ಮೈಸೂರು,ಆ.24(ಎಂಟಿವೈ)- ಯಾದವ ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಮೈಸೂರು ನಗರ ಹಾಗೂ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷ ಕೆ.ಶಿವಾನಂದ್ ಒತ್ತಾಯಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದವ ಅಥವಾ ಗೊಲ್ಲ ಸಮುದಾಯ ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಹಿಂದುಳಿದಿದೆ. ರಾಜಕೀಯ ಕ್ಷೇತ್ರದಲ್ಲಿ ಸಮುದಾಯ ಪ್ರತಿನಿಧಿಸುವ ನಾಯಕರ ಕೊರತೆ ಎದ್ದು ಕಾಣುತ್ತಿದೆ. ರಾಜ್ಯಾದ್ಯಂತ 40 ಲಕ್ಷ ಜನ ಸಂಖ್ಯೆ ಹೊಂದಿರುವ ಯಾದವ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಚಿತ್ರದುರ್ಗ, ತುಮಕೂರು, ಕೋಲಾರ, ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಮುದಾಯಕ್ಕೆ ಸೇರಿದ ಅತಿ ಹೆಚ್ಚು ಮಂದಿ ನೆಲೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಸಮುದಾಯ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಿದೆ. ಈ ಹಿಂದೆ ಕಾಂಗ್ರೆಸ್ ನಿಂದ ಕೃಷ್ಣಪ್ಪ ಹಾಗೂ ಜೆಡಿಎಸ್‍ನಿಂದ ಮುನಿಯಪ್ಪ ಮಾದಪ್ಪ ಅವರು ಸಚಿವರಾಗಿ ಉತ್ತಮವಾಗಿ ಜವಾಬ್ದಾರಿ ನಿಭಾಯಿಸುವ ಮೂಲಕ ಸಮುದಾಯದೊಂದಿಗೆ ಸಂಪುಟದ ಘನತೆ ಎತ್ತಿ ಹಿಡಿದಿದ್ದರು. ಇದೀಗ ಬಿಜೆಪಿ ವತಿಯಿಂದ ಯಾದವ ಸಮುದಾಯಕ್ಕೆ ಸೇರಿರುವ ಶಾಸಕಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಿ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಯಾದವ ಯುವ ಸಂಘದ ಪದಾಧಿ ಕಾರಿಗಳಾದ ಆರ್.ಗಣೇಶ್ ಯಾದವ್, ಎಸ್. ಯೋಗೇಶ್, ಸಿ.ಮೋಹನ್ ಯಾದವ್, ಎಸ್.ನಾಗೇಶ್ ಯಾದವ್ ಇದ್ದರು.