ಕೆರೆ ಏರಿ ಒಡೆದು ಜಮೀನಿಗೆ ನುಗ್ಗಿದ ನೀರು
ಮೈಸೂರು

ಕೆರೆ ಏರಿ ಒಡೆದು ಜಮೀನಿಗೆ ನುಗ್ಗಿದ ನೀರು

August 23, 2021

ಬೇಗೂರು,ಆ.22(ನಾಗೇಶ್/ ಕಿರಣ್)- ಗುಂಡ್ಲು ಪೇಟೆ ತಾಲೂಕಿನ ಬೇಗೂರು ಸಮೀಪದ ಬೆಳಚಲ ವಾಡಿ ಕೆರೆ ಏರಿ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಸುತ್ತಮುತ್ತಲಿನ ಬೆಳೆಗಳು ನಾಶವಾಗಿರುವ ಘಟನೆ ಭಾನುವಾರ ನಡೆದಿದೆ.

ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಲ್ಲಿ ಸೇರಿರುವ ಬೆಳಚಲವಾಡಿ ಕೆರೆಯ ಏರಿಯಲ್ಲಿ ಅಲ್ಲಲ್ಲಿ ಸಣ್ಣ-ಸಣ್ಣ ಬಿರುಕುಗಳು ಇದ್ದರೂ ಯಾವುದೇ ದುರಸ್ತಿ ಮಾಡದೇ ನೀರು ತುಂಬಿಸಿದ ಪರಿಣಾಮ ಕೆರೆ ಏರಿ ಒಡೆದಿದೆ. ಗಾಂಧಿ ಗ್ರಾಮ ಏತ ನೀರಾವರಿ ಯೋಜ ನೆಗೆ ಸೇರಿದ ಬೆಳಚಲವಾಡಿ ಕೆರೆಗೆ ಸಣ್ಣ ನೀರಾವರಿ ಇಲಾಖೆ ನೀರು ಹರಿಸಿತ್ತು. ಏರಿಯಲ್ಲಿದ್ದ ಸಣ್ಣ ಬಿರುಕುಗಳಲ್ಲಿ ಸಣ್ಣಗೆ ಹರಿಯುತ್ತಿದ್ದ ನೀರು ಹೆಚ್ಚಿನ ರಭಸ ಪಡೆದುಕೊಂಡು ಭಾನುವಾರ ಬೆಳಗ್ಗೆ ಇಡೀ ಏರಿಯೇ ಒಡೆದು ಹೋಗಿದೆ.

ಅಪಾರ ಹಾನಿ: ಸುಮಾರು 70 ಎಕರೆ ವಿಸ್ತೀರ್ಣದಲ್ಲಿ ಸಂಗ್ರಹವಾಗಿದ್ದ ನೀರು ಅಕ್ಕಪಕ್ಕದ ಶಿವಣ್ಣ, ಮಹದೇವ ಶೆಟ್ಟಿ, ನವೀನ, ಮಹದೇವಯ್ಯ, ಪಾಪಶೆಟ್ಟಿ, ಕೆಂಪಣ್ಣ, ನೀಲಕಂಠಶೆಟ್ಟಿ, ಲೋಕೇಶ್, ಪರಶಿವಮೂರ್ತಿ ಅವರಿಗೆ ಸೇರಿದ ನೂರಾರು ಎಕರೆ ಜಮೀನುಗಳಿಗೆ ನುಗ್ಗಿ ಅಲ್ಲಿ ಬೆಳೆದಿದ್ದ ಸೂರ್ಯಕಾಂತಿ, ಮುಸುಕಿನ ಜೋಳ, ರಾಗಿ, ಕಬ್ಬು ಸಂಪೂರ್ಣ ನಾಶವಾಗಿದೆ.

ಜಮೀನಲ್ಲಿ ದಾಸ್ತಾನು ಮಾಡಿದ ಗೊಬ್ಬರ ಕೂಡ ನೀರು ಪಾಲಾಗಿದೆ. ಜೊತೆಗೆ ಕೆರೆಗೆ ಬಿಟ್ಟಿದ್ದ ಮೀನಿನ ಮರಿಗಳು ನೀರಿನಲ್ಲಿ ಕೊಚ್ಚಿ ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗ್ರಾಮದ ತಗ್ಗು ಪ್ರದೇಶದಲ್ಲಿರುವ ಶಾಲೆಗೆ ನುಗ್ಗಿದ ನೀರು ಕಮರಹಳ್ಳಿ ಕೆರೆಗೆ ಹರಿಯುತ್ತಿದೆ. ಸಮೀಪದ ತಗ್ಗು ಪ್ರದೇಶದಲ್ಲಿರುವ ಬೇಗೂರಿನ 220/66 ಕೆವಿ ಸಾಮರ್ಥ್ಯದ ವಿದ್ಯುತ್ ಪ್ರಸರಣಾ ಕೇಂದ್ರಕ್ಕೆ ನುಗ್ಗಿ ಅಪಾಯವುಂಟಾಗುವ ಭೀತಿ ಎದುರಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಊರಿನ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದರು. ರಸ್ತೆಯ ಮೇಲೆ ನೀರು ಹರಿಯುತ್ತಿದ್ದರೂ ಸ್ವ ಗ್ರಾಮಕ್ಕೆ ಬೈಕಿನಲ್ಲಿ ತೆರಳುತ್ತಿದ್ದ ಬೆಳಚಲವಾಡಿ ಗ್ರಾಮದ ಮಹೇಶ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಸ್ಥಳದಲ್ಲಿದ್ದ ಪೆÇಲೀಸರು ಆತನನ್ನು ರಕ್ಷಿಸಿದರೂ ಬೈಕ್ ಕೊಚ್ಚಿ ಹೋಗಿ ಸೇತುವೆಯ ಕೆಳಗೆ ಬಿದ್ದಿತು. ತಗ್ಗು ಪ್ರದೇಶದ ಜಲಾವೃತವಾಗಿದ್ದ ಮನೆಯಲ್ಲಿದ್ದ ಶಿವನಂಜಶೆಟ್ಟಿ ಎಂಬುವರನ್ನು ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಹೊರತಂದರು.
ಗ್ರಾಮಸ್ಥರ ಪ್ರತಿಭಟನೆ: ಕೆರೆಗೆ ನೀರು ತುಂಬಿಸುವುದು ಮಾತ್ರ ನಮ್ಮ ಕೆಲಸ. ಏರಿ ರಿಪೇರಿ ಜಿಲ್ಲಾ ಪಂಚಾಯಿತಿಗೆ ಸೇರಿದೆ ಎಂದು ಕಾವೇರಿ ನೀರಾವರಿ ನಿಗಮದವರು ಹೇಳಿದರೆ, ಕೆರೆಗಳ ನಿರ್ವಹಣೆಗೆ ಅಗತ್ಯವಾದ ಮಟ್ಟದ ಅನುದಾನ ನಮ್ಮಲ್ಲಿಲ್ಲ ಎಂದು ಜಿಪಂ ಅಧಿಕಾರಿ ಗಳು ಸಬೂಬು ಹೇಳುತ್ತಿದ್ದಾರೆ. ಇದರಿಂದ ಏರಿ ಒಡೆಯಲು ಕಾರಣವಾಗಿದ್ದು ಇವರ ವಿರುದ್ದ ಕ್ರಮಕೈಗೊಳ್ಳಬೇಕು ಕೆರೆ ಏರಿ ಭದ್ರಗೊಳಿಸದ ಅಧಿಕಾರಿಗಳ ವಿರುದ್ದ ಸುತ್ತಮುತ್ತಲ ರೈತರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಎಎಸ್‍ಪಿ ಸುಂದರರಾಜ್, ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್‍ಪಿ ನಾಗರಾಜು ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಿದರು.

Translate »