ರಾಜ್ಯದಲ್ಲಿ 150 ಸ್ಥಾನ ಗೆದ್ದು  ಮತ್ತೆ ಸರ್ಕಾರ ರಚಿಸುತ್ತೇವೆ
ಮೈಸೂರು

ರಾಜ್ಯದಲ್ಲಿ 150 ಸ್ಥಾನ ಗೆದ್ದು ಮತ್ತೆ ಸರ್ಕಾರ ರಚಿಸುತ್ತೇವೆ

April 13, 2022

ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್‍ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸುದ್ದಿಗೋಷ್ಠಿ ನಡೆಸಿದರು. ಸಚಿವ ಗೋಪಾಲಯ್ಯ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ, ಶಾಸಕ ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ ಚಿತ್ರದಲ್ಲಿದ್ದಾರೆ.

ಮೈಸೂರು, ಏ.12(ಎಸ್‍ಬಿಡಿ)- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗಳಿಸು ವುದರೊಂದಿಗೆ ಮತ್ತೆ ಬಿಜೆಪಿ ಸರ್ಕಾರ ರಚನೆ ಯಾಗಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಲಲಿತಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ವಿದೆ. ಕಳೆದಿರುವ 4 ವರ್ಷಗಳಲ್ಲಿ 3 ವರ್ಷ ಅಧಿಕಾರ ನಡೆಸಿರುವ ಬಿಜೆಪಿ ಸಂಘಟನಾತ್ಮವಾಗಿ ಬೆಳೆದಿದೆ. ಎರಡೂವರೆ ವರ್ಷ ಕೋವಿಡ್ ಕಾಲಘಟ್ಟದಲ್ಲೂ ಸಾಕಷ್ಟು ಸಂಘಟನಾತ್ಮಕ ಚಟುವಟಿಕೆ ನಡೆಸಲಾಗಿದೆ. ಸರ್ವ ವ್ಯಾಪಿ-ಸರ್ವ ಸ್ಪರ್ಶ ಪಕ್ಷವಾಗಿರುವ ಬಿಜೆಪಿ, ಗ್ರಾಮ ಪಂಚಾಯ್ತಿ, ವಿಧಾನಪರಿಷತ್ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 130 ಸ್ಥಾನ ಗೆಲ್ಲಬೇಕೆಂದಿದ್ದರು. ಆದರೆ ಇಂದಿನ ವಾತಾ ವರಣ ಗಮನಿಸಿದರೆ 150 ಸ್ಥಾನ ಗೆಲ್ಲುವ ವಿಶ್ವಾಸ ವಿದ್ದು, ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿ ಕೊಳ್ಳಲಾಗುತ್ತಿದೆ ಎಂದರು.

ಮೈಸೂರು ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ. ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದಾಗ ಸಚಿವ ಸ್ಥಾನ ಹಂಚಿಕೆಯಲ್ಲಿ ವ್ಯತ್ಯಾಸ ವಾಗುವುದು ಸಹಜ. ಆದರೆ ಖಂಡಿತವಾಗಿ ಮೈಸೂರಿಗೂ ನ್ಯಾಯ ಸಿಗಲಿದೆ ಎಂದರು.

3 ತಂಡಗಳ ರಾಜ್ಯ ಪ್ರವಾಸ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಂಗಳೂರು ವಿಭಾಗ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಸಭಾ ಸದಸ್ಯ ಅರುಣ್ ಸಿಂಗ್ ನೇತೃತ್ವದಲ್ಲಿ ಬೆಳಗಾವಿ ವಿಭಾಗ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ವಿ.ಸೋಮಣ್ಣ, ಗೋಪಾಲಯ್ಯ, ನಾರಾ ಯಣಗೌಡ ಇನ್ನಿತರ ನಾಯಕರ ನೇತೃತ್ವದಲ್ಲಿ ಮೈಸೂರು ವಿಭಾಗದಲ್ಲಿ ಇಂದಿನಿಂದ ರಾಜ್ಯ ಪ್ರವಾಸ ಆರಂಭವಾಗಿದೆ. ಈ ಮೂರು ತಂಡಗಳು ಏ.24ರವರೆಗೆ ಆಯಾಯ ವಿಭಾಗಗಳ ಕೇಂದ್ರಗಳು, ವ್ಯಾಪ್ತಿಗೆ ಒಳಪಡುವ ನಾಲ್ಕೈದು ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಪ್ರಮುಖರು, ಕೋರ್ ಕಮಿಟಿ ಸಭೆ ನಡೆಸಿ, ಪ್ರಸ್ತುತ ಸ್ಥಿತಿಗತಿ ಅವಲೋಕಿಸಲಿವೆ. ವಿಭಾಗ ಮಟ್ಟದಿಂದ ಬೂತ್‍ವರೆಗೂ ಸಂಪರ್ಕಿಸಿ, ಸಂವಾದ ನಡೆಸಿ ಪಕ್ಷ ಹಾಗೂ ಸರ್ಕಾರದ ಬಗ್ಗೆ ಜನರ ಅಭಿಪ್ರಾಯ, ನಿರೀಕ್ಷೆ ಸೇರಿದಂತೆ ಸಮಗ್ರ ಮಾಹಿತಿ ಕ್ರೂಢೀಕರಿಸಲಾಗು ವುದು. ಮುಂದಿನ ಚುನಾವಣೆ ನೀಲನಕ್ಷೆ ಆಧಾರದಲ್ಲಿ ಯಾತ್ರೆ ರೂಪಿಸಲಾಗುವುದು ಎಂದರು.

ರಾಜಕೀಯ ಸಂಘಟನೆ ತಯಾರಿ: ಈವರೆಗೆ ಪೇಜ್ ಪ್ರಮುಖ್ ಎಂದಿತ್ತು. ಇನ್ನು ಮುಂದೆ ಮತದಾರರ ಪಟ್ಟಿಯ ಒಂದು ಪೇಜ್ ಜವಾಬ್ದಾರಿಯನ್ನು 6 ಮಂದಿಯುಳ್ಳ ಪೇಜ್ ಕಮಿಟಿಗೆ ವಹಿಸಲಾಗುವುದು. ಈಗಾಗಲೇ ಶೇ.60ರಷ್ಟು ಪೇಜ್ ಕಮಿಟಿ ರಚನೆಯಾ ಗಿದ್ದು, ಈ ಕಮಿಟಿಗಳ ಮೇಲ್ವಿಚಾರಣೆಯನ್ನು ವಿಸ್ತಾರ್ ಕಮಿಟಿಗೆ ವಹಿಸಲಾಗುವುದು. ಶಾಸಕ ಎಸ್.ಎ.ರಾಮದಾಸ್ ತಮ್ಮ ಕ್ಷೇತ್ರದಲ್ಲಿ ಪರಿಚಯಿಸಿದ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಿದ್ದು, ಅದು ಯಶಸ್ವಿಯಾಗಿದೆ. ಹೀಗೆ ಸಂಘಟನಾತ್ಮವಾಗಿ ಸಾಕಷ್ಟು ಚಟುವಟಿಕೆ ನಡೆದಿದ್ದು, ಇನ್ನು ಮುಂದೆ ರಾಜಕೀಯ ಸಂಘಟನೆಯನ್ನು ಚುರುಕುಗೊಳಿಸಲಾಗುವುದು. ಈ ಹಿಂದೆ ಕೈಗೊಂಡಿದ್ದ ಯಾತ್ರೆಗಳಿಂದ ಚುನಾವಣೆಗಳಿಗೆ ಸಹಕಾರಿಯಾಗಿರುವ ಅನುಭವದೊಂ ದಿಗೆ ಅಚ್ಚುಕಟ್ಟಾದ ಕಾರ್ಯಕ್ರಮಗಳಿಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.

ಜನರ ನಂಬಿಕೆ ಹೆಚ್ಚಿದೆ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳು, ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್ ನಿರ್ವಹಣೆಯಲ್ಲಿನ ಯಶಸ್ಸು, ಉಕ್ರೇನ್‍ನಲ್ಲಿ ಸಿಲುಕಿದ್ದ 22 ಸಾವಿರ ಭಾರತೀಯರನ್ನು ಯುದ್ಧದ ನಡುವೆಯೇ ಸುರಕ್ಷಿತವಾಗಿ ಕರೆತಂದದ್ದು, ಕೊರೊನಾ ಸಂಕಷ್ಟದಲ್ಲೂ ಆರ್ಥಿಕ ಪರಿಸ್ಥಿತಿ ಕುಸಿಯದಂತೆ ಕಾಯ್ದುಕೊಂಡಿದ್ದು, ಭಾರತಕ್ಕೆ ದೊರಕುತ್ತಿರುವ ಜಾಗತಿಕ ಗೌರವ, ಹೀಗೆ ಹಲವು ಕಾರಣಗಳಿಂದ ಜನರಲ್ಲಿ ಬಿಜೆಪಿ ಮೇಲೆ ನಂಬಿಕೆ, ವಿಶ್ವಾಸ ಹಾಗೂ ನಿರೀಕ್ಷೆ ಹೆಚ್ಚಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯತ್ತ ಕಾಂಗ್ರೆಸ್, ಜೆಡಿಎಸ್ ಪ್ರಮುಖರು: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಭ್ರಮನಿರಸರಾಗಿದ್ದಾರೆ. ಜಿಲ್ಲೆ, ತಾಲೂಕು, ಮಂಡಲ ಮಟ್ಟದ ಅಪಾರ ಪ್ರಮುಖರಲ್ಲಿ ಬಿಜೆಪಿ ಸೇರುವ ಆಕಾಂಕ್ಷೆಯಿದೆ. ಆದರೆ ಏಕಾಏಕಿ ಸೇರ್ಪಡೆ ಮಾಡಿಕೊಳ್ಳುವುದಕ್ಕಿಂತ ಆಯಾಯ ಭಾಗದ ಕಾರ್ಯಕರ್ತರ ಅಭಿಪ್ರಾಯ, ಸೇರ್ಪಡೆ ಯಿಂದಾಗುವ ಪರಿಣಾಮದ ಬಗ್ಗೆ ಪರಾಮರ್ಶಿಸಿ ಮುಂದುವರೆಯಲು ನಿರ್ಧರಿಸಲಾಗಿದೆ.

ಯಾರೊಂದಿಗೂ ಹೊಂದಾಣಿಕೆ ಇಲ್ಲ: ಬಿಜೆಪಿ ಅಭಿವೃದ್ಧಿ ಮೇಲೆ ನಂಬಿಕೆ ಇಟ್ಟಿದೆ. ಆಡಳಿತ ಪಕ್ಷಕ್ಕೆ ಹತ್ತಾರು ಸಮಸ್ಯೆಗಳು, ವಿಚಾರಗಳು ಎದುರಾಗುವುದು ಸಹಜ. ಆದರೆ ಎಲ್ಲದರಲ್ಲೂ ಲಾಭ ನೀಡುವ ಪಕ್ಷ ನಮ್ಮದಲ್ಲ. ಪರಿಸ್ಥಿತಿಯನ್ನು ಸಮರ್ಥವಾಗಿ ನಿಬಾಯಿಸಿಕೊಂಡು ಜವಾಬ್ದಾರಿಯುತವಾಗಿ ಸರ್ಕಾರ ನಡೆಯುತ್ತದೆ. ಅಭಿವೃದ್ಧಿ ಹಾಗೂ ಸಂಘಟನೆ ಮಾತ್ರ ನಮ್ಮ ಪಕ್ಷದ ತಂತ್ರಗಳು. ಬಿಜೆಪಿ ಚುನಾವಣೆಯಲ್ಲಿ ಯಾವ ಸಂಘಟನೆ ಅಥವಾ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಸ್ವಂತ ಬಲದಲ್ಲೇ ಸ್ಪರ್ಧೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ವಿ.ಸೋಮಣ್ಣ, ಕೆ.ಸಿ.ನಾರಾಯಣಗೌಡ, ಕೆ.ಎಸ್.ಈಶ್ವರಪ್ಪ, ಗೋಪಾಲಯ್ಯ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಪಕ್ಷದ ಉಪಾಧ್ಯಕ್ಷ ಎಂ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ವಕ್ತಾರ ಮಹೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »