ಬೇಡಿಕೆ ಈಡೇರಿಸಲು ಮನವಿ ಮಾಡಿದರೆ ವರ್ಗಾವಣೆ ಶಿಕ್ಷೆ: ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜಿ ಕಾರ್ಮಿಕರ ಪ್ರತಿಭಟನೆ
ಮೈಸೂರು

ಬೇಡಿಕೆ ಈಡೇರಿಸಲು ಮನವಿ ಮಾಡಿದರೆ ವರ್ಗಾವಣೆ ಶಿಕ್ಷೆ: ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜಿ ಕಾರ್ಮಿಕರ ಪ್ರತಿಭಟನೆ

June 14, 2018

ಮೈಸೂರು:  ಕಾನೂನಿನಂತೆ ಸೌಲಭ್ಯ ನೀಡಲು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್‍ನ ಆಡಳಿತ ಮಂಡಳಿ 90 ಮಂದಿ ಕಾರ್ಮಿಕರನ್ನು ಸಂಸ್ಥೆಯ ಆಂಧ್ರಪ್ರದೇಶದ ಘಟಕಕ್ಕೆ ಸಾಮೂಹಿಕ ವರ್ಗಾವಣೆ ಮಾಡಿದೆ ಎಂದು ಆರೋಪಿಸಿ ಸಿಐಟಿಯು, ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯೀಸ್ ಯೂನಿಯನ್ ಆಶ್ರಯದಲ್ಲಿ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸಂಸ್ಥೆಯ ಮೈಸೂರು ಘಟಕದಲ್ಲಿ ಮಹಿಳಾ ಕಾರ್ಮಿಕರು ಸೇರಿದಂತೆ ಸುಮಾರು 450 ಮಂದಿ ಕಾರ್ಮಿಕರು 10 ವರ್ಷಗಳಿಂದ ದುಡಿಯುತ್ತಿದ್ದೇವೆ. ಕಾನೂನಿನಂತೆ ಸೌಲಭ್ಯಗಳನ್ನು ಕಲ್ಪಿಸದೇ ಹಾಗೂ ಕನಿಷ್ಠ ವೇತನವನ್ನೂ ನೀಡದೇ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರಿಗೆ ದೊರಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ 90 ಮಂದಿ ಕಾರ್ಮಿಕರನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಮಹಿಳಾ ಕಾರ್ಮಿಕರೂ ಇದ್ದು, ಕೊಡುತ್ತಿರುವ 10 ಸಾವಿರ ರೂ. ವೇತನದಲ್ಲಿ ಕುಟುಂಬದ ಜೊತೆಗೆ ಆಂಧ್ರಪ್ರದೇಶಕ್ಕೆ ತೆರಳಿ ಜೀವನ ಸಾಗಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಲಿದೆ. ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಕಾನೂನುಬದ್ಧ ಸೌಲಭ್ಯಗಳ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯೀಸ್ ಯೂನಿಯನ್‍ನ ಅಧ್ಯಕ್ಷ ಎಂ.ಕೆ.ಶಶಿಕುಮಾರ್, ಕಾರ್ಮಿಕರಾದ ಪಿ.ಎನ್.ಸತೀಶ್, ಸಿ.ಈಶ್ವರ್, ಸುಷ್ಮಾ ಆರ್.ಗೌಡ, ಬಿ.ಪಿ.ಚಂದ್ರ, ಕೆ.ಗಿರೀಶ್, ಟಿ.ನಂದೀಶ್, ಮುರಳೀಧರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »