ಹಣ ದ್ವಿಗುಣ, ನಿವೇಶನ ಕೊಡಿಸುವ ನೆಪದಲ್ಲಿ ಪರಿಣಿತಾ ಪ್ರಾಪರ್ಟೀಸ್‍ನಿಂದ ಸಾರ್ವಜನಿಕರಿಗೆ ಮಹಾ ವಂಚನೆ
ಮೈಸೂರು

ಹಣ ದ್ವಿಗುಣ, ನಿವೇಶನ ಕೊಡಿಸುವ ನೆಪದಲ್ಲಿ ಪರಿಣಿತಾ ಪ್ರಾಪರ್ಟೀಸ್‍ನಿಂದ ಸಾರ್ವಜನಿಕರಿಗೆ ಮಹಾ ವಂಚನೆ

September 20, 2018

ಮೈಸೂರು: ಹಣ ದ್ವಿಗುಣ ಹಾಗೂ ನಿವೇಶನ ಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂ ಪಡೆದು ವಂಚನೆ ಮಾಡಲಾಗಿದೆ ಎಂದು ಮೈಸೂರಿನ ಪರಿಣಿತಾ ಪ್ರಾಪರ್ಟೀಸ್ ಮತ್ತು ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ ವಿರುದ್ಧ 200ಕ್ಕೂ ಹೆಚ್ಚು ಮಂದಿ ಇಂದು ಕುವೆಂಪುನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆ ಬಳಿ ಕಚೇರಿ ಮಾಡಿಕೊಂಡಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಮಂಜುನಾಥ್ ಎಂಬುವರು ಹಣ ದ್ವಿಗುಣಗೊಳಿಸುವುದಾಗಿ ಹೇಳಿ ತಮ್ಮಿಂದ ಪ್ರತೀ ತಿಂಗಳು ಕಂತು ರೂಪದಲ್ಲಿ ಹಣ ಕಟ್ಟಿಸಿಕೊಂಡು ನೋಟರಿ ಮೂಲಕ ಒಪ್ಪಂದ ಪತ್ರ ಮಾಡಿಕೊಂಡು ಇದೀಗ ಹಣ ಕೊಡದೆ ತಲೆಮರೆಸಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಮೈಸೂರಿನ ಹೊರಭಾಗದ ವಿವಿಧ ಸ್ಥಳಗಳಲ್ಲಿ ತಾವು ಅಭಿವೃದ್ಧಿಪಡಿಸುತ್ತಿರುವ ಬಡಾವಣೆಗಳಲ್ಲಿ ನಿವೇಶನ ನೀಡುವುದಾಗಿ ಲಕ್ಷಾಂತರ ರೂ.ಹಣ ಕಟ್ಟಿಸಿಕೊಂಡು ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ. ಅವರು ಹೇಳಿದ ಜಾಗಗಳು ಕೃಷಿ ಭೂಮಿಯಾಗಿಯೇ ಇದ್ದು, ಭೂ ಮಾಲೀಕರೇ ವ್ಯವಸಾಯ ಮಾಡುತ್ತಿದ್ದು, ಇನ್ನೂ ಅನ್ಯಕ್ರಾಂತ(ಅಲಿನೇಷನ್)ವೇ ಆಗಿಲ್ಲ ಎಂಬುದು ತಿಳಿಯಿತು. ಈಗ ಮಂಜುನಾಥ ನಾಪತ್ತೆಯಾಗಿದ್ದಾನೆ ಎಂದು ಹಣ ಕಳೆದುಕೊಂಡವರು ದೂರಿನಲ್ಲಿ ಆಪಾದಿಸಿದ್ದಾರೆ.

ಅದಕ್ಕೂ ಮೊದಲು ದೂರುದಾರರು ಮಂಜುನಾಥ ವಾಸಿಸುತ್ತಿರುವ ಶ್ರೀರಾಂಪುರ 2ನೇ ಹಂತದ ಮನೆ ಬಳಿಗೆ ತೆರಳಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿ ದ್ದಂತೆಯೇ ಕುವೆಂಪುನಗರ ಠಾಣೆ ಇನ್ಸ್‍ಪೆಕ್ಟರ್ ವಿಜಯಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರನ್ನು ಮನವೊಲಿಸಿ ಲಿಖಿತ ದೂರು ನೀಡಿ, ತಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿ ಪ್ರತಿಭಟನೆ ಸ್ಥಗಿತಗೊಳಿಸಿದರು.

ಕುವೆಂಪುನಗರ, ಶ್ರೀರಾಂಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಂದಿ ಸಂಸ್ಥೆಗೆ ಹಣ ತೊಡಗಿಸಿ ಮೋಸ ಹೋಗಿದ್ದು, ಇದು ವಿನಿವಿಂಕ್ ಅನ್ನೂ ಮೀರಿಸುವ ವಂಚನೆ ಸಂಸ್ಥೆಯಾಗಿದೆ ಎಂದ ದೂರುದಾರರು, ಕೇವಲ ಮೈಸೂರಿನಲ್ಲಷ್ಟೇ ಅಲ್ಲದೆ, ಇಡೀ ರಾಜ್ಯದಾದ್ಯಂತ ತಮ್ಮ ಶಾಖೆಗಳನ್ನು ತೆರೆದು ಮೋಸ ಮಾಡಿದೆ ಎಂದೂ ಆರೋಪಿಸಿದರು. ದೂರು ಸ್ವೀಕರಿಸಿರುವ ಕುವೆಂಪುನಗರ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವ ಸಂಸ್ಥೆ ಮುಖ್ಯಸ್ಥ ಮಂಜುನಾಥ್ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Translate »