ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ 2ನೇ ಹಂತದ ಹೋರಾಟ
ಮೈಸೂರು

ಬೆಮೆಲ್ ಖಾಸಗೀಕರಣ ವಿರೋಧಿಸಿ ಕಾರ್ಮಿಕರ 2ನೇ ಹಂತದ ಹೋರಾಟ

March 2, 2021

ಮೈಸೂರು,ಮಾ.1(ಪಿಎಂ)- ಸಾರ್ವ ಜನಿಕ ಉದ್ದಿಮೆಯಾದ ಬೆಮೆಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಅನ್ನು ಖಾಸಗೀಕರಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ಬೆಮೆಲ್‍ನ ಮೈಸೂರು ಉತ್ಪಾ ದನಾ ಘಟಕದ ಕಾರ್ಮಿಕರು ಸೋಮವಾರ 2ನೇ ಹಂತದ ಹೋರಾಟ ಆರಂಭಿಸಿದ್ದಾರೆ.

ಭಾರತ್ ಅರ್ಥ್ ಮೂವರ್ಸ್ ಎಂಪ್ಲಾ ಯಿಸ್ ಅಸೋಸಿಯೇಷನ್ ಆಶ್ರಯದಲ್ಲಿ ಇಂದಿನಿಂದ ವಾರ ಕಾಲ ಪ್ರತಿದಿನ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಅಸೋಸಿ ಯೇಷನ್‍ನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಸೋಷಿಯೇಷನ್‍ನ ಉಪಸಮಿತಿ ಪದಾ ಧಿಕಾರಿಗಳು ಪ್ರತಿಭಟನಾ ಧರಣಿ ನಡೆಸಲಿ ದ್ದಾರೆ. ಜೊತೆಗೆ ಪ್ರತಿದಿನ ಮಧ್ಯಾಹ್ನ 2.45 ರಿಂದ 3.15 ರವರೆಗೆ ಎಲ್ಲಾ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂತೆಯೇ ಇಂದು ಹೂಟಗಳ್ಳಿ-ಕೆಆರ್‍ಎಸ್ ರಸ್ತೆಯ ಕಾರ್ಖಾನೆ ಮುಖ್ಯ ದ್ವಾರದಲ್ಲಿ ಕಾರ್ಮಿಕರು ಜಮಾಯಿಸಿ, ಪ್ರತಿ ಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯಿಸ್ ಅಸೋಸಿ ಯೇಷನ್ ಅಧ್ಯಕ್ಷ ಹೆಚ್.ವೈ.ಮುನಿರೆಡ್ಡಿ, ಸದ್ಯ ಬೆಮೆಲ್ ಸಂಸ್ಥೆಯಲ್ಲಿ ಕೇಂದ್ರ ಸರ್ಕಾ ರವು ಶೇ.54.03ರಷ್ಟು ಷೇರು ಬಂಡವಾಳ ಹೊಂದಿದೆ. 2016ರ ನವೆಂಬರ್‍ನಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಮೇರೆಗೆ ಶೇ.26ರಷ್ಟು ಷೇರನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ಆರಂ ಭಿಸಿತು. ಸದರಿ ಷೇರು ಖರೀದಿಗೆ ಮಾ.1 ಕೊನೆ ದಿನ. ಆದರೆ ಈವರೆಗೆ ಯಾರೂ ಖರೀದಿಗೆ ಮುಂದೆ ಬಂದಿಲ್ಲ. ಹೀಗಾಗಿ ಮಾ.22ಕ್ಕೆ ಇದನ್ನು ಮುಂದೂಡಲಾಗಿದೆ. ಇದು ನಮಗೆ ದೊರೆತಿರುವ ಮೊದಲ ಹಂತದ ಜಯ. ಖರೀದಿಗೆ ಯಾರೂ ಆಸಕ್ತಿ ತೋರದಿದ್ದಲ್ಲಿ ಕಾರ್ಖಾನೆ ಖಾಸಗೀಕರಣ ಸಾಧ್ಯವಿಲ್ಲ ಎಂದು ಹೇಳಿದರು.

ಎಂಪ್ಲಾಯಿಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಾಜ ಶೇಖರಮೂರ್ತಿ, ಉಪಾಧ್ಯಕ್ಷ ಗೋವಿಂದ ರೆಡ್ಡಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »