ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ
ಮೈಸೂರು

ಪತ್ನಿ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ

September 20, 2018

ಪುತ್ರನ ಸಾಕ್ಷ್ಯ ಪರಿಗಣಿಸಿ ಆರೋಪಿಗೆ ಶಿಕ್ಷೆ ಪ್ರಕಟ
ಮೈಸೂರು: ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಪತಿರಾಯನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಜಿ.ಜಿ. ಕುರುಮತ್ತಿ ತೀರ್ಪು ನೀಡಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ನಾಗರಾಜು ಅಲಿಯಾಸ್ ನಾಗ(34), ತನ್ನ ಪತ್ನಿ ಸುನೀತಾ(25) ಅವರನ್ನು ಹತ್ಯೆ ಮಾಡಿ ಶಿಕ್ಷೆಗೊಳಗಾದವನಾಗಿದ್ದಾನೆ.

ವಿವರ: ಕೆ.ಆರ್.ನಗರ ತಾಲೂಕು ಹಂಪಾಪುರ ಗ್ರಾಮದ ನರಸಿಂಹೇಗೌಡ ಅವರ ಪುತ್ರಿ ಸುನೀತಾಳನ್ನು ನಾಗರಾಜುವಿಗೆ ವಿವಾಹ ಮಾಡಿಕೊಡಲಾಗಿತ್ತು. ಆ ಸಂದರ್ಭದಲ್ಲಿ 35 ಗ್ರಾಂ ಚಿನ್ನ ಹಾಗೂ 35 ಸಾವಿರ ರೂ. ವರದಕ್ಷಿಣೆಯಾಗಿ ನೀಡಲಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ನಾಗರಾಜು ಕುಡಿತದ ಚಟಕ್ಕೆ ಬಲಿಯಾಗಿದ್ದು, ವರದಕ್ಷಿಣೆಯಾಗಿ ನೀಡಿದ್ದ ಒಡವೆಯನ್ನು ಮಾರಾಟ ಮಾಡಿದ್ದ. ಅಲ್ಲದೇ, ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಪತ್ನಿ ಸುನೀತಾಳನ್ನು ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದನಲ್ಲದೇ, ಆಕೆಯ ನಡತೆ ಮೇಲೆ ಅನುಮಾನಪಟ್ಟು ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ. ಈತನ ಹಿಂಸೆ ತಾಳಲಾರದೆ ಸುನೀತಾ ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು. ಅಲ್ಲಿಗೂ ಹೋಗಿ ಪತಿ ಗಲಾಟೆ ಮಾಡುತ್ತಿದ್ದರಿಂದ ಗ್ರಾಮದ ಮುಖಂಡರು ಪಂಚಾಯಿತಿ ಮಾಡಿ ನಾಗರಾಜುವಿಗೆ ಬುದ್ಧಿವಾದ ಹೇಳಿ ಸುನೀತಾಳನ್ನು ಅವನ ಜೊತೆ ಕಳುಹಿಸಿಕೊಟ್ಟಿದ್ದರು.

ಸುನೀತಾ ತನ್ನ ತಂದೆ ವಾಚ್‍ಮನ್ ಕೆಲಸ ಮಾಡುತ್ತಿದ್ದ ಮೈಸೂರಿನ ರಾಮಕೃಷ್ಣನಗರದ ಎ-ಬಿ ಬ್ಲಾಕ್‍ನ ಸೈಟೊಂದರ ಶೆಡ್‍ನಲ್ಲಿ ಮಕ್ಕಳೊಂದಿಗೆ ವಾಸ ಮಾಡುತ್ತಾ ಮನೆ ಕೆಲಸಕ್ಕೆ ಹೋಗುತ್ತಿದ್ದಳು. 2013ರ ಡಿಸೆಂಬರ್ 12ರಂದು ರಾತ್ರಿ ಶೆಡ್‍ಗೆ ಬಂದಿದ್ದ ನಾಗರಾಜು ಪತ್ನಿಯ ಕತ್ತನ್ನು ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದ. ಈ ಸಂಬಂಧ ಕುವೆಂಪುನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಸುನೀತಾಳ 4 ವರ್ಷದ ಮಗ ನೀಡಿದ ಹೇಳಿಕೆ ಮಹತ್ವದ್ದಾಗಿ ಪರಿಗಣಿಸಿದ ನ್ಯಾಯಾಧೀಶರು ನಾಗರಾಜುವಿಗೆ ಜೀವಾವಧಿ ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಜಿತ್ ಕುಮಾರ್ ಡಿ. ಹಮಿಗಿ ವಾದ ಮಂಡಿಸಿದ್ದರು.

Translate »