ಮೈಸೂರಲ್ಲಿ ಹಾಡಹಗಲೇ ಮಹಿಳೆ ಸರ ಅಪಹರಣ
ಮೈಸೂರು

ಮೈಸೂರಲ್ಲಿ ಹಾಡಹಗಲೇ ಮಹಿಳೆ ಸರ ಅಪಹರಣ

October 1, 2018

ಕೃತ್ಯ ನಡೆಯುತ್ತಿದ್ದರೂ ಆಕೆಯ ರಕ್ಷಣೆಗೆ ಬಾರದ ವಾಯುವಿಹಾರಿಗಳು
ಮೈಸೂರು: ವಾಯುವಿಹಾರದಲ್ಲಿದ್ದ ಮಹಿಳೆ ಕೊರಳಿನಲ್ಲಿದ್ದ 80 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಅಪರಿಚಿತ ಯುವಕ ಪರಾರಿಯಾಗಿರುವ ಘಟನೆ ಮೈಸೂರಿನ ಜೆಎಸ್‍ಎಸ್ ಬಡಾವಣೆಯ ಡಾ. ರಾಜ್‍ಕುಮಾರ್ ರಸ್ತೆ ಬಳಿ ಶನಿವಾರ ಸಂಜೆ ಸಂಭವಿಸಿದೆ. ಮೈಸೂರಿನ ರಾಘವೇಂದ್ರನಗರ ನಿವಾಸಿ ಸುಮತಿ (34) ಚಿನ್ನದ ಸರ ಕಳೆದುಕೊಂಡವರು. ಜೆಎಸ್‍ಎಸ್ ಬಡಾವಣೆ ಬಳಿ ವಾಯುವಿಹಾರ ಮಾಡುತ್ತಿ ದ್ದಾಗ ಹೋಂಡಾ ಆಕ್ಟೀವಾ ಸ್ಕೂಟರ್‍ನಲ್ಲಿ ಬಂದ ಯುವಕನೋರ್ವ ಹಠಾತ್ತನೇ ಎರಗಿ ಅವರ ಕೊರಳಿನಲ್ಲಿದ್ದ ಸುಮಾರು 2.5 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನದ ಸರ ಎಗರಿಸಿ ಶನಿವಾರ ಸಂಜೆ ಸುಮಾರು 6 ಗಂಟೆ ವೇಳೆ ಪರಾರಿಯಾಗಿದ್ದಾನೆ.

ಸುಮತಿ ಅವರು ಸರವನ್ನು ಗಟ್ಟಿಯಾಗಿ ಹಿಡಿದು ಸುಮಾರು 2 ನಿಮಿಷ ಹೋರಾಡಿ ದರಾದರೂ, ಆಕೆಯನ್ನು ಕೆಳಕ್ಕೆ ಬೀಳಿಸಿ ಯುವಕ ಸರ ಕಿತ್ತುಕೊಂಡು ಪರಾರಿ ಯಾಗಿದ್ದಾನೆ. ಪರಿಣಾಮ ಸುಮತಿ ಅವರ ಕೈಗಳು ತರಚಿದ್ದು, ವಿಪರ್ಯಾಸವೆಂದರೆ ಅಲ್ಲಿ ಈ ದೃಶ್ಯ ಕಂಡರೂ ವಾಯುವಿಹಾರ ಮಾಡುತ್ತಿದ್ದ ಸಾರ್ವಜನಿಕರ್ಯಾರೂ ಆಕೆಯ ರಕ್ಷಣೆಗೆ ಬರಲಿಲ್ಲ. ಸರ ಕಿತ್ತುಕೊಂಡು ಪರಾರಿಯಾದ ನಂತರ ಹತ್ತಿರ ಬಂದವರು, ನಾವೇನೋ ಫ್ಯಾಮಿಲಿ ಗಲಾಟೆ ಇರಬಹುದೆಂದು ಸುಮ್ಮನಾದೆವು ಎಂದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನಜರ್‍ಬಾದ್ ಠಾಣೆ ಪೊಲೀಸರು, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »