ಜಿಲ್ಲಾಸ್ಪತ್ರೆ, ನಿರ್ಮಾಣ ಹಂತದ ಆಸ್ಪತ್ರೆ ಕಟ್ಟಡ ಪರಿಶೀಲಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಚಾಮರಾಜನಗರ, ಮಾ.8- ನಗರದ ವೈದ್ಯಕೀಯ ಕಾಲೇಜಿನ ಬಳಿ ನಿರ್ಮಾಣ ವಾಗುತ್ತಿರುವ ಸುಸಜ್ಜಿತ ಆಸ್ಪತ್ರೆಯನ್ನು ಇನ್ನು 6 ತಿಂಗಳೊಳಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾ ಕರ್ ತಿಳಿಸಿದರು.
ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆ ಕಟ್ಟಡ ಕಾಮಗಾರಿ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ವೀಕ್ಷಿಸಿ ಮಾತನಾಡಿದ ಸಚಿವರು, ನಗರದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಆಸ್ಪತ್ರೆ ಕಾಮಗಾರಿಯನ್ನು ಇನ್ನು 6 ತಿಂಗಳ ಒಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು. ಜನರಿಗೆ ಇಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಎಲ್ಲಾ ರೀತಿಯ ಅನು ಕೂಲಗಳನ್ನು ಒದಗಿಸಲಾಗುವುದು ಎಂದರು.
ಪ್ರಸ್ತುತ ನಗರದ ಜಿಲ್ಲಾಸ್ಪತ್ರೆಯಲ್ಲಿ ಹಲವು ಸೌಲಭ್ಯಗಳನ್ನು ಒದಗಿಸಲು 15 ದಿನಗಳ ಒಳಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ. ವೆಂಟಿಲೇಟರ್, ಡಯಾಲಿಸೀಸ್ ಘಟಕ ಗಳನ್ನು ಮತ್ತÀಷ್ಟು ಹೆಚ್ಚಿಸಲು ಅಗತ್ಯ ವ್ಯವಸ್ಥೆ ಮಾಡಲು ತಿಳಿಸಲಾಗಿದೆ ಎಂದರು.
ಇದಕ್ಕೂ ಮುನ್ನಾ ಸಚಿವರು, ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ ಅಲ್ಲಿರುವ ವಿಭಾಗಗಳು, ವಿದ್ಯಾರ್ಥಿಗಳ ಹಾಸ್ಟೆಲ್ ಇನ್ನಿತರ ಸೌಲಭ್ಯ ಪರಿಶೀಲಿಸಿ ದರು. ಅಲ್ಲದೇ ಕಾಲೇಜಿಗೆ ಬೇಕಿರುವ ಒದಗಿಸಿರುವ ಅನುಕೂಲಗಳು, ಅವಶ್ಯ ವಿರುವ ಇನ್ನಿತರ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.
ಬಳಿಕ ವೈದ್ಯಕೀಯ ಕಾಲೇಜಿನ ಬಳಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮಥ್ರ್ಯವುಳ್ಳ ಆಸ್ವತ್ರೆ ಕಟ್ಟಡ ಕಾಮಗಾರಿ ಪರಿಶೀಲಿಸಿದರು. ನಿರ್ಮಾಣ ಕಾಮಗಾರಿಗೆ ಬಳಸಲಾಗುತ್ತಿರುವ ಸಾಮಗ್ರಿಗಳನ್ನು ವೀಕ್ಷಿಸಿದ ಸಚಿವರು ಗುಣಮಟ್ಟದ ಕಾಮಗಾರಿ ನಡೆಸಬೇಕು, ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಾಗಿರಬೇಕು ಎಂದು ಸೂಚಿಸಿದರು.
ನಿರ್ಮಾಣ ಹಂತದ ಆಸ್ಪತ್ರೆಯಲ್ಲಿ ಕಲ್ಪಿಸ ಲಾಗುತ್ತಿರುವ ಸೌಲಭ್ಯಗಳು, ಹೊರರೋಗಿ ಗಳು, ದಾಖಲಾಗುವ ರೋಗಿಗಳು, ಪ್ರಯೋಗಾಲಯ, ವಾಹನ ನಿಲುಗಡೆ, ತ್ಯಾಜ್ಯ ನಿರ್ವಹಣೆಗೆ ಅಗತ್ಯ ವ್ಯವಸ್ಥೆಗಳು ಸಮರ್ಪಕವಾಗಿರುವಂತೆ ಕಾಮಗಾರಿ ನಿರ್ವಹಣೆಯಾಗಬೇಕೆಂದರು.
ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ, ಹೆರಿಗೆ ವಾರ್ಡ್, ಮಕ್ಕಳ ವಾರ್ಡ್, ಅರ್ಥೋಪೆಡಿಕ್ಸ್ ಸೇರಿದಂತೆ ವಿವಿಧ ವಿಭಾಗಗಳನ್ನು ವೀಕ್ಷಿಸಿ ಆಸ್ಪತ್ರೆ ಯಲ್ಲಿದ್ದ ರೋಗಿಗಳು ಹಾಗೂ ಸಂಬಂ ಧಿಕರೊಂದಿಗೆ ಮಾತನಾಡಿ ಅಹವಾಲು ಆಲಿಸಿದರು. ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಮಹಿಳೆಯರಿಗೆ ಹಾಸಿಗೆಗಳು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ಸಾಕಷ್ಟು ಸಮಯ ಕಾದು ಕುಳಿತುಕೊಳ್ಳಬೇಕಿದೆ. ಈ ಸಮಸ್ಯೆಗೆ ಪರಿಹಾರ ಸೌಲಭ್ಯ ಕಲ್ಪಿಸಬೇ ಕೆಂದು ನಾಗರಿಕರು ಸಚಿವರಲ್ಲಿ ಮನವಿ ಮಾಡಿದರು. ಈ ವೇಳೆ ಜಿಪಂ ಸದಸ್ಯರಾದ ಸಿ.ಎನ್.ಬಾಲರಾಜು, ವೈದ್ಯಕೀಯ ಕಾಲೇಜಿನ ಡೀನ್ ಜಿ.ಎಂ.ಸಂಜೀವ್, ಜಿಲ್ಲಾಸ್ಪತ್ರೆ ಸರ್ಜನ್ ಡಾ.ಕೃಷ್ಣಪ್ರಸಾದ್ ಮತ್ತಿತರರಿದ್ದರು.
ಖರ್ಗೆಗೆ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
ಚಾಮರಾಜನಗರ,ಮಾ.8-ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ತಿಳಿಸಿದರು.
ನಗರದ ಮೇಘಾ ಕಾಂಪ್ಲೆಕ್ಸ್‍ನಲ್ಲಿರುವ ಜಿಲ್ಲಾ ಬಿಜೆಪಿ ಕಚೇ ರಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಗರದಲ್ಲಿ ಸಿಎಎ ವಿರುದ್ಧ ನಡೆದ ಸಮಾವೇಶದಲ್ಲಿ ಮಲ್ಲಿ ಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೇವಲವಾಗಿ ಮಾತನಾಡಿ ದ್ದಾರೆ, ಇದು ಸರಿಯಲ್ಲ. ಮೊಟ್ಟ ಮೊದಲ ಬಾರಿಗೆ 1951ರಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿತು. ಇದುವ ರೆಗೂ ಸುಮಾರು 104 ಬಾರಿ ಸಂವಿಧಾನ ತಿದ್ದುಪಡಿ ಮಾಡಿ ರುವ ಕಾಂಗ್ರೆಸ್ ಸಂವಿಧಾನ ರಕ್ಷಣೆ ಮಾಡುವುದೇ ಎಂದು ಪ್ರಶ್ನಿಸಿದರು. ಬಿಜೆಪಿ ಕಾರ್ಯಕರ್ತರು ಸಂವಿಧಾನ ಅಧ್ಯಯನ ಮಾಡುತ್ತಾರೆ. ಕ್ರಿಯಾಶೀಲತೆಯಿಂದ ಹೋರಾಟ ಮಾಡುತ್ತಾರೆ. ಪ್ರಧಾನಿ ನರೇಂದ್ರಮೋದಿ ಅವರು ದೇಶವನ್ನು ಯಾವುದೇ ಕಪ್ಪುಚುಕ್ಕೆ ಇಲ್ಲದೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು. ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸುಂದರ್, ಡಾ.ಎ.ಆರ್. ಬಾಬು, ಜಿಪಂ ಸದಸ್ಯ ಬಾಲರಾಜು, ಚೂಡಾಮಾಜಿ ಅಧ್ಯಕ್ಷ ಬಾಲ ಸುಬ್ರಹ್ಮಣ್ಯ, ನಗರ ಘಟಕ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಶಿವಣ್ಣ, ನಗರಸಭಾ ಸದಸ್ಯರಾದ ಮಮತ, ಸುದರ್ಶನ್‍ಗೌಡ, ಚಂದ್ರಶೇಖರ್, ಮನೋಜ್ ಪಟೇಲ್, ಜಿಲ್ಲಾ ಮಾಧ್ಯಮ ಪ್ರಮುಖ್ ವೀರೇಂದ್ರ, ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಸದಸ್ಯ ರಾಜೇಶ್, ಮುಖಂಡರಾದ ಬಂಗಾರಸ್ವಾಮಿ, ಎಂ.ಎಸ್.ಫೃಥ್ವಿರಾಜ್, ಮಹದೇವಸ್ವಾಮಿ, ಮಂಗಳಮ್ಮ, ವಿಜಯಲಕ್ಷ್ಮಿ, ಕವಿತಾ, ಸಿದ್ದರಾಜು, ಶಿವಕುಮಾರ್ ಇತರರಿದ್ದರು.