ವಾರಾಂತ್ಯ ಕಫ್ರ್ಯೂ ಹಿನ್ನೆಲೆ; ಮೈಸೂರು ದೇವರಾಜ, ವಾಣಿವಿಲಾಸ, ಮಂಡಿ ಮಾರುಕಟ್ಟೆಗಳಲ್ಲಿ ವಿರಳ ಗ್ರಾಹಕರು; ನೀರಸ 4 ಗಂಟೆ ವಹಿವಾಟು
ಮೈಸೂರು

ವಾರಾಂತ್ಯ ಕಫ್ರ್ಯೂ ಹಿನ್ನೆಲೆ; ಮೈಸೂರು ದೇವರಾಜ, ವಾಣಿವಿಲಾಸ, ಮಂಡಿ ಮಾರುಕಟ್ಟೆಗಳಲ್ಲಿ ವಿರಳ ಗ್ರಾಹಕರು; ನೀರಸ 4 ಗಂಟೆ ವಹಿವಾಟು

April 25, 2021

ಬೆಳಗ್ಗೆ 10ರ ಬಳಿಕ ಬಾಗಿಲು ಮುಚ್ಚಿದ ಪ್ರಮುಖ ಮೂರು ಮಾರುಕಟ್ಟೆಗಳು
ಮೈಸೂರು,ಏ.24(ಪಿಎಂ)-ಕೋವಿಡ್ ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ದೇವರಾಜ, ಮಂಡಿ ಹಾಗೂ ವಾಣಿವಿಲಾಸ ಮಾರುಕಟ್ಟೆಗಳಲ್ಲಿ ಶನಿವಾರ ಬೆಳಗ್ಗೆ 6ರಿಂದ ಬೆಳಗ್ಗೆ 10ವರೆಗೆ ವಹಿವಾಟು ನಡೆಯಿತು. ಆ ಬಳಿಕ ಮೂರು ಮಾರುಕಟ್ಟೆಗಳು ಬಂದ್ ಆದವು.

ಮೈಸೂರು ನಗರದ ಈ ಪ್ರಮುಖ ಮೂರು ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳು ಇರುವ ಹಿನ್ನೆಲೆಯಲ್ಲಿ ವಾರಾಂತ್ಯ ಕಫ್ರ್ಯೂ ವಿನಾಯಿತಿಯಂತೆ ಬೆಳಗಿನ 4 ತಾಸು ಅವಧಿಯಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸ ಲಾಗಿತ್ತು. ಉಳಿದಂತೆ ಮೂರು ಮಾರುಕಟ್ಟೆಗಳ ಹೊರಾವರಣದ ಅಗತ್ಯ ವಸ್ತು ವ್ಯಾಪ್ತಿಗೆ ಬಾರದ ಜವಳಿ ಸೇರಿದಂತೆ ಇನ್ನಿತರ ಮಳಿಗೆಗಳು ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ಮುಚ್ಚಿದ್ದವು.

ಕಫ್ರ್ಯೂ ಮಾಹಿತಿ ಮೊದಲೇ ಹೊಂದಿದ್ದ ಜನತೆ ಮಾರುಕಟ್ಟೆಗಳತ್ತ ಹೆಚ್ಚು ಸುಳಿಯಲಿಲ್ಲ. ಹೀಗಾಗಿ ಮೂರು ಮಾರುಕಟ್ಟೆಗಳಲ್ಲಿ ವಿನಾಯಿತಿ ನೀಡಿದ್ದ 4 ಗಂಟೆ ಅವಧಿಯಲ್ಲೂ ಹೆಚ್ಚಿನ ಗ್ರಾಹಕರು ಕಂಡು ಬರಲಿಲ್ಲ. ದೇವರಾಜ ಮಾರುಕಟ್ಟೆಯಲ್ಲಿ ಬೆಳಗ್ಗೆ 9.30ರ ವೇಳೆಗೆಲ್ಲಾ ವ್ಯಾಪಾರಿಗಳು ಮಳಿಗೆಗಳನ್ನು ಮುಚ್ಚಿ ಮನೆಯತ್ತ ತೆರಳಿದರು. ಅದೇ ರೀತಿ ಮಂಡಿ ಮಾರುಕಟ್ಟೆ ಹಾಗೂ ವಾಣಿವಿಲಾಸ ಮಾರು ಕಟ್ಟೆಯಲ್ಲೂ 10 ಗಂಟೆಗೆಲ್ಲಾ ವ್ಯಾಪಾರಸ್ಥರು ತಮ್ಮ ಮಳಿಗೆಗಳನ್ನು ಬಂದ್ ಮಾಡಿದರು.

ದೇವರಾಜ ಮಾರುಕಟ್ಟೆಯಲ್ಲಿ ಮಾಸಿಕ ಬಾಡಿಗೆಯ 822 ಹಾಗೂ ದಿನವಹಿ ಬಾಡಿಗೆಯ 250 ಮಳಿಗೆಗಳು ಇದ್ದು, ಈ ಪೈಕಿ ಬಹುತೇಕವು ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳಾಗಿವೆ. ಇಲ್ಲಿನ ಬಹುತೇಕ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅರ್ಧ ಗಂಟೆ ಮುಂಗಡವಾಗಿಯೇ ಮಳಿಗೆಗಳನ್ನು ಮುಚ್ಚಿ ಮನೆಯತ್ತ ತೆರಳಿದರು.

ಇದೇ ವೇಳೆ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ದೇವರಾಜ ಮಾರುಕಟ್ಟೆ ವ್ಯಾಪಾರಿ ರಾಕೇಶ್, ಕೋವಿಡ್ ಮೊದಲ ಅಲೆಯ ಲಾಕ್‍ಡೌನ್‍ನಿಂದ ಈಗಷ್ಟೇ ವ್ಯಾಪಾರ ವಹಿವಾಟಿನಲ್ಲಿ ಚೇತರಿಕೆ ಕಾಣು ತ್ತಿದ್ದೆವು. ಅಷ್ಟರಲ್ಲಿ ಮತ್ತೆ ಲಾಕ್‍ಡೌನ್ ಮಾದರಿ ವಾತಾ ವರಣ ಕಾಣುವಂತಾಗಿದೆ. ಸಂಪೂರ್ಣವಾಗಿ ಮಳಿಗೆ ಗಳನ್ನು ಮುಚ್ಚಿಸದೇ ಈಗ ನೀಡಿರುವ ವಿನಾಯಿತಿ ರೀತಿ ಸಮಯಾವಕಾಶ ನೀಡಿದರೆ ತುಸು ಸುಧಾರಿಸಿಕೊಳ್ಳ ಬಹುದು. ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಮಾಡಿದರೆ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಣಿವಿಲಾಸ ಮಾರುಕಟ್ಟೆಯಲ್ಲಿ 150 ಮಳಿಗೆ ಗಳಿದ್ದು, ಇದರ ಹೊರಭಾಗದಲ್ಲಿರುವ ವಾಣಿಜ್ಯ ಮಳಿಗೆ ಗಳು ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ಮೊದಲೇ ಮುಚ್ಚಿದ್ದರೆ, ಅಗತ್ಯ ವಸ್ತುಗಳ ವ್ಯಾಪ್ತಿಗೆ ಬರುವ ಮಾರು ಕಟ್ಟೆಯ ಒಳಾಂಗಣದ ಮಳಿಗೆಗಳು ಬೆಳಗ್ಗೆ 6ರಿಂದ 10ರವರೆಗೆ ವಹಿವಾಟು ನಡೆಸಿದವು. ಇಲ್ಲಿಯೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಅದೇ ರೀತಿ ಮಂಡಿ ಮಾರುಕಟ್ಟೆಯಲ್ಲಿ 153 ಮಳಿಗೆಗಳ ಪೈಕಿ ಬಹುತೇಕ ಸಂಖ್ಯೆ ಹೊಂದಿರುವ ತರಕಾರಿ ಹಾಗೂ ಹಣ್ಣಿನ ಮಳಿಗೆಗಳು ನಿಗದಿಗೊಳಿಸಿದ ಬೆಳಗಿನ 4 ತಾಸು ವಹಿವಾಟು ನಡೆಸಿ, ಬಾಗಿಲು ಮುಚ್ಚಿದವು.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ದೇವರಾಜ ಮಾರುಕಟ್ಟೆ ಬಾಡಿಗೆ ದಾರರ ಸಂಘದ ಅಧ್ಯಕ್ಷ ಎಸ್.ಮಹದೇವ್, ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವಾರಾಂತ್ಯ ಕಫ್ರ್ಯೂ ಸೇರಿದಂತೆ ಕಠಿಣ ನಿರ್ಬಂಧ ಕ್ರಮಗಳು ಅಗತ್ಯ. ಈ ಹಿನ್ನೆಲೆಯಲ್ಲಿ ಇದನ್ನು ಸ್ವಾಗತಿಸುತ್ತೇನೆ. ಅದರಂತೆ ನಮ್ಮ ಮಾರುಕಟ್ಟೆ ವರ್ತಕರು ಮಾರ್ಗ ಸೂಚಿಗಳನ್ನು ಪಾಲಿಸಿ, ಸಹಕಾರ ನೀಡುತ್ತಿದ್ದಾರೆ. ಆದರೆ ಸರ್ಕಾರ ಸಾಕಷ್ಟು ನಿಧಾನವಾಗಿ ಕ್ರಮ ವಹಿಸಿದೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆಗಳ ಉಪಚುನಾವಣೆಗಳ ಸಂದರ್ಭದಲ್ಲಿ ಜನ ಸೇರಿಸಿ ಪ್ರಚಾರಕ್ಕೆಲ್ಲಾ ಅವಕಾಶ ನೀಡಿ ನಿರ್ಲಕ್ಷ್ಯ ಮಾಡಿದ್ದೇ ಸೋಂಕು ಉಲ್ಬಣಗೊಳ್ಳಲು ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾರಂಭದಿಂದಲೇ ಕಠಿಣ ಕ್ರಮ ಕೈಗೊಂಡಿದ್ದರೆ, ಇಷ್ಟು ಪ್ರಮಾಣದಲ್ಲಿ ಕೋವಿಡ್ ಹರಡುತ್ತಿರಲಿಲ್ಲ. ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ತೀರ್ಮಾನ ತೆಗೆದು ಕೊಂಡಿತು. ಉಪಚುನಾವಣೆಯಲ್ಲಿ ಪ್ರಚಾರಕ್ಕಾಗಿ ಕೋವಿಡ್ ನಿಯಮ ಗಾಳಿಗೆ ತೂರಿ ಜನ ಸೇರಿಸಲಾಗಿದೆ. ರಾಜಕಾರಣಿಗಳಿಗೆ ಒಂದು ಕಾನೂನು, ಸಾಮಾನ್ಯ ಜನತೆಗೆ ಒಂದು ಕಾನೂನು ಎಂಬಂತೆ ಸರ್ಕಾರ ವರ್ತಿ ಸಿದೆ. ಇದು ಸರಿಯಲ್ಲ. ಸರ್ಕಾರದ ಉದಾಸೀನತೆ ಯಿಂದ ಈಗ ಜನತೆಗೆ ಸಮಸ್ಯೆ ಅನುಭವಿಸುವಂತಾಗಿದೆ. ಚುನಾವಣೆ ಕಾರಣಕ್ಕೆ ಕೋವಿಡ್‍ನ ಕಠಿಣ ನಿರ್ಬಂಧ ಗಳನ್ನು ಮುಂದೂಡಿಕೊಂಡು ಬಂದರು. ಎಲ್ಲಾ ಹರಡಿದ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಬೆಸ ಮತ್ತು ಸಮಸಂಖ್ಯೆ ಆಧಾರದಲ್ಲಿ ಅಗತ್ಯ ವಸ್ತು ಮಳಿಗೆ ತೆರೆಯಲು ಆದೇಶ ದೇವರಾಜ, ವಾಣಿವಿಲಾಸ, ಮಂಡಿ ಮಾರುಕಟ್ಟೆಗಳಿಗೆ ಅನ್ವಯ
ಮೈಸೂರು,ಏ.24(ಪಿಎಂ)- ವಾರಾಂತ್ಯ ಕಫ್ರ್ಯೂ ಅವಧಿ ಹೊರತಾಗಿ ಉಳಿದ ದಿನಗಳಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರು ಕಟ್ಟೆ ಹಾಗೂ ಮಂಡಿ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಮಳಿಗೆಗಳು ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ವ್ಯಾಪಾರ ನಡೆಸಬೇಕೆಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಏ.23ರಿಂದ ಒಂದು ದಿನ ಮಳಿಗೆ ಸಂಖ್ಯೆ 1,3, 5,7ರಂತೆ, ಮತ್ತೊಂದು ದಿನ ಮಳಿಗೆ ಸಂಖ್ಯೆ 2, 4,6,8ರಂತೆ ಬೆಸ ಮತ್ತು ಸಮ ಸಂಖ್ಯೆ ಆಧಾರ ದಲ್ಲಿ ಕೋವಿಡ್-19ರ ಮಾರ್ಗಸೂಚಿ ಕಡ್ಡಾಯ ಪಾಲನೆಯೊಂದಿಗೆ ವಹಿವಾಟು ನಡೆಸುವಂತೆ ಆದೇಶ ದಲ್ಲಿ ಸೂಚಿಸಲಾಗಿದೆ. ಸದರಿ ಆದೇಶವು ವಾರದ ದಿನಗಳಿಗೆ ಮಾತ್ರ ಅನ್ವಯವಾಗಲಿದ್ದು, ವಾರಾಂತ್ಯ ದಿನಗಳಿಗೆ ಸಂಬಂಧ ಸರ್ಕಾರದ ಆದೇಶದಂತೆ ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾ ಡಳಿತ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕ ಜನಸಂದಣಿ ಉಂಟಾಗುವ ಮಾರುಕಟ್ಟೆ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅದರಂತೆ ಪಾಲಿಕೆ ವ್ಯಾಪ್ತಿಯ ದೇವರಾಜ ಮಾರುಕಟ್ಟೆ, ಮಂಡಿ ಮಾರು ಕಟ್ಟೆ ಮತ್ತು ವಾಣಿವಿಲಾಸ ಮಾರುಕಟ್ಟೆಗಳ ಅಗತ್ಯ ವಸ್ತುಗಳ ಮಳಿಗೆಗಳು ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಒಂದೊಂದು ದಿನ ತೆರೆದು ವಹಿವಾಟು ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಆದೇಶದಲ್ಲಿ ಕೋವಿಡ್ ನಿಯಮ ಸಂಬಂಧ ಅನೇಕ ಸೂಚನೆಗಳನ್ನು ನೀಡಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದ್ದಲ್ಲಿ ಸಾಂಕ್ರಾಮಿಕ ರೋಗಗಳ ಅಧಿನಿಯಮ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಮತ್ತು ಐಪಿಸಿ ಸೆಕ್ಷನ್ 188ರನ್ವಯ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡ ಲಾಗಿದೆ. ಮೇ 4ರವರೆಗೆ ಈ ಮೂರು ಮಾರು ಕಟ್ಟೆಗಳಲ್ಲಿ ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಮಳಿಗೆ ತೆರೆಯುವ ಆದೇಶ ಜಾರಿಯಲ್ಲಿರುತ್ತದೆ ಎಂದು ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗ ರಾಜ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮಾರುಕಟ್ಟೆ ಅಧ್ಯಕ್ಷರ ಸ್ವಾಗತ: ಬೆಸ-ಸಮ ಸಂಖ್ಯೆ ಆಧಾರದಲ್ಲಿ ಮಳಿಗೆ ತೆರಯುವ ಸಂಬಂಧ ದೇವ ರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಎಸ್.ಮಹದೇವ್ ಪ್ರತಿಕ್ರಿಯಿಸಿ, ಸಾರ್ವಜನಿಕ ಮಾರುಕಟ್ಟೆಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿದೆ ಎಂದು ಕೇಳಿದ್ದೇನೆ. ಜನದಟ್ಟಣೆ ತಡೆಗಟ್ಟ ಬೇಕೆಂಬುದು ಇದರ ಉದ್ದೇಶ. ಆದರೆ ಮೈಸೂರಿ ನಲ್ಲಿ ಸ್ಥಳಾಂತರಕ್ಕೆ ಸೂಕ್ತ ಜಾಗದ ಅಭಾವವಿದೆ. ಹೀಗಾಗಿ ಜನದಟ್ಟಣೆ ಕಡಿಮೆಗೊಳಿಸಲು ಬೆಸ-ಸಮ ಸಂಖ್ಯೆಯಡಿ ಮಳಿಗೆ ತೆರೆಯಲು ಕ್ರಮ ವಹಿಸಿರುವುದು ಸದುದ್ದೇಶದಿಂದ ಕೂಡಿದ್ದು, ಇದನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.

ಕೋವಿಡ್ ನಿರ್ಬಂಧದ ವೇಳೆ ಅಗತ್ಯ ವಸ್ತು ಮಳಿಗೆಗಳಂತೆ ಸದ್ಯ ಪೂಜಾ ಸಾಮಗ್ರಿ ಮಳಿಗೆಗಳಿಗೂ ವಿನಾಯಿತಿ
ಇದು ದೇವರಾಜ, ಮಂಡಿ, ವಾಣಿವಿಲಾಸ ಮಾರುಕಟ್ಟೆಗಳಿಗೆ ಅನ್ವಯ
ಹಬ್ಬದ ಸಂದರ್ಭದಲ್ಲಿ ದೇವರಾಜ ಮಾರುಕಟ್ಟೆಯಲ್ಲೇ ಹೂ ವ್ಯಾಪಾರ
ಮೈಸೂರು,ಏ.24(ಪಿಎಂ)- ಕೋವಿಡ್ ಹಿನ್ನೆಲೆಯಲ್ಲಿ ಸಾವುಗಳು ಹೆಚ್ಚುತ್ತಿರುವ ಜೊತೆಗೆ ವಯೋ ಸಹಜ ಸಾವು ಸೇರಿದಂತೆ ಇನ್ನಿತರ ಅವಘಡದಲ್ಲಿ ಮೃತಪಟ್ಟವರ ಅಂತಿಮ ಸಂಸ್ಕಾರ ವಿಧಿವಿಧಾನದ ಪ್ರಕಾರ ನೆರವೇರಲು ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಕೋವಿಡ್ ನಿರ್ಬಂಧದ ವೇಳೆ ಅಗತ್ಯ ವಸ್ತು ಮಳಿಗೆಗಳಿಗೆ ನೀಡುವ ವಿನಾಯಿತಿಯನ್ನು ಸದ್ಯ ಪೂಜಾ ಸಾಮಗ್ರಿ ಮಳಿಗೆಗಳಿಗೂ ನೀಡಲಾಗಿದೆ.

`ಮೈಸೂರು ಮಿತ್ರ’ನಿಗೆ ಈ ವಿಷಯ ತಿಳಿಸಿದ ದೇವರಾಜ ಮಾರುಕಟ್ಟೆ ಬಾಡಿಗೆ ದಾರರ ಸಂಘದ ಅಧ್ಯಕ್ಷ ಎಸ್.ಮಹದೇವ್, ಪೂಜಾ ಸಾಮಗ್ರಿ ಮಳಿಗೆಗಳಿಗೂ ನೀಡಿರುವ ವಿನಾಯಿತಿ ಮುಂದುವರೆಸಬೇಕೆಂದು ಮನವಿ ಮಾಡಿದರು.

ಅಂತಿಮ ಸಂಸ್ಕಾರಕ್ಕೆ ಮನೆಯಲ್ಲಿದ್ದರೂ ಪ್ರತಿಯೊಂದು ಪೂಜಾ ಸಾಮಗ್ರಿಗಳನ್ನು ಹೊಸದಾಗಿ ತರಬೇಕೆಂಬ ಶಾಸ್ತ್ರವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನು ಕೂಲಕ್ಕಾಗಿ ಅಗತ್ಯ ವಸ್ತುಗಳ ಮಳಿಗೆಗಳಂತೆ ಪೂಜಾ ಸಾಮಗ್ರಿ ಮಳಿಗೆಗಳಿಗೂ ವಿನಾಯಿತಿ ನೀಡಬೇಕೆಂದು ನಾವು ಮನವಿ ಮಾಡಿದ್ದಕ್ಕೆ ಪಾಲಿಕೆ ಸ್ಪಂದಿಸಿದೆ. ದೇವರಾಜ, ಮಂಡಿ ಹಾಗೂ ವಾಣಿವಿಲಾಸ ಸೇರಿದಂತೆ ಮೂರು ಮಾರುಕಟ್ಟೆ ಗಳಲ್ಲೂ ಇದಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಾವು ಆಗಿರುವ ಮನೆಯವರು ಶಾಸ್ತ್ರದ ಪ್ರಕಾರ ಅರಿಸಿನ, ಕುಂಕುಮ, ಮಡಿಕೆ, ಕುಡಿಕೆ ಸೇರಿದಂತೆ ಎಲ್ಲವನ್ನೂ ಹೊಸದಾಗಿ ಖರೀದಿಸಬೇಕು. ಹೊಸ ಪೂಜಾ ಸಾಮಗ್ರಿ ದೊರೆಯದೇ ಹಲವರು ಪರಿತಪಿಸುವುದನ್ನು ಕಂಡಿದ್ದೇವೆ. ಹೀಗಾಗಿ ಅಗತ್ಯ ವಸ್ತುಗಳ ಮಳಿಗೆಗಳಿಗೆ ನೀಡುವ ವಿನಾಯಿತಿಯನ್ನು ಪೂಜಾ ಸಾಮಗ್ರಿಗಳಿಗೂ ನೀಡಿದರೆ ವರ್ತಕರು ಹಾಗೂ ಸಾರ್ವಜನಿಕರು ಇಬ್ಬರಿಗೂ ಅನುಕೂಲ ಆಗಲಿದೆ ಎಂದು ಮನವಿ ಮಾಡಿದ್ದೆವು. ಹೀಗಾಗಿ ಅನುವು ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ದೇವರಾಜ ಮಾರುಕಟ್ಟೆಯಲ್ಲೇ ಹೂ ವ್ಯಾಪಾರ: ಕೋವಿಡ್ ಹಿನ್ನೆಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ದೇವರಾಜ ಮಾರುಕಟ್ಟೆ ಹೂ ವ್ಯಾಪಾರ ಸ್ಥಳಾಂತರಿ ಸುವ ಕ್ರಮ ಕೈಬಿಟ್ಟು, ಬೆಸ ಮತ್ತು ಸಮ ಸಂಖ್ಯೆ ಆಧಾರದಲ್ಲಿ ಮಾರುಕಟ್ಟೆಯಲ್ಲೇ ವಹಿವಾಟು ನಡೆಸಲು ಅವಕಾಶ ನೀಡಬೇಕೆಂಬ ಮನವಿ ಮಾಡಿದ್ದೆವು. ಇದರ ಮೇರೆಗೆ ಪಾಲಿಕೆ ಅನುಮತಿ ನೀಡಿದೆ ಎಂದು ದೇವರಾಜ ಮಾರುಕಟ್ಟೆ ಬಾಡಿಗೆ ದಾರರ ಸಂಘದ ಅಧ್ಯಕ್ಷ ಎಸ್.ಮಹದೇವ್ ತಿಳಿಸಿದರು. ಜೆಕೆ ಮೈದಾನಕ್ಕೆ ಸ್ಥಳಾಂತರ ಮಾಡುತ್ತಿದ್ದ ಕ್ರಮದಿಂದ ಹೂ ವ್ಯಾಪಾರಿಗಳು ಅಪಾರ ನಷ್ಟ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡೆವು. ಮನವಿಗೆ ಸ್ಪಂದಿಸಿ, ಪಾಲಿಕೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಹೇಳಿದರು.

Translate »