ಚಾಮರಾಜನಗರ,ಮಾ.8-ಯುವ ವೈದ್ಯರು ಗುಡ್ಡಗಾಡು, ಗಾಮೀಣ ಪ್ರದೇಶ ಗಳಲ್ಲಿ ಸೇವೆ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ ಯಲ್ಲಿ ಭಾನುವಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ವ್ಯಾಸಂಗ ಮುಗಿಸಿ ಹೊರಬರುವ ವೈದ್ಯಕೀಯ ವಿದ್ಯಾರ್ಥಿಗಳು ಮೊದಲ 2ರಿಂದ 5 ವರ್ಷ ಗ್ರಾಮೀಣ ಭಾಗಗಳಲ್ಲಿ ಸೇವೆ ಮಾಡುವ ತೀರ್ಮಾನ ಕೈಗೊಳ್ಳಬೇಕು ಎಂದರು.
ವೈದ್ಯ ವೃತ್ತಿ ಅತ್ಯಂತ ಪವಿತ್ರ ವೃತ್ತಿ. ಬಡವ, ಶ್ರೀಮಂತ ಎಂಬ ಭೇದ-ಭಾವ ಎಣಿಸದೆ ಎಲ್ಲರನ್ನು ಸಮಾನವಾಗಿ ಕಂಡು ಸೇವೆ ಮಾಡುವ ವೃತ್ತಿ ವೈದ್ಯರದ್ದಾಗಿದೆ. ಇಂತಹ ವೃತ್ತಿ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಸಮಾಜದಲ್ಲಿ ಪುರುಷ ಮಹಿಳೆಯರ ಸಮಾನ ಅಭಿವೃದ್ಧಿ ಮುಖ್ಯವಾಗಿದೆ. ಸಮಾನ ಅವಕಾಶಗಳು ಹಕ್ಕುಗಳು ಇದ್ದಾಗ ಸಮಾಜ ಸುಸ್ಥಿರವಾಗಿರುತ್ತದೆ. ಸರ್ಕಾರ ಕೂಡ ಎಲ್ಲರಿಗೂ ಸಮಾನ ಅವಕಾಶ ಗಳನ್ನು ಕೊಡುವ ನಿಟ್ಟಿನಲ್ಲಿ ಮುಂದಾಗಿದೆ. ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೌಲಭ್ಯ ಒದಗಿಸು ವಲ್ಲಿ ಕಾರ್ಯೋನ್ಮುಖವಾಗಿದೆ ಎಂದರು.
ಇಲ್ಲಿನ ವೈದ್ಯಕೀಯ ಶಿಕ್ಷಣ ಕಾಲೇಜು ಒಳ್ಳೆಯ ಪರಿಸರದಲ್ಲಿದೆ. ಇಲ್ಲಿ ವಿದ್ಯಾರ್ಥಿ ಗಳಿಗೆ ಇನ್ನೂ ಆಗಬೇಕಿರುವ ಸೌಲಭ್ಯಗಳು ಅವಶ್ಯವಿದ್ದರೆ ಕಲ್ಪಿಸಿಕೊಡಲಾಗುವುದು ಎಂದ ಸಚಿವರು ಕಾಲೇಜಿನ ಸಭಾಂಗಣಕ್ಕೆ ಅಕಾಸ್ಟಿಕ್ ಅಳವಡಿಸುವಂತೆ ತಿಳಿಸಿದರು. ಜಿಪಂ ಸದಸ್ಯರಾದ ಸಿ.ಎನ್.ಬಾಲ ರಾಜು, ವೈದ್ಯಕೀಯ ಕಾಲೇಜಿನ ಡೀನ್ ಜಿ.ಎಂ.ಸಂಜೀವ್, ಜಿಲ್ಲಾಸ್ವತ್ರೆ ಸರ್ಜನ್ ಡಾ.ಕೃಷ್ಣಪ್ರಸಾದ್ ಮತ್ತಿತರರಿದ್ದರು.