ವಿಶ್ವ ಛಾಯಾಗ್ರಾಹಣ ದಿನಾಚರಣೆ
ಮೈಸೂರು

ವಿಶ್ವ ಛಾಯಾಗ್ರಾಹಣ ದಿನಾಚರಣೆ

August 23, 2018

ಮೈಸೂರು: ಛಾಯಾಗ್ರಾಹಣ ಕ್ಷೇತ್ರದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಉನ್ನತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಛಾಯಾಗ್ರಾಹಕರು ತಮ್ಮ ಕೌಶಲ್ಯ ಮೆರೆಯಬೇಕು ಎಂದು ವನ್ಯಜೀವಿ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಸಲಹೆ ನೀಡಿದರು.

ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರಿನ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 179ನೇ ವಿಶ್ವಛಾಯಾಗ್ರಹಣ ದಿನಾಚರಣೆ ಹಾಗೂ ಫೋಟೋಗ್ರಫಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

1960ರಲ್ಲಿ ನಾನು ಛಾಯಾಗ್ರಾಹಣ ಆರಂಭಿಸಿದೆ. ಆಗ ಇಂದಿನಷ್ಟು ತಂತ್ರಜ್ಞಾನ ಮುಂದುವರೆದಿರಲಿಲ್ಲ. ಛಾಯಾಗ್ರಾಹಕರು ಇಂತಹ ಕಾರ್ಯಾಗಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಆಧುನಿಕ ತಂತ್ರಜ್ಞಾನವನ್ನು ತಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ವೃತ್ತಿಯಲ್ಲಿ ಕೌಶಲ್ಯ ವೃದ್ಧಿಸಿ ಯಶಸ್ಸು ಗಳಿಸಲು ಸಾಧ್ಯವಾಗಲಿದೆ ಎಂದರಲ್ಲದೆ, ದೇಶದ ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಶೇ.95ರಷ್ಟು ಕರ್ನಾಟಕದವರೇ ಇದ್ದಾರೆ. ಇದು ನಮ್ಮ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಳಿಕ ಸೋನಿ ಕಂಪನಿಯ ತರಬೇತುದಾರ ಸಿ.ಸತೀಶ್ ಸೋನಿ ಕಂಪನಿಯ ಫೋಟೋ ಮತ್ತು ವಿಡಿಯೋ ಕ್ಯಾಮರಾಗಳ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ ಕ್ಯಾಮರಗಳಿಗೆ ಕಂಪನಿ ಅಳವಡಿಸಿರುವ ತಂತ್ರಜ್ಞಾನ, ಕ್ಯಾಮರಾಗಳ ಬಳಕೆ ವಿಧಾನ, ಕ್ಯಾಮರಾಗಳ ದರದ ಬಗ್ಗೆ ವಿವರಿಸಿದ ಅವರು, ಇಂದಿನ ಫೋಟೋಗ್ರಾಫರ್ಸ್ ಹಾಗೂ ವಿಡೀಯೋಗ್ರಾಫರ್ಸ್‍ಗಳಿಗೆ ಚಿತ್ರೀಕರಣ ಮಾತ್ರವಲ್ಲದೆ, ಸಂಕಲನ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ಕಲೆ ಕರಗತವಾಗಿರುವುದು ಸದ್ಯ ವೃತ್ತಿಪರರಿಗೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್.ಮಂಜುನಾಥ್, ಉಪಾಧ್ಯಕ್ಷ ಎಸ್.ಮಂಜುನಾಥ್, ಕಾರ್ಯದರ್ಶಿ ಜಿ.ಟಿ.ರಮೇಶ್‍ಕುಮಾರ್, ಜಂಟಿ ಕಾರ್ಯದರ್ಶಿ ಪಿ.ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

Translate »