ಯತ್ನಾಳ್, ಯೋಗೇಶ್ವರ್, ರೇಣುಕಾಚಾರ್ಯ ಅವರಿಗೆ ಬುದ್ದಿ ಕಲಿಸುತ್ತೇವೆ: ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ
ಮೈಸೂರು

ಯತ್ನಾಳ್, ಯೋಗೇಶ್ವರ್, ರೇಣುಕಾಚಾರ್ಯ ಅವರಿಗೆ ಬುದ್ದಿ ಕಲಿಸುತ್ತೇವೆ: ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ

July 10, 2021

ಮೈಸೂರು, ಜು.9(ಆರ್‍ಕೆಬಿ)- ಮುಖ್ಯ ಮಂತ್ರಿ ವಿಚಾರದಲ್ಲಿ ಮೂರು ಮಂದಿ ಮಾತ್ರ ಮಾತನಾಡುತ್ತಿದ್ದಾರೆ. ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಮಾತನಾಡುತ್ತಿ ರುವ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೇಶ್ವರ್, ರೇಣುಕಾಚಾರ್ಯ ಅವರಿಗೆ ಹೇಗೆ, ಯಾವಾಗ ಬುದ್ದಿ ಕಲಿಸಬೇಕು ಎಂಬುದು ಗೊತ್ತಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಶಿಸ್ತಿನ ಪಕ್ಷ. ಅಶಿಸ್ತಿನಿಂದ ವರ್ತಿಸುವವರ ವಿರುದ್ಧ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಲಿದೆ. ಅದು ಯಾವಾಗ, ಹೇಗೆ ಎಂಬುದು ಮುಂದೆ ಗೊತ್ತಾಗುತ್ತದೆ ಎಂದು ತಿಳಿಸಿದರು.

ಬಿಜೆಪಿ ಪಕ್ಷಕ್ಕೆ ಅಪ್ಪ-ಅಮ್ಮ ಇದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಯಾರು ಅಪ್ಪ-ಅಮ್ಮ? ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯರೇ ವಿಲನ್, ಅದೇ ಚಾಳಿ ಹೆಚ್.ವಿಶ್ವನಾಥ್ ಅವರಲ್ಲೂ ಉಳಿದುಕೊಂಡಿದೆ. ಬಿಜೆಪಿ ಶಿಸ್ತಿನ ಪಕ್ಷ ಎಂದು ಗೊತ್ತಿದ್ದರೂ ಮಾತನಾಡುತ್ತಾರೆ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್‍ನವರೇ ನಿರ್ನಾಮ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಇನ್ನೂ 2 ವರ್ಷ ಇದೆ. ಅದಾ ಗಲೇ ಕಾಂಗ್ರೆಸ್ ಪಕ್ಷದಲ್ಲಿ ಐದು ಜಾತಿಗೆ ಐದು ಜನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‍ನಲ್ಲಿ ಏಕತೆ ಇಲ್ಲ. ಡಿ.ಕೆ.ಶಿವಕುಮಾರ್ ಅವರ ಪ್ರಚಾರ ವಾಹನದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನೇ ಕಿತ್ತು ಬಿಸಾಡಿದ್ದಾರೆ ಎಂದು ಲೇವಡಿ ಮಾಡಿದರು. ಒಂದೆಡೆ ಸಿದ್ದ ರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೊಸೆ ಅಂತಾರೆ. ಬಾದಾಮಿಯಲ್ಲಿ ನಿಂತು ಅಲ್ಲಿಯೂ ಸೊಸೆ ಎನ್ನುತ್ತಾರೆ. ಕೀಲಿ ಕೈ ನನ್ನ ಕೈಯ್ಯಲ್ಲಿದೆ ಎನ್ನು ತ್ತಾರೆ. ಹಾಗಾದರೆ ಸಿದ್ದರಾಮಯ್ಯ ಯಾವ ಪಕ್ಷಕ್ಕೆ ಮಗ ಎಂದು ಹೇಳಲಿ ಎಂದರು.

ಅಂಬೇಡ್ಕರ್ ಆಶಯ ಸಾಕಾರ ಗೊಳಿಸಿದ ಮೋದಿ: ಕೇಂದ್ರ ಸಚಿವ ಸಂಪುಟದಲ್ಲಿ ನರೇಂದ್ರ ಮೋದಿಯವರು ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯ, ಕನಸುಗಳನ್ನು ನನಸು ಮಾಡಿದ್ದಾರೆ. ಅದಕ್ಕಾಗಿ ನರೇಂದ್ರ ಮೋದಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಖಂಡ ರಾದ ಎಂ.ಮೋಹನ್, ರವಿಶಂಕರ್, ಎಂ.ಜಿ.ಮಹೇಶ್ ಉಪಸ್ಥಿತರಿದ್ದರು.

Translate »