ಮೆಗಾ ಮೆಡಿಕಲ್ ಸ್ಟೋರ್ ಬೆಂಕಿಗಾಹುತಿ
ಮೈಸೂರು

ಮೆಗಾ ಮೆಡಿಕಲ್ ಸ್ಟೋರ್ ಬೆಂಕಿಗಾಹುತಿ

June 21, 2020

ಮೈಸೂರು, ಜೂ.20(ಆರ್‍ಕೆ)- ಶನಿವಾರ ಮುಂಜಾನೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೈಸೂರಿನ ಕುವೆಂಪುನಗರದ ಹೆಸರಾಂತ ಮೆಗಾ ಮೆಡಿಕಲ್ ಸ್ಟೋರ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕುವೆಂಪುನಗರದ ಶಾಂತಿಸಾಗರ ಹೋಟೆಲ್ ಎದುರಿನ ನೃಪತುಂಗ ರಸ್ತೆ (ಕೆಎಸ್‍ಆರ್‍ಟಿಸಿ ಬಸ್ ಡಿಪೋಗೆ ಹೋಗುವ ರಸ್ತೆ)ಯಲ್ಲಿ ಮೂರು ಮಹಡಿಯ ಸ್ವಂತ ಕಟ್ಟಡದಲ್ಲಿರುವ ಬೃಹತ್ ಮೆಗಾ ಮೆಡಿಕಲ್ ಸ್ಟೋರ್‍ನಲ್ಲಿ ಶನಿವಾರ ಮುಂಜಾನೆ ಸುಮಾರು 1.30 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿ ಕೊಂಡಿದ್ದು, ಕೆಲವೇ ಕ್ಷಣದಲ್ಲಿ ಹೊಗೆ ಮತ್ತು ಬೆಂಕಿಯ ಜ್ವಾಲೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಮುಂಜಾನೆ ಸುಮಾರು 2.15 ಗಂಟೆಗೆ ಪಕ್ಕದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕುವೆಂಪುನಗರ ಠಾಣೆ ಇನ್ ಸ್ಪೆಕ್ಟರ್ ರಾಜು, ಕೂಡಲೇ ಸರಸ್ವತಿಪುರಂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು, ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರಾದರೂ, ಅಷ್ಟರಲ್ಲಿ ನೆಲ ಮಹಡಿಯ ಮೆಡಿಕಲ್ ಸ್ಟೋರ್ ಮತ್ತು ಮಹಡಿಯಲ್ಲಿ ದಾಸ್ತಾನಿದ್ದ ಔಷಧ ಸಂಪೂರ್ಣವಾಗಿ ಸುಟ್ಟು ಭಸ್ಮವಾದವು. ಮುಂಜಾನೆ ಸುಮಾರು 2.30 ಗಂಟೆ ವೇಳೆಗೆ ಮಾಹಿತಿ ತಿಳಿದು ನಾನು ಸ್ಥಳಕ್ಕೆ ಹೋಗುವಷ್ಟರಲ್ಲಿ ಅಂಗಡಿ ಸಂಪೂರ್ಣ ಸುಟ್ಟುಹೋಗಿತ್ತು ಎಂದು ಮೆಗಾ ಮೆಡಿ ಕಲ್ಸ್ ಮಾಲೀಕ ಸಮೀರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕ್ಯಾಶ್‍ಕೌಂಟರ್‍ನಲ್ಲಿದ್ದ 1.25 ಲಕ್ಷ ರೂ. ನಗದು, ಫ್ರಿಡ್ಜ್, ಕೋಲ್ಡ್ ಸ್ಟೋರೇಜ್, ಮೂರು ಟಿವಿ, 20 ಕಂಪ್ಯೂಟರ್, 20 ಸಿಸಿ ಕ್ಯಾಮರಾ, ಪೀಠೋಪಕರಣ ಸೇರಿದಂತೆ ಕೋಟಿ ರೂ. ಬೆಲೆ ಬಾಳುವ ಔಷಧಿಗಳು ಬೆಂಕಿಗಾಹುತಿ ಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುವಷ್ಟರಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು ಎಂದು ಅವರು ತಿಳಿಸಿದರು.

ಈ ಮಧ್ಯೆ ಮುಂಜಾನೆಯೇ ಅಗ್ನಿ ಶಾಮಕ ವಾಹನಗಳು ಮತ್ತು ಸಿಬ್ಬಂದಿಯ ಕಾರ್ಯಾಚರಣೆಯ ಸದ್ದಿನಿಂದ ಎಚ್ಚೆತ್ತ ಸುತ್ತಮುತ್ತಲ ನಿವಾಸಿಗಳು ಹಾಗೂ ನಂತರ ಮುಂಜಾನೆಯೇ ವಾಯುವಿಹಾರಕ್ಕೆ ತೆರಳುವವರು ಆತಂಕದಿಂದಲೇ ವೀಕ್ಷಿ ಸುತ್ತಾ ನಿಂತಿದುದು ಕಂಡುಬಂತು. ಹಗಲು ವೇಳೆ ಈ ಘಟನೆ ಸಂಭವಿಸಿದ್ದರೆ ಜನ ಹಾಗೂ ವಾಹನ ಸಂಚಾರ ಇರುವು ದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಗ್ನಿಶಾಮಕ ದಳ ಮತ್ತು ಕುವೆಂಪು ನಗರ ಠಾಣೆ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಎಲೆಕ್ಟ್ರಿಷಿಯನ್‍ಗಳನ್ನು ಕರೆಸಿ ಪರಿ ಶೀಲಿಸಿದಾಗ ಅಂಗಡಿಯ ಮೇನ್ ಸ್ವಿಚ್ ಬಾಕ್ಸ್ ಬಳಿ ಶಾರ್ಟ್ ಸಕ್ರ್ಯೂಟ್ ಉಂಟಾಗಿರುವುದು ತಿಳಿಯಿತು ಎಂದು ಮೆಡಿಕಲ್ ಸ್ಟೋರ್ ಮಾಲೀಕ ಸಮೀರ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »