡೆಯಲಿರುವ ರಜತ ಮಹೋತ್ಸವದ ಸಮಾ ರಂಭವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ ಸಭಾಂಗಣ ಉದ್ಘಾ ಟಿಸಲಿದ್ದಾರೆ. ಅತಿಥಿಗಳಾಗಿ ಸಂಸದ ಪ್ರತಾಪಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕರಾದ ತನ್ವೀರ್ ಸೇಠ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಮಂಡ್ಯ ಪಿಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಹೆಚ್.ಡಿ. ಚೌಡಯ್ಯ, ದಕ್ಷಿಣ ಕನ್ನಡದ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ಡಾ.ಕೆ.ವಿ.ಚಿದಾ ನಂದ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು.

ಅಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ಮಠದ ಡಾ. ನಿರ್ಮಲಾ ನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮಾರೋಪ ಭಾಷಣ ಮಾಡುವ ಕಾರ್ಯಕ್ರಮದಲ್ಲಿ ಸಂಸದ ಆರ್. ಧ್ರುವನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಸಾ.ರಾ.ಮಹೇಶ್, ಶಾಸಕರಾದ ಸಂದೇಶ್ ನಾಗ ರಾಜ್, ಆರ್.ಧರ್ಮಸೇನ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಗುಣಮಟ್ಟದ ಶಿಕ್ಷಣ ಗುರಿ: ಸಂಸ್ಥೆ ಕಾರ್ಯದರ್ಶಿ ವಿ.ಕವೀಶ್‍ಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡುವುದೇ ನಮ್ಮ ಸಂಸ್ಥೆಯ ಆದ್ಯತೆಯಾಗಿದೆ. ವಿದ್ಯಾರ್ಥಿಗಳಿಗೆ ಬದುಕು ರೂಪಿಸಿಕೊಳ್ಳುವು ದಕ್ಕೆ ಅಗತ್ಯವಾಗಿರುವ ಕೋರ್ಸ್‍ಗಳನ್ನು ನಡೆಸಲಾಗುತ್ತಿದೆ. ಕೆಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಮಾನವೀಯತೆಯ ಗುಣವನ್ನು ಬೆಳೆಸುವುದಕ್ಕಾಗಿ `ಹ್ಯೂಮನಿಟಿ’ ಸರ್ಟಿಫಿಕೇಟ್ ಕೋರ್ಸ್, ಸೋಷಿಯಲ್ ವಕ್ರ್ಸ್ ಎಂಬ ಕೋರ್ಸ್ ನಡೆಸಿ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುತ್ತಿದ್ದೇವೆ. ಸಂಶೋಧನೆಗೆ ಅವಕಾಶ ನೀಡಲಾಗಿದೆ. ಸಂಶೋಧನೆ ಎಂದರೆ ಕೇವಲ ಪಿಹೆಚ್.ಡಿ ಪಡೆಯುವುದು ಎಂಬ ಅರ್ಥ ಕೆಲವರಲ್ಲಿದೆ. ಆದರೆ ಸಮಾಜದ ಏಳಿಗೆಗೆ ಪೂರಕ ವಾದ ಸಂಶೋಧನೆ ನಡೆಸುವುದಕ್ಕೆ ನಮ್ಮ ಸಂಸ್ಥೆಯಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು .

Translate »