ಗೋಲ್ಡನ್ ಚಾರಿಯಟ್ ರೈಲಿನಿಂದ 10 ವರ್ಷದಲ್ಲಿ 40 ಕೋಟಿ ನಷ್ಟ
ಮೈಸೂರು

ಗೋಲ್ಡನ್ ಚಾರಿಯಟ್ ರೈಲಿನಿಂದ 10 ವರ್ಷದಲ್ಲಿ 40 ಕೋಟಿ ನಷ್ಟ

July 19, 2018
  • ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಬಹಿರಂಗ
  • ಈ ವಿಶೇಷ ರೈಲಿನ ವಿನ್ಯಾಸ ಬದಲಾವಣೆ

ಮೈಸೂರು: ಕಳೆದ 10 ವರ್ಷದಲ್ಲಿ ಗೋಲ್ಡನ್ ಚಾರಿಯಟ್ ರೈಲಿನಿಂದ ರಾಜ್ಯ ಸರ್ಕಾರಕ್ಕೆ 40 ಕೋಟಿ ನಷ್ಟವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಅಶೋಕಪುರಂನ ರೈಲ್ವೆ ಕಾರ್ಯಗಾರಕ್ಕೆ ಭೇಟಿ ನೀಡಿ, ಹೊಸ ವಿನ್ಯಾಸದಲ್ಲಿ ಸಿದ್ದವಾಗುತ್ತಿರುವ ಗೋಲ್ಡನ್ ಚಾರಿಯಟ್ ರೈಲುಗಾಡಿ ವಿನ್ಯಾಸ ಬದಲಾವಣೆ ಕಾಮಗಾರಿ ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ, ರೈಲ್ವೆ ಇಲಾಖೆ, ಖಾಸಗಿ ಸಹಭಾಗಿತ್ವದಲ್ಲಿ ಗೋಲ್ಡನ್ ಚಾರಿಯಟ್ ರೈಲುಗಾಡಿ ಸಂಚರಿಸುತ್ತಿತ್ತು. ಆದರೆ, ಕೆಲವು ಸಮಸ್ಯೆಗಳಿಂದಾಗಿ ಪ್ರತೀ ವರ್ಷ 4 ಕೋಟಿ ರೂ. ನಂತೆ 10 ವರ್ಷಕ್ಕೆ 40 ಕೋಟಿ ರೂ. ನಷ್ಟವಾಗಿದೆ. ಇಂದು ಅವೆಲ್ಲಾ ಸಮಸ್ಯೆಗಳನ್ನು ಸರಿಪಡಿಸಿದ್ದು, ರೈಲು ಲಾಭದಾಯಕವಾಗಿ ಸಂಚರಿಸಲು ಆಗಬೇಕಾದ ಬದಲಾವಣೆಗಳನ್ನು ತಂದು ಅಧಿಕೃತ ಸಮಯದಲ್ಲಿ ರೈಲು ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.

ಗೋಲ್ಡನ್ ಚಾರಿಯಟ್ ರೈಲನ್ನು ಆರಂಭಿಸಿ 10 ವರ್ಷ ಕಳೆದಿದ್ದು, ಅದರ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತಿದೆ. ಪ್ರವಾಸಿಗರಿಗೆ ಅನುಕೂಲವಾಗಬೇಕು ಮತ್ತು ಸಾಂಸ್ಕೃತಿಕ ನಗರಿಯ ವೈಶಿಷ್ಟ್ಯ ಉಳಿಯಬೇಕೆಂಬುದು ಇಲಾಖೆಯ ಭಾವನೆ. ಹಾಗಾಗಿ ಈ ಬಾರಿ ರೈಲು ಲಾಭದಾಯಕವಾಗಿ ಸಂಚರಿಸಲು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.

1200ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಾದೀನದಲ್ಲಿದ್ದು, ಅದರಲ್ಲಿ 831 ರಾಜ್ಯ ಸರ್ಕಾರ, 600ಕ್ಕೂ ಹೆಚ್ಚು ಕೇಂದ್ರ ಸರ್ಕಾರದ್ದಾಗಿವೆ. ಅವುಗಳನ್ನು ಸಾಧ್ಯವಾದಷ್ಟು ಸಂರಕ್ಷಿಸಲಾಗುತ್ತಿದೆ. 25ಸಾವಿರ ಪಾರಂಪರಿಕ ತಾಣಗಳಿದ್ದು, ಅವುಗಳಿಗೆ ಹೆಚ್ಚು ಆದ್ಯತೆ ನೀಡಿ ಅಭಿವೃದ್ಧಿಗೊಳಿಸಲಾಗುವುದು ಎಂದ ಅವರು, ಮೈಸೂರಿನ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಎರಡನ್ನೂ ಹೊಸದಾಗಿ ನಿರ್ಮಿಸಬೇಕಿದೆ ಎಂದು ಹೇಳಿದರು.

ಅದ್ದೂರಿ ದಸರಾ: ಈ ಬಾರಿಯ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮೊದಲ ಹಂತದ ದಸರಾ ಉನ್ನತ ಸಮಿತಿ ಸಭೆ ನಡೆದಿದ್ದು, ಸಚಿವರು, ಶಾಸಕರು ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದೇ ರೀತಿ ಜಿಲ್ಲೆಯಲ್ಲೂ ಸಭೆಗಳನ್ನು ನಡೆಸಿ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಿ, ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಅದ್ದೂರಿ ದಸರಾ ಆಚರಿಸಲಾಗುವುದು ಎಂದ ಅವರು, ಕಳೆದ ದಸರಾ ಮಹೋತ್ಸವದ ಬಾಕಿ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೈಸೂರು ಅಶೋಕಪುರಂನ ರೈಲ್ವೆ ಕಾರ್ಯಗಾರಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭೇಟಿ ನೀಡಿ, ಹೊಸ ವಿನ್ಯಾಸದಲ್ಲಿ ಸಿದ್ದವಾಗುತ್ತಿರುವ ಗೋಲ್ಡನ್ ಚಾರಿಯಟ್ ರೈಲಿನ ವಿನ್ಯಾಸ ಬದಲಾವಣೆಯನ್ನು ವೀಕ್ಷಿಸಿದರು.

Translate »