ಅಕ್ರಮದ ವಿರುದ್ಧ ಹೋರಾಟ ನಡೆಸಿದ ಮಹಿಳೆ ಸಮರ್ಥನೆ
ತಿ.ನರಸೀಪುರ. ಮಾ. 8(ಎಸ್‍ಕೆ)- ರಾಜೀವ್ ಗಾಂಧಿ ವಸತಿ ನಿಗಮದಿಂದ ತಾಲೂಕಿನ ನಿಲಸೋಗೆ ಗ್ರಾಮದ ಪರಿಶಿಷ್ಟ ಜನಾಂಗ ಅರ್ಹ 39 ಫಲಾನುಭವಿಗಳಿಗೆ ಇತ್ತೀಚೆಗೆ ಶಾಸಕ ಎಂ.ಅಶ್ವಿನ್‍ಕುಮಾರ್ ಹಕ್ಕು ಪತ್ರ ವಿತರಿಸಿದ್ದು, ಇದು ಯಾವುದೇ ಸಂಘಟನೆಯ ಹೋರಾಟದ ಫಲವಲ್ಲ. ಗ್ರಾಮದ ನಿವೇಶನ ವಂಚಿತ ಅರ್ಹ ಫಲಾನುಭವಿಗಳ ಕಾನೂನುಬದ್ಧ ಹೋರಾಟಕ್ಕೆ ಸಿಕ್ಕ ಜಯ ಅಷ್ಟೇ ಎಂದು ನಿವೇಶನ ವಂಚಿತ ಅರ್ಹ ಫಲಾನುಭವಿ ಗೀತಾ ಹೇಳಿದರು.
ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ ಅವಧಿಯ ಕೊನೆಯಲ್ಲಿ ನಮ್ಮ ಗ್ರಾಮದಲ್ಲಿ ನಿವೇಶನ ಹಂಚಿಕೆಯಾಗಿತ್ತು. ಈ ವೇಳೆ ಗ್ರಾಮ ಸಭೆಯಲ್ಲಿ 64 ಜನರಿಗೆ ಅಧೀಕೃತವಾಗಿ ನಿವೇಶನ ಹಂಚಿಕೆಯಾಗಿ ನಂತರ ಗೌಪ್ಯವಾಗಿ 10 ಮಂದಿಯಿಂದ ಹಣ ಪಡೆದು ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದು ಆರೋಪಿಸಿದರು.
ನಿವೇಶನ ವಂಚಿತ ಅರ್ಹ ಫಲಾನುಭವಿಗಳಾದ ನಾವು ಈ ಬಗ್ಗೆ ಕಾನೂನುಬದ್ಧ ಹೋರಾಟಕ್ಕಿಳಿದು ಸಚಿವರಾಗಿದ್ದ ಮಹದೇವಪ್ಪರ ಗಮನಕ್ಕೆ ತಂದು ಹಕ್ಕುಪತ್ರ ಕೊಡುವುದನ್ನು ತಡೆ ಹಿಡಿಯುವಂತೆ ಮಾಡಿದ್ದೆವು. ಆದರೆ ಸರ್ಕಾರ ಬದಲಾಗಿ ಅಶ್ವಿನ್‍ಕುಮಾರ್ ಶಾಸಕರಾಗಿ ಆಯ್ಕೆಯಾದ ನಂತರ ಗ್ರಾಮದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದ್ದ ಅಕ್ರಮದ ಬಗ್ಗೆ ತಿಳಿಸಲಾಯಿತಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಪಂ ಸಿಇಓ, ತಹಶೀಲ್ದಾರ್ ಹಾಗೂ ತಾಪಂ ಇಓ ಅವರಿಗೆ ದೂರು ನೀಡಿ ನ್ಯಾಯಕ್ಕಾಗಿ ಮೋರೆ ಹೋದೆವು ಎಂದರು.
ದೂರನ್ನು ಪುರಸ್ಕರಿಸಿ ದಿಟ್ಟ ನಿರ್ಧಾರ ಕೈಗೊಂಡ ಸಿಇಓ ತಿ.ನರಸೀಪುರ ತಾಪಂ ಇಓ ಅವರಿಗೆ ನಿಲಸೋಗೆ ಗ್ರಾಮದ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮ ಪತ್ತೆ ಹಚ್ಚಿ, ಅರ್ಹರನ್ನು ಗುರುತಿಸುವಂತೆ ಆದೇಶಿದ್ದರು. ಇಓ ತಾಲೂಕಿನ 5 ಇಲಾಖೆಗಳ ಅಧಿಕಾರಿಗಳಿಂದಿಗೆ 74 ಮನೆಗಳನ್ನು ಪರಿಶೀಲನೆ ನಡೆಸಿ, ಅರ್ಹ 39 ಫಲಾನುಭವಿಗಳನ್ನು ಗುರುತಿಸಿದ ನಂತರ ಶಾಸಕರು ಹಕ್ಕು ಪತ್ರ ವಿತರಿಸಿದ್ದಾರೆ. ಆದರೆ ಇದಕ್ಕೂ ಮೊದಲು ಪ್ರತಿಯೊಬ್ಬರಿಂದ 5 ಸಾವಿರ ರೂ. ವಸೂಲಿ ಮಾಡಿ ನಿವೇಶನ ನೋಂದಣಿಗೆ ಮುಂದಾಗಿದ್ದ ಕೆಲ ಮುಖಂಡರು ಜನ ಹಣ ವಾಪಸ್ ಕೇಳುತ್ತಾರೆ ಎಂದು ನಿವೇಶನ ಹಕ್ಕು ಪತ್ರ ವಿತರಿಸಿದ್ದು, ಇದು ನಮ್ಮದೇ ಗೆಲುವು. 2ನೇ ಅವಧಿಯಲ್ಲಿ ಉಳಿದವರಿಗೆ ಹಕ್ಕು ಪತ್ರ ಕೊಡಿಸಲಾಗುವುದು ಎಂದು ಮಾಧ್ಯಮದಲ್ಲಿ ಹೇಳಿ ಕೊಂಡಿದ್ದಾರೆ. ಇದು ಅವರ ಗೆಲುವೇ ಆಗಿದ್ದರೆ 74 ಮಂದಿಗೂ ಹಕ್ಕುಪತ್ರ ನೀಡಬೇಕಾಗಿತ್ತಲ್ಲವೇ? ಎಂದು ಗೀತಾ ಪ್ರಶ್ನಿಸಿದರು. ಪಟ್ಟಿಯಿಂದ ಹೆಸರು ತೆಗೆದಿರುವವರಲ್ಲೂ ಕೆಲ ಮಂದಿ ಅರ್ಹರಿದ್ದು, ಅವರ ಪರವಾಗಿ ನಾವಿದ್ದೇವೆ ಎಂದು ಭರವಸೆ ನೀಡಿದರು. ಅಲ್ಲದೆ ತಮ್ಮಂತಹ ಬಡವರಿಗೆ ನ್ಯಾಯ ಕೊಡಿಸಿದ ಜಿಪಂ ಸಿಇಓ, ತಾಪಂ ಇಓ ಹಾಗೂ ತಮ್ಮ ಹೋರಾಟಕ್ಕೆ ಸಹಕರಿಸಿದವರಿಗೆ ಧನ್ಯವಾದ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಮಹದೇವ, ಕೃಷ್ಣಯ್ಯ, ಸವಿತಾ, ಶಿವಮ್ಮ ಹಾಜರಿದ್ದರು.