ಕಗ್ಗವನ್ನು ವಾಚಿಸುವುದರಿಂದ ನೈತಿಕ ಮೌಲ್ಯ, ಅಂತಃಸತ್ವ, ನೆನಪಿನ ಶಕ್ತಿ ಹೆಚ್ಚುತ್ತೆ ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ವಿಶ್ವಾಸ
ಮೈಸೂರು

ಕಗ್ಗವನ್ನು ವಾಚಿಸುವುದರಿಂದ ನೈತಿಕ ಮೌಲ್ಯ, ಅಂತಃಸತ್ವ, ನೆನಪಿನ ಶಕ್ತಿ ಹೆಚ್ಚುತ್ತೆ ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್ ವಿಶ್ವಾಸ

March 18, 2021

ಮೈಸೂರು,ಮಾ.17-ರಾಮಕೃಷ್ಣನಗರದ ಐ ಬ್ಲಾಕ್‍ನ ಹಿತರಕ್ಷಣಾ ವೇದಿಕೆಯಿಂದ ರಾಮಕೃಷ್ಣನಗರದ ಐ ಬ್ಲಾಕ್‍ನಲ್ಲಿರುವ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡ ನೆಡುವ ಮೂಲಕ ಕವಿ, ಸಾಹಿತಿ ಡಾ.ಡಿ.ವಿ.ಗುಂಡಪ್ಪ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಡಿ.ವಿ.ಜಿ. ಅವರು ತಮ್ಮ ಜೀವನದ ಅನುಭವಗಳನ್ನು ಕಗ್ಗದ ಮೂಲಕ ತಿಳಿಸಿದ್ದಾರೆ. ಕಗ್ಗವನ್ನು ವಾಚಿಸುವುದರಿಂದ ನೈತಿಕ ಮೌಲ್ಯ, ಅಂತಃಸತ್ವ, ನೆನಪಿನ ಶಕ್ತಿ ಹೆಚ್ಚುತ್ತದೆ. ದುಃಖದಲ್ಲಿರುವವರ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಮಕ್ಕಳು ಕಗ್ಗವನ್ನು ವಾಚಿಸುವುದರಿಂದ ಅವರಲ್ಲಿ ನೈತಿಕ ಮೌಲ್ಯ ವೃದ್ಧಿಯಾಗುತ್ತದೆ ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಡಿ.ವಿ.ಜಿ. ಅವರ ಕಗ್ಗ ಬದುಕಿನ ಸಾರವನ್ನು ತುಂಬಾ ಸೊಗಸಾಗಿ ತಿಳಿಸುತ್ತದೆ. ಬದುಕು ಎಂದರೆ ಅಷ್ಟು ಸರಳವಲ್ಲ, ಅಷ್ಟೊಂದು ಸುಲಭವಲ್ಲ, ನಾವು ನಡೆಯುವ ದಾರಿ ಸರಿ ಇದ್ದರೆ ಬದುಕನ್ನು ಸರಳ, ಸುಲಭವಾಗಿಸಬಹುದು. ಕಗ್ಗವನ್ನು ಪಾಯಸದಂತೆ ಸವಿಯುತ್ತಾ ಹಿಗ್ಗನ್ನು ಅನುಭವಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್‍ಕುಮಾರ್‍ಗೌಡ ಮಾತನಾಡಿ, ಕನ್ನಡದ ಭಗವದ್ಗೀತೆ ಎಂದೇ ಹೆಸರಾಗಿರುವ ‘ಮಂಕುತಿಮ್ಮನ ಕಗ್ಗ’ ಯುಗದ ಕವಿ ಜಗದ ಕವಿ ಡಿ.ವಿ.ಜಿ.ಯವರ ಮೇರುಕೃತಿ. ಕನ್ನಡ ಸಾರಸ್ವತ ಲೋಕದ ಅಮರಕೃತಿ. ಯಾವುದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸತ್ವವನ್ನು ಗರ್ಭೀಕರಿಸಿಕೊಂಡು ಒಡಮೂಡಿದರೆ ಅದು ಕಾಲದೇಶಾದಿ ಗಡಿಗಳನ್ನು ಮೀರಬಹುದು. ಸಾಮಾನ್ಯರಿಂದ ಮಾನ್ಯರವರೆಗೆ ಎಲ್ಲರ ಮನಸೂರೆ ಗೊಳ್ಳಬಹುದು. ತನ್ಮೂಲಕ ಮನುಕುಲಕ್ಕೊಂದು ಕೈ ದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ ನಿದರ್ಶನ ಎಂದು ಹೇಳಿದರು

ಪಾಲಿಕೆ ಸದಸ್ಯೆ ಲಕ್ಷ್ಮೀ ಕಿರಣ್‍ಗೌಡ, ಬಿಜೆಪಿ ವಕ್ತಾರ ಮೋಹನ್, ಬಸವಣ್ಣ, ಬಸವ ಲಿಂಗಪ್ಪ, ಕಿರಣ್ ಮಾದೇಗೌಡ, ಬಸಪ್ಪಾಜಿ, ಮಹೇಶ್, ಪದ್ಮಮ್ಮ, ದ್ರಾಕ್ಷಾಯಿಣಿ, ರಂಗಸ್ವಾಮಿ, ವಿಜಯ್‍ಕುಮಾರ್, ಸಂತೋಷ್, ಮುಖಂಡರು ಉಪಸ್ಥಿತರಿದ್ದರು.

Translate »