ವಾರಾಂತ್ಯ ಕಫ್ರ್ಯೂ ಜಾರಿ
News

ವಾರಾಂತ್ಯ ಕಫ್ರ್ಯೂ ಜಾರಿ

January 5, 2022

ಬೆಂಗಳೂರು, ಜ. 4- ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಮತ್ತು ಒಮಿಕ್ರಾನ್ ಸೋಂಕಿನ ಸಂಖ್ಯೆ ನಿಯಂತ್ರಿಸುವ ಸಲುವಾಗಿ ಸರ್ಕಾರ ಕಠಿಣ ರೂಲ್ಸ್ ಗಳೊಂದಿಗೆ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿದೆ.

ವೀಕೆಂಡ್ ಕಫ್ರ್ಯೂ ಮುಂದಿನ 15 ದಿನಗಳವರೆಗೆ ಜಾರಿಯಲ್ಲಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ, 2 ದಿನಗಳ ಕಾಲ ವೈದ್ಯಕೀಯ ಸೇವೆ ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ವ್ಯವಹಾರಗಳು ಬಂದ್ ಆಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ತಜ್ಞರು, ಸಂಬಂಧಪಟ್ಟ ಸಚಿವರು, ಅಧಿ ಕಾರಿಗಳ ಸುದೀರ್ಘ ಸಭೆಯ ನಂತರ ಸಚಿವರಾದ ಆರ್.ಅಶೋಕ್ ಮತ್ತು ಡಾ. ಸುಧಾಕರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಕೇಂದ್ರ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ ಮತ್ತು ನೆರೆ ರಾಜ್ಯಗಳಲ್ಲಿ ಕೈಗೊಂಡಿರುವ ನಿಯಮ ಗಳನ್ನು ಗಮನಿಸಿ ರಾಜ್ಯ ಸರ್ಕಾರ ವೈಜ್ಞಾನಿಕ ವಾಗಿ ಈ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ ಎಂದು ಅವರು ವಿವರಿಸಿದರು.

ಮುಂದಿನ 15 ದಿನಗಳವರೆಗೆ ರಾಜ್ಯ ದಲ್ಲಿ ನೈಟ್ ಕಫ್ರ್ಯೂ ಮುಂದುವರೆಯ ಲಿದ್ದು, ಈ ವೇಳೆ ಹೋಟೆಲ್, ಮಾಲ್, ಸಿನೆಮಾ ಮಂದಿರಗಳು, ಮಲ್ಟಿಫ್ಲೆಕ್ಸ್, ರಂಗಮಂದಿರಗಳು, ಆಡಿಟೋರಿಯಂ, ರೆಸ್ಟೋರೆಂಟ್, ಪಬ್, ಬಾರ್‍ಗಳು ಸೇರಿ ದಂತೆ ಮತ್ತಿತರ ಕಡೆಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಅವರು ಸಹ 2 ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕಾಗಿದೆ. ಲಸಿಕೆ ಪಡೆಯದವರಿಗೆ ಪ್ರವೇಶಾ ವಕಾಶವಿರುವು ದಿಲ್ಲ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಎಲ್ಲಾ ನಿಯಮಗಳು ನಾಳೆ (ಬುಧವಾರ) ರಾತ್ರಿ 10 ಗಂಟೆಯಿಂದ ಜಾರಿಗೆ ಬರಲಿದೆ ಎಂದು ವಿವರಿಸಿದರು. ಇದೇ ರೀತಿ ಸ್ವಿಮ್ಮಿಂಗ್ ಪೂಲ್ಸ್, ಜಿಮ್ ಗಳಲ್ಲೂ ಶೇ.50ರಷ್ಟು ಮಂದಿಗೆ ಅವಕಾಶ ವಿದ್ದು, ಅವರೆಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಲೇಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದಂತೆ ಚರ್ಚೆ ನಡೆಸಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಮತ್ತು ಒಮಿಕ್ರಾನ್ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಈ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದ ಅವರು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು ಎಂದರು.

ಆರ್‍ಟಿಪಿಸಿಆರ್ ಕಡ್ಡಾಯ: ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ದೆಹಲಿಯಿಂದ ಬರುವವರಿಗೆ ಮತ್ತು ಹೈ-ರಿಸ್ಕ್ ದೇಶಗಳಿಂದ ಬರುವವರಿಗೂ ಆರ್‍ಟಿ-ಪಿಸಿಆರ್ ವರದಿ ಕಡ್ಡಾಯ. ಪ್ರವಾಸಿಗರು ಬಸ್ಸು, ರೈಲು, ವಿಮಾನ ಸೇರಿದಂತೆ ಯಾವುದೇ ವಾಹನಗಳಲ್ಲಿ ಬಂದರೂ, ಅವರನ್ನು ಗಡಿ ಭಾಗ ಮತ್ತು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಬಂದರೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಒಂದು ವೇಳೆ ಪಾಸಿಟಿವ್ ಬಂದರೆ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಕ್ವಾರಂಟೈನ್‍ಗಾಗಿ 2-ಸ್ಟಾರ್, 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್‍ಗಳ ದರ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ಕ್ವಾರಂಟೈನ್‍ಗೊಳಗಾದವರೇ ಭರಿಸಬೇಕು. ಇದಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಯಾವುದೇ ಸಭೆ-ಸಮಾರಂಭಗಳನ್ನು ನಡೆಸದಂತೆ ನಿರ್ಬಂಧಿಸಲಾಗಿದೆ. ಮದುವೆ ಮತ್ತು ಶುಭ ಕಾರ್ಯಗಳಿಗೆ ನಿಯಮಗಳನ್ನು ವಿಧಿಸಲಾಗಿದ್ದು, ಒಳಾಂಗಣದಲ್ಲಿ ನಡೆಯುವ ವಿವಾಹಕ್ಕೆ 100 ಜನರು, ಹೊರಾಂಗಣದಲ್ಲಿ ನಡೆಯುವ ಮದುವೆಗಳಿಗೆ 200 ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, ಅವರುಗಳಿಗೂ ಎರಡೂ ಡೋಸ್ ಲಸಿಕೆ ಕಡ್ಡಾಯವಾಗಿರುತ್ತದೆ.

ವೀಕೆಂಡ್ ಕಫ್ರ್ಯೂ ಸಮಯದಲ್ಲಿ ಅಗತ್ಯ ಸೇವೆಗಳಾದ ಹಾಲು, ತರಕಾರಿ, ಹಣ್ಣು, ಮೀನು, ಮೊಟ್ಟೆ ಸೇರಿದಂತೆ ದಿನಸಿ ಅಂಗಡಿಗಳು ಮತ್ತು ವೈದ್ಯಕೀಯ ಸೇವೆಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಸುಖಾಸುಮ್ಮನೆ ಓಡಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಬಸ್ಸು, ರೈಲು ಮತ್ತು ಮೆಟ್ರೋ ರೈಲುಗಳಲ್ಲಿ ಆಸನಗಳಿರುವಷ್ಟೇ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಗಳು ಆಯಾ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದು, ನಾಳೆ ಅಥವಾ ನಾಳಿದ್ದು, ಈ ಸಂಸ್ಥೆಗಳು ತಮ್ಮ ಪ್ರಯಾಣದ ಮಾರ್ಗಸೂಚಿಗಳನ್ನು ಪ್ರಕಟಿಸಲಿವೆ ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು. ಎಲ್ಲಾ ಸರ್ಕಾರಿ ಕಚೇರಿಗಳು 5 ದಿನಗಳ ಕಾಲ ಅಂದರೆ ಸೋಮವಾರದಿಂದ ಶುಕ್ರವಾರ ದವರೆಗೆ ಕಾರ್ಯ ನಿರ್ವಹಿಸಲಿದ್ದು, ಶೇ. 50ರಷ್ಟು ಮಂದಿಗೆ ಮಾತ್ರ ಅವಕಾಶವಿರುತ್ತದೆ ಎಂದು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ. ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಶೇ.50ರ ಆಧಾರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಯಾವುದೇ ವಿಧವಾದ ಸೇವೆ, ಪ್ರಸಾದ ವಿತರಣೆ ಮತ್ತು ಮಂಗಳಾರತಿ ಮತ್ತು ತೀರ್ಥ ವಿತರಣೆ ಇರುವುದಿಲ್ಲ.

ಪಾರ್ಕುಗಳು ಬಂದ್: ವೇಗವಾಗಿ ಹರಡುತ್ತಿರುವ ಕೊರೊನಾ ಮತ್ತು ಒಮಿಕ್ರಾನ್ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಹೆಚ್ಚು ಜನಸಂದಣಿ ಸೇರುವ ಪಾರ್ಕುಗಳನ್ನು ಬಂದ್ ಮಾಡಲಾಗುವುದು. ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ದೆಹಲಿ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಒಮಿಕ್ರಾನ್ ಮತ್ತು ಕೊರೊನಾ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳನ್ನು ಅವಲೋಕಿಸಿ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಏಕಾಏಕಿ ಲಾಕ್‍ಡೌನ್ ಮಾಡಿದರೆ ಜನ ಆತಂಕಕ್ಕೊಳಗಾಗುತ್ತಾರೆ ಮತ್ತು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಮುಷ್ಕರ, ಪ್ರತಿಭಟನೆ, ಮೆರವಣಿಗೆಗಳಿಗೆ ಅವಕಾಶ ನೀಡದೆ ನೈಟ್ ಕಫ್ರ್ಯೂ ಮುಂದುವರೆಸೋಣ. ಸದ್ಯಕ್ಕೆ ಬಿಗಿ ಬಂದೋಬಸ್ತ್ ಮಾಡಿ ರಾತ್ರಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ತಿಳಿಸಿದರಲ್ಲದೆ, ಜನರನ್ನು ಜಾಗೃತಿಗೊಳಿಸುವ ಮೂಲಕ ಎಚ್ಚರಿಕೆಯಿಂದ ಇರುವಂತೆ ಮಾಡೋಣ ಎಂದು ಹೇಳಿದರೆನ್ನಲಾಗಿದೆ.
ಐಡಿ ಕಡ್ಡಾಯ: ಖಾಸಗಿ ಮತ್ತು ಐಟಿ ಕಂಪನಿಗಳು ಉದ್ಯೋಗಿಗಳು ನೈಟ್ ಕಫ್ರ್ಯೂ ಮತ್ತು ವೀಕೆಂಡ್ ಕಫ್ರ್ಯೂ ವೇಳೆ ಸಂಸ್ಥೆ ನೀಡಿರುವ ಗುರುತಿನ ಚೀಟಿಯನ್ನು ತೋರಿಸಿ ಕರ್ತವ್ಯ ನಿರ್ವಹಿಸಬಹುದಾಗಿದೆ.

Translate »