ಹುಣಸೂರು: ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ
ಮೈಸೂರು

ಹುಣಸೂರು: ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ

October 1, 2018

ಹುಣಸೂರು: ನಗರದ ಚೆಸ್ಕ್‍ಂ ವಿಭಾಗದ ಕಚೇರಿಯಲ್ಲಿ ಶನಿವಾರ ಮೈಸೂರು ವಿಭಾಗದ ಇಇ ಮುಜಾಹಿದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ವಿದ್ಯುತ್ ಸಮಸ್ಯೆಗಳು ಅನಾವರಣಗೊಂಡಿತ್ತು.
ಗ್ರಾಮಹರೊಬ್ಬರು ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ನಿಗದಿತ ಸಮಯಕ್ಕೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಸೆಸ್ಕ್ ಸಿಬ್ಬಂದಿ ಗ್ರಾಹಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ದೂರಿದರು.

ತಾಲೂಕಿನ ಕಣಗಾಲ್ ಗ್ರಾಮದ ರಾಮೇಗೌಡರ ಮನೆಯ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಇಲಾಖೆಯ ಸಿಬ್ಬಂದಿ ಮನೆಯಲ್ಲಿದ ಮಹಿಳೆಯರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ರೈತರು ಬೆಳೆದ ಬೆಳೆ ನಿಗದಿತ ಸಮಯಕ್ಕೆ ಕೈ ಸೇರದ ಕಾರಣ ವಿದ್ಯುತ್ ಬಿಲ್ ಪಾವತಿಸಲು ವಿಳಂಭವಾಯಿತು. ಈಗ ತಂಬಾಕು ಮಾರುಕಟ್ಟೆ ಅರಂಭವಾಗಿದೆ. ತಂಬಾಕು ಮಾರಾಟವಾದ ಒಂದು ತಿಂಗಳಲ್ಲಿ ಬಿಲ್ ಪಾವತಿಸುತ್ತೇವೆ. ಆ ವರೆಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ರೈತರ ಮನವಿಗೆ ಸಮ್ಮತಿಸಿದ ಇಇ ಮುಜಾಹಿದ್ ಖಾನ್ ಅವರು, ಗ್ರಾಹಕರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಇಲಾಖೆ ಅಧಿಕಾರಿ ಮಹದೇವಯ್ಯ ಹಾಗೂ ಸಿಬ್ಬಂದಿ ಸಂಗಪ್ಪ ಅವರಿಗೆ ಸ್ಥಳದಲ್ಲಿಯೇ ನೋಟಿಸ್ ಜಾರಿಗೊಳಿಸುವಂತೆ ಆದೇಶ ನೀಡಿದರು.
ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಗೊಂಡಿದರು, ವಿದ್ಯುತ್ ಭಾಗ್ಯ ಈವರೆಗೆ ದೊರೆಯದಿರುವ ಕಾಡಂಚಿನ ಚಂದನಗಿರಿ ಹಾಡಿ, ನೇರಳಕುಪ್ಪೆ ಹಾಡಿ, ಕಚುವಿನಹಳ್ಳಿ, ಕೆ.ಜಿ.ಹಬ್ಬನಕುಪ್ಪೆ ಭಾಗಗಳಲ್ಲಿ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ನೇರಳಕುಪ್ಪೆ ಗ್ರಾಮದ ಮುಖಂಡ ಗಣಪತಿ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೊಂದು ತಾಂತ್ರಿಕ ದೋಷದಿಂದ ಸ್ವಲ್ಪ ವಿಳಂಭವಾಗಿದೆ. ಶೀಘ್ರದಲ್ಲಿಯೇ ಅದನ್ನು ಬಗೆಹರಿಸಿ ಸಂಪರ್ಕ ನೀಡಲಾಗುವುದು ಎಂದು ತಿಳಿಸಿದರು.

ಕಚುವಿನಹಳ್ಳಿ ಗ್ರಾಮದ ರೈತ ಸುಜೇಂದ್ರ ಮಾತನಾಡಿ, ಕಾಡÀಂಚಿನ ಪ್ರದೇಶದ ಕೃಷಿ ಭೂಮಿಗಳಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿದ್ದು ರಾತ್ರಿ ಸಮಯದಲ್ಲಿ ಆನೆ ಹಾವಳಿ ಇದೆ. ಆನೆಯಿಂದ ತಪ್ಪಿಸಿಕೊಳ್ಳುವಾಗ ತಂತಿ ತಗುಲಿ ಸಾವನಪ್ಪುವ ಸಾಧ್ಯತೆಗಳಿವೆ. ಈ ಬಗ್ಗೆ ಮೂರು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಕಾಡಂಚಿನ ಗ್ರಾಮಗಳಲ್ಲಿ ವಿಶೇಷ ಕಾಳಜಿ ವಹಿಸಲಾಗುವುದು. ಈ ಸಂಬಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಹುಣಸೂರಿನ ಎಇಇ ಬಸವಣ್ನೆ ಹಾಜರಿದ್ದರು.

Translate »