`ವಿಜಯೇಂದ್ರ ಜನಪ್ರಿಯತೆ ಕಾಂಗ್ರೆಸ್ ಹೈಕಮಾಂಡ್‍ಗೆ ನಡುಕ’
ಮೈಸೂರು

`ವಿಜಯೇಂದ್ರ ಜನಪ್ರಿಯತೆ ಕಾಂಗ್ರೆಸ್ ಹೈಕಮಾಂಡ್‍ಗೆ ನಡುಕ’

September 24, 2020

ಸುರ್ಜೇವಾಲಾ ಬಾಲಿಶ ಆರೋಪ: ರಘು ಕೌಟಿಲ್ಯ ಕಿಡಿ
ಮೈಸೂರು, ಸೆ.23- ವಿಜಯೇಂದ್ರ ಯಡಿಯೂರಪ್ಪ ರಾಜ್ಯದ ಭರವಸೆಯ ಯುವ ನೇತಾರ, ಬಿಜೆಪಿಯ ಕ್ರಿಯಾಶೀಲ ಪದಾಧಿಕಾರಿ. ಅವರ ಜನಪ್ರಿಯತೆ ಕಂಡು ಕಾಂಗ್ರೆಸ್ ಹೈಕಮಾಂಡ್‍ಗೆ ತಲೆಬಿಸಿಯಾಗಿದೆ. ಹಾಗಾಗಿಯೇ ಕಾಂಗ್ರೆಸ್ ಉಸ್ತುವಾರಿ ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿ ವಿಜಯೇಂದ್ರರ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ರಘು(ಕೌಟಿಲ್ಯ) ಕಿಡಿಕಾರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ, ವಿಪಕ್ಷ ನಾಯಕರು ಸಮರ್ಥರಲ್ಲ ಎಂಬ ಪರೋಕ್ಷ ಸಂದೇಶ ನೀಡಿ ರಾಜ್ಯ ನಾಯಕರನ್ನು ಅವಮಾನಿಸುವ ಉದ್ದೇಶವೂ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲಾ ಅವರ ಬೆಂಗಳೂರು ಭೇಟಿಯಲ್ಲಿ ಅಡಗಿದೆ. ಇದು ವಿಜಯೇಂದ್ರರ ಜನಪ್ರಿಯತೆ ಬಗ್ಗೆ ಕಾಂಗ್ರೆಸ್‍ನ ದೆಹಲಿ ನಾಯಕರಿಗಿರುವ ಆತಂಕ ತೋರಿಸುತ್ತದೆ ಎಂದು ರಘು ವ್ಯಂಗ್ಯವಾಡಿದ್ದಾರೆ.

ಕಬ್ಬಿಣದ ಕಡಲೆ ಎನಿಸಿದ್ದ, ಕೆ.ಆರ್.ಪೇಟೆ ಕ್ಷೇತ್ರದಲ್ಲಿಯೇ ಬಿಜೆಪಿ ಗೆಲ್ಲಿಸಿ ವಿಜಯದ ರೂವಾರಿ ಎನಿಸಿದ ವಿಜಯೇಂದ್ರ ಅವರು, ಈಗ ಶಿರಾ ಉಪ ಚುನಾವಣೆಯಲ್ಲೂ ಶಕ್ತಿ ಪ್ರದರ್ಶಿಸಲಿದ್ದಾರೆ. ಅವರನ್ನು ಹೇಗಾದರೂ ಹಿಮ್ಮೆಟ್ಟಿಸಬೇಕೆಂದು ವಿಪಕ್ಷಗಳು ಪಿತೂರಿ ನಡೆಸಿವೆ. ಇಂಥ ವ್ಯಕ್ತಿಗತ ನಿಂದೆ, ಅಪಪ್ರಚಾರ, ಹುರುಳಿಲ್ಲದ ಆರೋಪಗಳಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

Translate »