3 ಗ್ರಾಮಗಳ 244 ಕುಟುಂಬಗಳಿಗೆ ಪಡಿತರ ಸಮಸ್ಯೆ
ಮೈಸೂರು

3 ಗ್ರಾಮಗಳ 244 ಕುಟುಂಬಗಳಿಗೆ ಪಡಿತರ ಸಮಸ್ಯೆ

October 20, 2018
  • ಬೆಟ್ಟದತುಂಗ ನ್ಯಾಯಬೆಲೆ ಅಂಗಡಿ ಬಳಿ ದೊಡ್ಡೇಗೌಡನ ಕೊಪ್ಪಲು, ನಾಗನಗಳ್ಳಿ, ನಾಗನಹಳ್ಳಿಕೊಪ್ಪಲು ಗ್ರಾಮಸ್ಥರ ಪ್ರತಿಭಟನೆ

ಬೆಟ್ಟದಪುರ:  ಪಿರಿಯಾಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು, ನಾಗನಹಳ್ಳಿ ಹಾಗೂ ನಾಗನಹಳ್ಳಿ ಕೊಪ್ಪಲು ಗ್ರಾಮದ 244 ಬಿಪಿಎಲ್ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪೂರೈಕೆಯಾಗುವ ಪಡಿತರ ದೊರೆಯದ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಗ್ರಾಮಗಳ ಬಿಪಿಎಲ್ ಕುಟುಂಬಗಳು ಸಮೀಪದ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಒಳಪಟ್ಟಿದ್ದು, 4 ಕಿ.ಮೀ. ಸಂಚರಿಸಿ ಪಡಿತರ ಪಡೆಯಬೇಕಾಗಿದೆ. ಅಷ್ಟು ದೂರ ಪಡಿತರ ಹೊತ್ತು ತರಲು ಹರಸಾಹಸ ಪಡಬೇಕಾಗಿದೆ. ಆದ ಕಾರಣ 3 ಗ್ರಾಮಗಳಿಗೂ ಸರಿ ಹೊಂದುವಂತೆ ದೊಡ್ಡೇಗೌಡನಕೊಪ್ಪಲು ಗ್ರಾಮಕ್ಕೆ ನೂತನ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳೂ ವಿಶೇಷ ಪ್ರಕರಣವೆಂದು ಪರಿಗಣಿಸಿ ದೊಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ಷರತ್ತುಬದ್ಧವಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅನುಮತಿ ನೀಡಿದ್ದರು. ಆದರೆ ಅಕ್ಟೋಬರ್ ಪಡಿತರ ಮತ್ತೆ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಪೂರೈಕೆಯಾಗಿದೆ. ಇದನ್ನು ವಿರೋಧಿಸಿ ಗ್ರಾಮಸ್ಥರು ಬೆಟ್ಟದತುಂಗ ನ್ಯಾಯಬೆಲೆ ಅಂಗಡಿಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿ ಸಣ್ಣಸ್ವಾಮಿ, ತಾಂತ್ರಿಕ ದೋಷದಿಂದಾಗಿ ಕಾರ್ಡ್‍ದಾರರ ಹೆಬ್ಬೆಟ್ಟು ಗುರುತು ದಾಖಲಿಸುವುದು ಸಾಧ್ಯವಾಗದಿರುವುದರಿಂದ 3 ಗ್ರಾಮಗಳ ಬಿಪಿಎಲ್ ಕುಟುಂಬಗಳಿಗೆ ಪಡಿತರ ದೊರೆತಿಲ್ಲ. ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಭರವಸೆ ನೀಡಿದರು. ನೂತನ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲು ತಹಸೀಲ್ದಾರರಿಗೆ ಮನವಿ ಪತ್ರ ನೀಡುವಂತೆ ಗ್ರಾಮಸ್ಥರಿಗೆ ಸಲಹೆ ನೀಡಿದರು.

Translate »