ಲಾಕ್‍ಡೌನ್ ಬಳಿಕ `ವಿಧಾನಸೌಧ ಬಿಟ್ಟು ತೊಲಗಿ’ ಹೋರಾಟದ ಎಚ್ಚರಿಕೆ
ಮೈಸೂರು

ಲಾಕ್‍ಡೌನ್ ಬಳಿಕ `ವಿಧಾನಸೌಧ ಬಿಟ್ಟು ತೊಲಗಿ’ ಹೋರಾಟದ ಎಚ್ಚರಿಕೆ

June 18, 2021

ಮೈಸೂರು, ಜೂ.17(ಆರ್‍ಕೆಬಿ)- ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು. 1 ವರ್ಷ ಸಾಲದ ಅವಧಿಯನ್ನು ವಿಸ್ತರಿಸಬೇಕು. ಕಬ್ಬಿನ ಬಾಕಿ ಕೊಡಬೇಕು. ಕಬ್ಬಿನ ಬೆಲೆ ನಿಗದಿಪಡಿಸಬೇಕು. ಚಾಮರಾಜನಗರ ದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂ ಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ದುರಂತಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳ ಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುರುವಾರ ಮೈಸೂರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತಸಂಘದ ಆಶ್ರಯದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದ್ದು, ಅಂತೆಯೇ ಮೈಸೂ ರಿನಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ರಿಯಾಯಿತಿ ದರದಲ್ಲಿ ರಸಗೊಬ್ಬರ, ಕೀಟನಾಶಕ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಎಲ್ಲಾ ಕೃಷಿ ಚಟುವಟಿಕೆಗಳಿಗೂ ವಿಸ್ತರಿಸಬೇಕು. ರೈತ ಕುಟುಂಬದ ಇಬ್ಬರನ್ನು ಈ ವ್ಯಾಪ್ತಿಯೊಳಗೆ ಸೇರಿಸಬೇಕು. ರೈತ ಕುಟುಂಬಗಳಿಗೆ ಕನಿಷ್ಠ 10 ಸಾವಿರ ರೂ. ಪ್ಯಾಕೇಜ್ ಘೋಷಿಸಬೇಕು. ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಪಡಿತರವನ್ನು ಅವರ ಕುಟುಂಬಕ್ಕೆ ನೀಡಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಕೊರೊನಾ ಸಂಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ ರೈತ ಸಮುದಾಯ ಕಡೆಗಣಿಸಿದೆ. ಭಿಕ್ಷಾ ರೂಪದ ಪ್ಯಾಕೇಜ್ ಘೋಷಿಸಿ ತನ್ನ ಹೊಣೆಗಾರಿಕೆಯಿಂದ ನುಣುಚಿ ಕೊಂಡು ನಿರ್ಲಕ್ಷ್ಯ ಮಾಡುತ್ತಿದೆ. ರೈತಸಮುದಾಯದ ರಕ್ಷಣೆಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಜೂ.21ರ ಲಾಕ್‍ಡೌನ್ ಮುಗಿದ ಬಳಿಕ ರಾಜ್ಯಾದ್ಯಂತ `ವಿಧಾನ ಸೌಧ ಬಿಟ್ಟು ತೊಲಗಿ’ ಘೋಷಣೆಯೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ರಾಜ್ಯಾ ಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ಬಳಿಕ ಮುಖ್ಯಮಂತ್ರಿಗಳಿಗೆ ಬರೆದ ಆಗ್ರಹ ಪತ್ರವನ್ನು ಎಡಿಸಿ ಮಂಜುನಾಥಸ್ವಾಮಿ ಅವರಿಗೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಎನ್.ಪ್ರಸನ್ನಗೌಡ, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ಸಂಘಟನಾ ಕಾರ್ಯದರ್ಶಿ ಮಹೇಶ್, ಎನ್.ಪುನೀತ್, ವಿಜಯೇಂದ್ರ, ಕುಮಾರ್, ಚಂದ್ರ ಶೇಖರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »