ಮೈಸೂರಲ್ಲಿ ಹಾಡಹಗಲೇ ಚಿನ್ನಾಭರಣ ದೋಚಿದ್ದ ಖದೀಮರು ತುಮಕೂರಲ್ಲಿ ಬಂಧನ
ಮೈಸೂರು

ಮೈಸೂರಲ್ಲಿ ಹಾಡಹಗಲೇ ಚಿನ್ನಾಭರಣ ದೋಚಿದ್ದ ಖದೀಮರು ತುಮಕೂರಲ್ಲಿ ಬಂಧನ

July 19, 2018

ಮೈಸೂರು: ಕಾರ್ಪೊರೇಷನ್ ಅಧಿಕಾರಿಗಳೆಂದು ಹೇಳಿಕೊಂಡು ಮನೆ ಸರ್ವೇ ಮಾಡುವ ಸೋಗಿನಲ್ಲಿ ಮೈಸೂರಿನ ಕುವೆಂಪುನಗರ ಎನ್-ಬ್ಲಾಕ್‍ನಲ್ಲಿ ಹಾಡ ಹಗಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಮೂವರು ಖದೀಮರನ್ನು ತುಮಕೂರು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದ ತುಮಕೂರು ಪೊಲೀಸರು, ಅವರನ್ನು ವಿಚಾರಣೆಗೊಳಪಡಿಸಿದ ವೇಳೆ ಕಾರ್ಪೊರೇಷನ್ ಅಧಿಕಾರಿಗಳೆಂದು ಹೇಳಿಕೊಂಡು ಮೈಸೂರಿನ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ದೋಚಿದ ಪ್ರಕರಣವೂ ಬಯಲಾಯಿತು ಎಂದು ಹೇಳಲಾಗಿದೆ.

ಖದೀಮರು ಹೇಳಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತುಮಕೂರು ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ಮತ್ತು ಸಿಬ್ಬಂದಿ ಖದೀಮರ ಫೋಟೋಗಳೊಂದಿಗೆ ಕುವೆಂಪುನಗರದಲ್ಲಿ ಚಿನ್ನಾಭರಣ ಕಳುವಾಗಿದ್ದ ನಿವಾಸಕ್ಕೆ ಭೇಟಿ ನೀಡಿ, ಮನೆಯೊಡತಿ ಕೆ.ಜಿ.ಲೀಲಾವತಿ ಅವರಿಗೆ ಫೋಟೋಗಳನ್ನು ತೋರಿಸಿದ್ದು, ತಮ್ಮ ಮನೆಯಲ್ಲಿ ಚಿನ್ನಾಭರಣ ದೋಚಿದವರು ಈ ವ್ಯಕ್ತಿಗಳೇ ಎಂಬುದನ್ನು ಅವರು ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ತುಮಕೂರು ಪೊಲೀಸರು ನಾಳೆ (ಜು.19) ಮೂವರೂ ಖದೀಮರನ್ನು ಮೈಸೂರಿಗೆ ಕರೆತಂದು ಮತ್ತಷ್ಟು ವಿವರಗಳನ್ನು ಪಡೆಯಲಿದ್ದಾರೆ. ಅಲ್ಲದೆ ಈ ಖದೀಮರು ಚಿನ್ನಾಭರಣವನ್ನು ಎಲ್ಲಿಟ್ಟಿದ್ದಾರೆ ಎಂಬುದೂ ಸಹ ಗೊತ್ತಾಗಿದ್ದು, ಅದನ್ನು ವಶಪಡಿಸಿಕೊಳ್ಳಲಿದ್ದಾರೆ ಎಂದು ನಂಬಲರ್ಹ ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ತಿಲಕ್ ಪಾರ್ಕ್ ಸಬ್ ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ ಅವರನ್ನು `ಮೈಸೂರು ಮಿತ್ರ’ ದೂರವಾಣಿ ಮೂಲಕ ಸಂಪರ್ಕಿಸಿದಾಗ, ತಾವು ಯಾವುದೇ ಖದೀಮರನ್ನು ಬಂಧಿಸಿಲ್ಲ ಎಂದರು. ಆದರೆ ಈ ಪ್ರಕರಣದ ತನಿಖೆಯಲ್ಲಿ ಮೈಸೂರಿಗೆ ಬಂದಿದ್ದು, ಖದೀಮರ ಬಳಿ ಚಿನ್ನಾಭರಣ ಕಳೆದುಕೊಂಡಿದ್ದ ಮನೆಯವರಿಗೆ ನಾಲ್ವರು ಶಂಕಿತರ ಫೋಟೋಗಳನ್ನು ತೋರಿಸಿದ್ದೇವೆ. ಅವರಲ್ಲಿ ಓರ್ವನನ್ನು ಅವರು ಗುರುತಿಸಿದ್ದಾರೆ. ನಮ್ಮ ತನಿಖೆ ಪ್ರಗತಿಯಲ್ಲಿದ್ದು, ಶೀಘ್ರವೇ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಕರಣದ ವಿವರ: ಮೈಸೂರಿನ ಕುವೆಂಪುನಗರ ಎನ್-ಬ್ಲಾಕ್ ಕೆಎಸ್‍ಆರ್‍ಟಿಸಿ ಡಿಪೋ ರಸ್ತೆಯಲ್ಲಿರುವ ಮನೆಯೊಂದಕ್ಕೆ ಜೂನ್ 22ರಂದು ಬೆಳಿಗ್ಗೆ 11.30ರ ಸುಮಾರಿನಲ್ಲಿ ಮೂವರು ಅಪರಿಚಿತರು ಬಂದಿದ್ದರು. ಆ ವೇಳೆ ಮನೆಯೊಡತಿ ಕೆ.ಜಿ.ಲೀಲಾವತಿ ಮತ್ತು ಕೆಲಸದಾಕೆ ಮಂಗಳಮ್ಮ ಮಾತ್ರ ಮನೆಯಲ್ಲಿದ್ದರು. ಬಂದಿದ್ದ ಅಪರಿಚಿತರು, ತಾವು ಕಾರ್ಪೊರೇಷನ್ ಕಚೇರಿಯಿಂದ ಬಂದಿದ್ದು, ಮನೆಯ ಅಳತೆ ಮಾಡಿ ಆಸ್ತಿ ಕಾರ್ಡ್ ಕೊಡುತ್ತೇವೆ ಎಂದು ನಂಬಿಸಿದ್ದರು.

ಇಬ್ಬರು ವ್ಯಕ್ತಿಗಳು ಮನೆಯನ್ನು ಅಳತೆ ಮಾಡಿದ ನಂತರ ಲೀಲಾವತಿ ಮತ್ತು ಮಂಗಳಮ್ಮ ಅವರನ್ನು ಟೆರೆಸ್‍ಗೆ ಕರೆದೊಯ್ದು ಅಳತೆ ಮಾಡುತ್ತಿದ್ದ ವೇಳೆ ಮನೆಯಲ್ಲಿದ್ದ ಮತ್ತೋರ್ವ 280 ಗ್ರಾಂ ಚಿನ್ನಾಭರಣ ಹಾಗೂ 8 ಸಾವಿರ ರೂ. ನಗದು ದೋಚಿದ್ದಾನೆ.
ಮೂವರು ಮನೆಯಿಂದ ಹೊರ ಬಂದು ಬೈಕ್‍ಗಳಲ್ಲಿ ಹೋಗುವಾಗ ಪದೇ ಪದೇ ಹಿಂತಿರುಗಿ ನೋಡುತ್ತಿದ್ದರಿಂದ ಸಂಶಯಗೊಂಡ ಲೀಲಾವತಿ ಅವರು ಮನೆಯಲ್ಲಿ ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ದೋಚಿರುವುದು ಪತ್ತೆಯಾಗಿತ್ತು.

Translate »