ವರ್ಷವಿಡೀ ದಸರಾ ವಸ್ತು ಪ್ರದರ್ಶನಕ್ಕೆ ಯೋಜನೆ ರೂಪಿಸಲು ಸಚಿವ ಸಾರಾ ಮಹೇಶ್ ಸಲಹೆ
ಮೈಸೂರು

ವರ್ಷವಿಡೀ ದಸರಾ ವಸ್ತು ಪ್ರದರ್ಶನಕ್ಕೆ ಯೋಜನೆ ರೂಪಿಸಲು ಸಚಿವ ಸಾರಾ ಮಹೇಶ್ ಸಲಹೆ

July 19, 2018

ಮೈಸೂರು: ಮೈಸೂರು ದಸರಾ ವಸ್ತುಪ್ರದರ್ಶನವು ವರ್ಷದ 365 ದಿನಗಳು ಶಾಶ್ವತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಯೋಜನೆಯನ್ನು ರೂಪಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸೂಚಿಸಿದರು.

ದಸರಾ ವಸ್ತುಪ್ರದರ್ಶನ ಕಚೇರಿಯಲ್ಲಿ ಬುಧವಾರ ನಡೆದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ 142ನೇ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರಿನ ಹೃದಯ ಭಾಗದಲ್ಲಿರುವ ವಸ್ತುಪ್ರದರ್ಶನ ಪ್ರಾಧಿಕಾರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ವರ್ಷದ 365 ದಿನಗಳು ಪ್ರದರ್ಶನವನ್ನು ಆಯೋಜಿಸಬೇಕು. ಆಗ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರು ಇಲ್ಲಿಗೂ ಭೇಟಿ ನೀಡುತ್ತಾರೆ. ಹಾಗಾಗಿ ಶಾಶ್ವತವಾಗಿ ವಸ್ತುಪ್ರದರ್ಶನ ಆಯೋಜಿಸಲು ಯೋಜನೆಯನ್ನು ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯುತ್‍ಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ: ಪ್ರಾಧಿಕಾರದ ವತಿಯಿಂದ ವಸ್ತು ಪ್ರದರ್ಶನದ ಸಂದರ್ಭದಲ್ಲಿ ಎಲ್ಲಾ ಮಳಿಗೆಗಳಿಗೂ ವಿದ್ಯುತ್ ನೀಡಲು 1.57 ಕೋಟಿ ರೂ. ಖರ್ಚಾಗುತ್ತಿದೆ. ಸದ್ಯ 750 ಕೆವಿ ಸಾಮಥ್ರ್ಯದ ಜನರೇಟರ್ ಗಳಿಂದ ವಿದ್ಯುತ್ ನೀಡಲಾಗುತ್ತಿದ್ದು, ಇದಕ್ಕಾಗಿ ಪ್ರತಿ ದಿನ 1100-1200 ಲೀಟರ್ ಡೀಸೆಲ್ ಖರ್ಚಾಗುತ್ತದೆ. ವಾರಾಂತ್ಯಗಳಲ್ಲಿ ಇನ್ನೂ ಹೆಚ್ಚು ಡೀಸೆಲ್ ಬೇಕಾಗುತ್ತದೆ ಎಂದು ಪ್ರಾಧಿಕಾರದ ಸಿಇಓ ಶಶಿಕುಮಾರ್ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದಕ್ಕಾಗಿಯೇ ಪ್ರತೀ ವರ್ಷ ಇಷ್ಟೊಂದು ಹಣ ಖರ್ಚು ಮಾಡುವುದು ಸರಿಯಲ್ಲ. ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾರಂಪರಿಕವಾಗಿರಬೇಕು: ಈ ವೇಳೆ ಖಾಸಗಿ ಸಂಸ್ಥೆಯು ವಸ್ತುಪ್ರದರ್ಶನ ಅಭಿವೃದ್ಧಿಪಡಿಸುವ ಯೋಜನೆಯನ್ನು ಪ್ರಾತ್ಯಕ್ಷಿಕೆ ಮೂಲಕ ಸಚಿವರಿಗೆ ವಿವರಿಸಿದರು. ಈ ವೇಳೆ ಸಚಿವರು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯಾವ ಯೋಜನೆ ತಯಾರಿಸಿದರೂ ನಿರ್ವಹಣೆ ರಹಿತ-ಪಾರಂಪರಿಕತೆಯಿಂದ ಕೂಡಿರಬೇಕು ಎಂದು ಸಲಹೆ ನೀಡಿದರು.

ಉದ್ಯೋಗ ಮೇಳ: ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ದಸರಾ ಮಹೋತ್ಸವಕ್ಕೂ 15 ದಿನ ಮೊದಲು ಸರ್ಕಾರದ ವತಿಯಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದರು.

ದಸರಾಗೂ ಮುನ್ನ ಚುಂಚನಕಟ್ಟೆ ಜಲಪಾತೋತ್ಸವ: ಪ್ರತೀ ವರ್ಷದಂತೆ ಈ ವರ್ಷವೂ ಚುಂಚನಕಟ್ಟೆ ಜಲಪಾತೋತ್ಸವವನ್ನು ಆಯೋಜಿಸುತ್ತಿದ್ದು, ದಸರಾಗೂ ಮುನ್ನವೇ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ದಸರೆಗೆ 4 ದಿನ ರಜೆ : ದಸರಾ ಮಹೋತ್ಸವವನ್ನು ನಿಗದಿಪಡಿಸಿರುವ ದಿನಾಂಕದಲ್ಲಿ 3 ದಿನ ನಿರಂತರ ರಜೆ ಇದ್ದು, ಈ ದಿನಾಂಕದ ನಡುವೆ ಒಂದು ಶನಿವಾರ ಬರುತ್ತದೆ. ಆ ದಿನ ರಾಜ್ಯಾದ್ಯಂತ ಎಲ್ಲಾ ನೌಕರರನ್ನು ಕೆಲಸ ಮಾಡಿಸಿ, ಆ ದಿನದ ರಜೆಯನ್ನು 3 ದಿನಗಳ ಜೊತೆಗೆ ಸೇರಿಸಿಕೊಂಡು ಒಟ್ಟು 4 ದಿನ ರಜೆ ದೊರೆಯುವಂತೆ ಮಾಡಲು ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರೊಂದಿಗೆ ಚರ್ಚಿಸಿ, ಮನವಿ ಮಾಡುತ್ತೇನೆ ಎಂದರು.

ಪಾರ್ಕಿಂಗ್ ವ್ಯವಸ್ಥೆ: ಮೈಸೂರು ನಗರದ ಬೆಳವಣಿಗೆ ದೃಷ್ಠಿಯಿಂದ ಪಾರ್ಕಿಂಗ್‍ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ವಸ್ತು ಪ್ರದರ್ಶನ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಪುರಾತತ್ವ ಇಲಾಖೆ: ನಂತರ ವಸ್ತುಪ್ರದರ್ಶನ ಆವರಣದಲ್ಲಿರುವ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಇಲಾಖೆಗೆ ನೀಡಿದ್ದ ಅನುದಾನದಲ್ಲಿ ಶೇ.70 ರಷ್ಟು ಮಾತ್ರ ಬಳಕೆ ಮಾಡಿಕೊಂಡಿರುವುದನ್ನು ಗಮನಿಸಿದ ಸಚಿವರು, ಮುಂದಿನ ದಿನಗಳಲ್ಲಿ ನೂರಕ್ಕೆ 90ರಷ್ಟಾದರೂ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Translate »