ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಿ
ಮಂಡ್ಯ

ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಿ

July 15, 2021

ಕೆ.ಆರ್.ನಗರ, ಜು.14(ಕೆಟಿಆರ್)- ರಾಜಕೀಯ ನಿಂತನೀರಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಅಲ್ಪ ಮತದಲ್ಲಿ ಸೋಲುಂಡ ಡಿ.ರವಿಶಂಕರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕಾರ್ಯಕರ್ತರಿಗೆ ಕರೆ ನೀಡಿದರು.

ಪಟ್ಟಣದ ಭೂ ಅಭಿವೃದ್ಧಿ ರೈತ ಸಮುದಾಯ ಭವನ ದಲ್ಲಿ ಜಿಲ್ಲಾ ಮತ್ತು ತಾಲೂಕು ಕಾಂಗ್ರೆಸ್ ಸಮಿತಿ ಯಿಂದ ನಡೆದ ಸಹಾಯಹಸ್ತ ಹಾಗೂ ಪ್ರಗತಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕಾಂಗ್ರೆಸ್ 224 ವಿಧಾನಸಭಾ ಕ್ಷೇತ್ರದಲ್ಲಿಯೂ ಕೊವೀಡ್-19ನಿಂದ ಬಳಲುತ್ತಿದ್ದವರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳ ಶಾಹಿಗಳ ಪರವಾಗಿ ಆಡಳಿತ ನಡೆಸುತ್ತಿದ್ದು, ಕೊವೀಡ್- 19ನಿಂದ ಅಸಂಘಟಿತ ಕಾರ್ಮಿಕರು ಕೆಲಸವಿಲ್ಲದೇ ಆಹಾರ ಕ್ಕಾಗಿ ದಿನಗಟ್ಟಲೇ ಸರತಿನಲ್ಲಿ ನಿಂತು ದಿನಸಿ ಕಿಟ್ ಪಡೆಯು ತ್ತಿರುವುದು ಬಹಳ ನೋವಿನ ಸಂಗತಿ ಎಂದು ವಿಷಾದಿಸಿದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ದಿವಾಳಿಯಾಗಿದ್ದು, ತಂದೆ-ಮಗ ಇಬ್ಬರು ಸೇರಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಸ್ವಪಕ್ಷೀಯ ವಿಧಾನ ಪರಿಷತ್ ಸದಸ್ಯ ಎ.ಹೆಚ್. ವಿಶ್ವನಾಥ್ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮುಖಂಡರು ಇವರ ಬಂಡವಾಳ ಬಯಲು ಮಾಡುತ್ತಿರುವುದು ಬಿಎಸ್‍ವೈ ಸರ್ಕಾರ ಭ್ರಷ್ಟ ಸರ್ಕಾರ ಎಂಬುದಕ್ಕೆ ಸಾಕ್ಷಿ ಎಂದು ಕಿಡಿ ಕಾರಿದರು.

ಕೆಪಿಸಿಸಿ ವೀಕ್ಷಕಿ ಮಂಜುಳಾ ನಾಯ್ಡು ಮಾತನಾಡಿ, ಎರಡು ಬಾರಿ ಪ್ರಧಾನಿಯಾದ ಮನಮೋಹನಸಿಂಗ್ ಹಾಗೂ ಸೋನಿಯಗಾಂಧಿ ನೇತೃತ್ವದ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏಷ್ಟೇ ಏರಿಕೆಯಾಗಿ ದ್ದರೂ ದೇಶದಲ್ಲಿ ಲೀ.ಗೆ 70 ರೂ.ಗಿಂತ ದರ ಹೆಚ್ಚಿಸಿರಲಿಲ್ಲ. ನರೇಂದ್ರ ಮೋದಿ ಸರ್ಕಾರ 100 ರೂ. ಗಿಂತ ಹೆಚ್ಚು ಬೆಲೆ ಏರಿಕೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿದರು. ಇದಕ್ಕೂ ಮೊದಲು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪ್ರೆಟೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ, ಸೈಕಲ್, ಸ್ಕೂಟರ್, ಎತ್ತಿನಗಾಡಿಗಳ ಮೂಲಕ ಜಾಥಾ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾ ಯಿತು. ಬಳಿಕ ಮೈಸೂರು-ಹಾಸನ ರಸ್ತೆಯ ಮೂಲಕ ಸಾಗಿ ರೈತ ಸಮುದಾಯ ಭವನದಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಡಿ. ರವಿಶಂಕರ್, ಜಿಪಂ ಮಾಜಿ ಸದಸ್ಯರಾದ ಜಿ.ಆರ್. ರಾಮೇಗೌಡ, ಶಿವರಾಮ್, ಸುಧಾ ಮಹದೇವ್, ಪುರಸಭೆ ಅಧ್ಯಕ್ಷ ಕೆ.ಜಿ. ಸುಬ್ರಮಣ್ಯ, ಸದಸ್ಯರಾದ ಸಿದ್ದಿಕ್, ಜಾವಿದ್, ಕೋಳಿಪ್ರಕಾಶ್, ನಟರಾಜು, ಮೈಮುಲ್ ನಿರ್ದೇಶಕ ಜಗದೀಶ್, ಗ್ರಾಪಂ ಅಧ್ಯಕ್ಷರಾದ ಜಯಣ್ಣ, ನಾಗರಾಜು, ಎಪಿಎಂಸಿ ನಿರ್ದೇಶಕರಾದ ನಟರಾಜು, ನಾಗೇಂದ್ರ, ಹೆಚ್.ಪಿ.ಪ್ರಶಾಂತ್, ತಾಪಂ ಮಾಜಿ ಅಧ್ಯಕ್ಷರಾದ ಹಾಡ್ಯ ಮಹದೇವಸ್ವಾಮಿ, ಕೆ.ಪಿ.ಯೋಗೇಶ್, ಜಯರಾಮೇಗೌಡ, ಮಲ್ಲಿಕಾ ರವಿಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ ಇತರರಿದ್ದರು.

Translate »