ಬೆಟ್ಟದಪುರ: ಡೆತ್‍ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ನಡೆದಿದೆ.
ನಾಗನಹಳ್ಳಿ ದೊಡ್ಡೆಗೌಡನಕೊಪ್ಪಲು ಗ್ರಾಮದ ನಿವಾಸಿ, ಪಿಯು ವಿದ್ಯಾರ್ಥಿನಿ ಡಿ.ಎಲ್.ವೀಣಾ(17) ಹಾಗೂ ಕೆಳಗನಹಳ್ಳಿ ದೊಡ್ಡಕೊಪ್ಪಲು ನಿವಾಸಿ ಕೆ.ಎನ್.ಸ್ವಾಮಿ (22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಈ ಇಬ್ಬರೂ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಟಿಬೇಟಿಯನ್ ಬಾವುಟ ಕಟ್ಟಲು ಬಳಸಿದ್ದ ಹಗ್ಗದಿಂದ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರದಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ದೇವರ ದರ್ಶನಕ್ಕಾಗಿ ಕುಟುಂಬದ ಸದಸ್ಯರೊಂದಿಗೆ ಬೆಟ್ಟ ಹತ್ತುತ್ತಿದ್ದ ವೇಳೆಯಲ್ಲಿ ಪ್ರೇಮಿಗಳು ನೇಣಿಗೆ ಶರಣಾ ಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಬೆಟ್ಟದಪುರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಡೆತ್‍ನೋಟ್ ಬರೆದಿಟ್ಟ ಪ್ರೇಮಿಗಳು: ಇಬ್ಬರೂ ಒಂದೇ ಪುಟದಲ್ಲಿ ಡೆತ್‍ನೋಟ್ ಬರೆದಿಟ್ಟು ಸಾವಿಗೀಡಾಗಿದ್ಧಾರೆ. ಡೆತ್‍ನೋಟ್ ನಲ್ಲಿ ಡಿ.ಎಲ್.ವೀಣಾ, ಮನೆಯವರು ಮತ್ತು ಸ್ನೇಹಿತರನ್ನು ಮಿಸ್‍ಮಾಡಿಕೊಳ್ಳು ತ್ತಿದ್ದೇನೆ. ನಾವು ಸತ್ತ ನಂತರ ಇಬ್ಬರನ್ನು ಒಟ್ಟಿಗೆ ಕೆ.ಎನ್.ಸ್ವಾಮಿ ಊರಿನಲ್ಲಿಯೇ ಸುಡಬೇಕು. ಇದು ನನ್ನ ಆಸೆ ಎಂದು ತಿಳಿ ಸಿದ್ದರೆ, ಕೆ.ಎನ್.ಸ್ವಾಮಿ ಇದೇ ಪುಟದಲ್ಲಿ ಮನೆಯವರನ್ನೆಲ್ಲಾ ಚೆನ್ನಾಗಿನೋಡಿಕೊಳ್ಳಿ. ಅವ್ವ ನೀನು ಹೇಳುತ್ತಿದ್ದೇ… ನನ್ನ ಮಗ ಹೀರೋ ತರ ಕಾಣುತ್ತಾನೆ ಅಂತ. ಇನ್ನು ಮುಂದಿನ ಜನ್ಮ ಅಂತಾ ಇದ್ದರೆ ನಿನ್ನ ಹೊಟ್ಟೆ ಯಲ್ಲಿಯೇ ಹುಟ್ಟಿ ಬರುತ್ತೀನಿ ಎಂದಿದ್ದಾರೆ.
ಅಂತಿಮವಾಗಿ ನಮ್ಮ ಸಾವಿನ ಬಗ್ಗೆ ಚಿಂತಿಸಬೇಡಿ. ಎರಡು ಕುಟುಂಬದವರೂ ಒಳ್ಳೆಯವರೇ. ನಮ್ಮ ಇಷ್ಟದಂತೆ ಇದ್ದಾರೆ. ಆದರೆ ನಾವೇ ಅರ್ಥಮಾಡಿಕೊಳ್ಳದೇ ಸಾಯುತ್ತಿದ್ದೇವೆ ಎಂದು ಇಬ್ಬರೂ ಕೊನೆ ಯಲ್ಲಿ ಸಹಿ ಮಾಡಿದ್ದಾರೆ. ಈ ಡೆತ್ ನೋಟ್ ಒಂದೇ ಕೈಬರಹದಲ್ಲಿದ್ದು, ಸಹಿ ಮಾತ್ರ ಬೇರೆಯಾಗಿವೆ.
ಬೆಟ್ಟದಪುರ ಪಿಯು ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ಡಿ.ಎಲ್.ವೀಣಾ ಮತ್ತು ಪಶುಪಾಲನೆ ಇಲಾಖೆಯಲ್ಲಿ ಕೃತಕ ಗರ್ಭಧಾರಣೆ ಕೆಲಸ ಮಾಡಿಕೊಂಡಿದ್ದ ಕೆ.ಎನ್.ಸ್ವಾಮಿಗೂ ಪ್ರೇಮವಾಗಿದ್ದು, ಇಬ್ಬರು ಹತ್ತಿರದ ಸಂಬಂಧಿಗಳೇ ಆಗಿದ್ದಾರೆ. ಆದರೆ ಪ್ರೀತಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಕುಟುಂಬಗಳು ತಿಳಿಸಿವೆ. ಒಟ್ಟಾರೇ ಪ್ರೇಮಿಸಿ ಇಬ್ಬರು ಸಾವನ್ನಪ್ಪಿರುವುದು ಎರಡು ಕುಟುಂಬಗಳಿಗೂ ತೀವ್ರ ಆಘಾತ ತಂದಿದೆ. ಪಿರಿಯಾಪಟ್ಟಣ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ವಾರಸು ದಾರರಿಗೆ ಒಪ್ಪಿಸಲಾಯಿತು. ಬೆಟ್ಟದಪುರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.