ವಾರಾಂತ್ಯ ಕಫ್ರ್ಯೂ ಜಾರಿ
ಮೈಸೂರು

ವಾರಾಂತ್ಯ ಕಫ್ರ್ಯೂ ಜಾರಿ

January 8, 2022

ಮೈಸೂರು, ಜ.7(ಆರ್‍ಕೆ)-2022ನೇ ಸಾಲಿನ ಮೊದಲ ವಾರಾಂತ್ಯ ಕಫ್ರ್ಯೂ ನಿರ್ಬಂಧಕಾಜ್ಞೆ ಯನ್ನು ಮೈಸೂರು ನಗರ ಸೇರಿದಂತೆ ಜಿಲ್ಲೆ ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಇಂದು (ಶುಕ್ರವಾರ) ರಾತ್ರಿ 10 ಗಂಟೆಯಿಂದ ಆರಂಭ ವಾಗಿರುವ ವೀಕೆಂಡ್ ಕಫ್ರ್ಯೂ ಸೋಮವಾರ (ಜ.10) ಮುಂಜಾನೆ 5 ಗಂಟೆಗೆ ಅಂತ್ಯವಾಗಲಿದೆ. ಕೊರೊನಾ ಮೂರನೇ ಅಲೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕೈಗೊಂಡಿರುವ ಈ ಕ್ರಮಕ್ಕೆ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆಯಾದರೂ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಕಫ್ರ್ಯೂ ಆದೇಶವನ್ನು ಯಥಾವತ್ತಾಗಿ ಜಾರಿ ಮಾಡುತ್ತಿದೆ. ವಾರಾಂತ್ಯ ಕಫ್ರ್ಯೂ ಮೊದಲ ದಿನವಾದ ಇಂದು, ಬೆಳಗ್ಗೆಯಿಂದಲೇ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್‍ಗಳಲ್ಲಿ ಜನರು
ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಎರಡು ದಿನಗಳ ಕಾಲ ಕಫ್ರ್ಯೂ ವಿಧಿಸಿರುವುದರಿಂದ ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದುದು ಹಾಗೂ ಹೊರಗಿನಿಂದ ಮೈಸೂರಿಗೆ ಆಗಮಿಸುವವರ ಸಂಖ್ಯೆಯೂ ಅಧಿಕಾವಾಗಿತ್ತು.

ಮದ್ಯ ಖರೀದಿಗೆ ಮುಗಿ ಬಿದ್ದರು: ಇಂದು ರಾತ್ರಿ 8 ಗಂಟೆಯಿಂದಲೇ ಮದ್ಯ ಮಾರಾಟ ಬಂದ್ ಮಾಡುವುದಾಗಿ ಆದೇಶ ಹೊರಡಿಸಿದ್ದರಿಂದ ಪಾನಪ್ರಿಯರು ಮಧ್ಯಾಹ್ನದಿಂದಲೇ ಮದ್ಯ ಖರೀದಿಸಲು ವೈನ್ ಸ್ಟೋರ್, ಬಾರ್, ಎಂಎಸ್‍ಐಎಲ್ ಮಳಿಗೆ, ಟ್ರೂ ಸ್ಪಿರಿಟ್‍ಗಳಿಗೆ ಮುಗಿ ಬೀಳುತ್ತಿದ್ದರು.
ಸಂಜೆಯಾಗುತ್ತಿದ್ದಂತೆ ಸಾವಿರಾರು ಮಂದಿ ಮದ್ಯದಂಗಡಿಗಳಿಗೆ ಧಾವಿಸಿ ಕ್ಯೂನಲ್ಲಿ ನಿಂತು ಪಾನ ಖರೀದಿಸಲು ಮುಗಿ ಬಿದ್ದರಲ್ಲದೆ, ರಾತ್ರಿ 7 ರಿಂದ 8 ಗಂಟೆ ಅವಧಿಯಲ್ಲಂತೂ ಲಕ್ಷಾಂತರ ರೂ. ಮೌಲ್ಯದ ಮದ್ಯ ಮಾರಾಟವಾಯಿತು. ಕೆಲವೆಡೆ ಗುಂಪು ನಿಭಾಯಿಸಲು ಪೊಲೀಸರು ಮೇಲ್ವಿಚಾರಣೆ ನಡೆಸುತ್ತಿದ್ದುದು ಕಂಡು ಬಂದಿತು.

ಪೊಲೀಸರ ಕಾರ್ಯಾಚರಣೆ: ವೀಕೆಂಡ್ ಕಫ್ರ್ಯೂ ಜಾರಿ ಮಾಡಲು ಸಜ್ಜಾಗಿದ್ದ ಸಿವಿಲ್ ಮತ್ತು ಸಂಚಾರ ಠಾಣೆ ಪೊಲೀಸರು, ರಾತ್ರಿ 9.30 ಗಂಟೆಯಿಂದಲೇ ಪಿಸಿಆರ್, ಗರುಡ ವಾಹನಗಳಲ್ಲಿ ಪಬ್ಲಿಕ್ ಅಡ್ರೆಸಿಂಗ್ ಸಿಸ್ಟಂ ಮೂಲಕ ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ಪ್ರಕಟಣೆ ಮಾಡುವ ಮೂಲಕ ರಾತ್ರಿ 10 ಗಂಟೆಗೆ ಸರಿಯಾಗಿ ಅಂಗಡಿ-ಮುಂಗಟ್ಟು, ವಾಣಿಜ್ಯ ವಹಿವಾಟು ಬಂದ್ ಮಾಡುವಂತೆ ತಿಳುವಳಿಕೆ ನೀಡಿದರು.

ಪ್ರಮುಖ ಜಂಕ್ಷನ್, ಸರ್ಕಲ್, ರಸ್ತೆ, ವಾಣಿಜ್ಯ ಪ್ರದೇಶಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ತಪಾಸಣೆ ಮಾಡುತ್ತಿದ್ದು, ಅನಗತ್ಯವಾಗಿ ಓಡಾಡುವವರಿಗೆ ತಿಳುವಳಿಕೆ ನೀಡಿ ವಾಪಸ್ ಕಳುಹಿಸುತ್ತಿದ್ದರು. ಆಸ್ಪತ್ರೆ, ಮೆಡಿಕಲ್ ಸ್ಟೋರ್, ಡಯಾಗ್ನೋಸ್ಟಿಕ್ ಸೆಂಟರ್, ದಿನಸಿ, ಆಹಾರ ಧಾನ್ಯ, ಹಣ್ಣು, ತರಕಾರಿ, ಹಾಲು, ಮಾಂಸ ಮಾರಾಟ, ಪೆಟ್ರೋಲ್ ಬಂಕ್‍ಗಳು, ಮನೆ ಮನೆಗೆ ಆಹಾರ, ಔಷಧಿ ಪೂರೈಸುವವರು, ಆಸ್ಪತ್ರೆಗೆ ಹೋಗುವವರಿಗೆ ಕಫ್ರ್ಯೂ ಆದೇಶದಿಂದ ವಿನಾಯಿತಿ ನೀಡಲಾಗಿದೆ.

ಕೆಎಸ್‍ಆರ್‍ಟಿಸಿ ಬಸ್, ರೈಲು, ವಿಮಾನ ಸೇವೆ ಎಂದಿನಂತಿದೆ. ಆಟೋ, ಟ್ಯಾಕ್ಸಿಗಳು, ಬಸ್, ರೈಲು ನಿಲ್ದಾಣ, ಆಸ್ಪತ್ರೆ ಹಾಗೂ ಆರೋಗ್ಯ ಸೇವೆ ಒದಗಿಸುವ ಸ್ಥಳಗಳಿಗೆ ಮಾತ್ರ ಸೀಮಿತವಾಗಿದ್ದು, ಪ್ರಯಾಣಿಕರನ್ನು ಕೂರಿಸಿಕೊಂಡು ಅವರ ಸ್ಥಳಗಳಿಗೆ ತಲುಪಿಸಬೇಕೇ ಹೊರತು, ಮದ್ಯ ಎಲ್ಲಿಯೂ ನಿಲ್ಲುವಂತಿಲ್ಲ.

ಹೋಟೆಲ್‍ಗಳಲ್ಲಿ ಪಾರ್ಸಲ್ ಮಾತ್ರ: ಕಫ್ರ್ಯೂ ಅವಧಿಯಲ್ಲಿ ಹೋಟೆಲ್, ರೆಸ್ಟೋರೆಂಟ್ ತೆರೆಯಬಹುದು. ಆದರೆ ಗ್ರಾಹಕರು ಕುಳಿತು ಊಟ-ತಿಂಡಿ ಸೇವಿಸುವಂತಿಲ್ಲ. ಆಹಾರಗಳನ್ನು ಪಾರ್ಸಲ್ ನೀಡಬಹುದಾಗಿದೆ. ಬೀದಿ ಬದಿ ವ್ಯಾಪಾರಿಗಳು, ಅಗತ್ಯ ವಸ್ತು ಸಾಗಣೆಗೆ ನಿರ್ಬಂಧವಿಲ್ಲ. ಉಳಿದಂತೆ ಎಲ್ಲಾ ಬಗೆಯ ಅಂಗಡಿ, ವಾಣಿಜ್ಯ ವಹಿವಾಟು, ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್, ಉದ್ಯಾನವನ, ಜಿಮ್, ಗ್ರಂಥಾಲಯ, ಪ್ರವಾಸಿ ಕೇಂದ್ರಗಳು, ಯೋಗ ತರಬೇತಿ ಶಾಲೆಗಳು, ಸಾಂಸ್ಕøತಿಕ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದು, ಸೋಮವಾರ ಮುಂಜಾನೆ 5 ಗಂಟೆವರೆಗೆ ಇಡೀ ಮೈಸೂರು ನಗರ ಸ್ತಬ್ಧವಾಗಿರಲಿದೆ. ಕಲ್ಯಾಣ ಮಂಟಪಗಳು, ಫಂಕ್ಷನ್ ಹಾಲ್‍ಗಳಲ್ಲಿ ನಡೆಯಲಿರುವ ಶುಭ ಸಮಾರಂಭಗಳಿಗೆ 100 ಮತ್ತು ಬಯಲು ಪ್ರದೇಶದಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಗೆ 200 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟೆಚ್ಚರ: ಮೈಸೂರು ನಗರ ಸಂಪರ್ಕಿಸುವ ಹೆದ್ದಾರಿ, ಮುಖ್ಯ ರಸ್ತೆಗಳ ಚೆಕ್‍ಪೋಸ್ಟ್‍ಗಳಲ್ಲಿ ದಿನದ 24 ಗಂಟೆಯೂ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಂಚರಿಸುವ ಪ್ರತಿಯೊಂದು ವಾಹನಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸುತ್ತಿರುವ ಪೊಲೀಸರು, ಅಗತ್ಯ ದಾಖಲಾತಿಗಳಿದ್ದವರಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ. ಚಾಮುಂಡಿಬೆಟ್ಟ, ಅರಮನೆ, ಮೃಗಾಲಯ, ಕಾರಂಜಿ ಕೆರೆ, ಉದ್ಯಾನಗಳಂತಹ ಪ್ರವಾಸಿ ಕೇಂದ್ರಗಳಿಗೆ ಪ್ರವೇಶ ನಿಷೇಧಿಸಲಾಗಿದ್ದು, ದಸರಾ ವಸ್ತುಪ್ರದರ್ಶನವನ್ನು ಕಫ್ರ್ಯೂ ಅವಧಿಯಲ್ಲಿ ಬಂದ್ ಮಾಡಲಾಗಿದೆ.

Translate »