ಯಡಿಯೂರಪ್ಪಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ
ಮೈಸೂರು

ಯಡಿಯೂರಪ್ಪಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ

February 15, 2021

ಬೆಂಗಳೂರು,ಫೆ.14-ಯಡಿಯೂರಪ್ಪಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಇದನ್ನು ವೀರಶೈವ ಸಮುದಾಯಕ್ಕೆ ನಾನು ಈ ವೇದಿಕೆಯಲ್ಲಿ ತಿಳಿಸಲು ಬಯಸುತ್ತೇನೆ. ಆದರೆ, ಯಡಿಯೂರಪ್ಪ ಅವರ ಸರ್ಕಾರ ದಲ್ಲಿ ಲೂಟಿ ನಡೆಯುತ್ತಿತ್ತು. ರಾಜ್ಯದ ಸಂಪತ್ತು ಲೂಟಿ ಹೊಡೆಯುತ್ತಿದ್ದಾಗ ನಾನು ದನಿ ಎತ್ತಿದೆ. ಬಿಜೆಪಿಯ ಭ್ರಷ್ಟ ಆಡಳಿತದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಜೆಡಿಎಸ್. 2 ಸೂಟ್‍ಕೇಸ್‍ಗಳಲ್ಲಿ ದಾಖಲೆ ಗಳನ್ನು ವಿಧಾನಸೌಧಕ್ಕೆ ಕೊಂಡೊಯ್ದು ದಾಖಲೆ ಬಿಡುಗಡೆ ಮಾಡಿದೆವು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ತಿಳಿಸಿದ್ದಾರೆ.

ಅರಮನೆ ಆವರಣ ದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸಮಾವೇಶ ದಲ್ಲಿ ಮಾತನಾಡಿದ ಅವರು, ವಿಧಾನಸಭೆ ಯಲ್ಲಿ ಸಿದ್ದರಾಮಯ್ಯನÀವರು ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ಬಗ್ಗೆ ಮಾತನಾಡಿ ದ್ದರು. ಯಡಿಯೂರಪ್ಪ ಎದ್ದು ನಿಂತು ರೀಡೂ ಪ್ರಕರಣವನ್ನು ಪ್ರಸ್ತಾಪ ಮಾಡಿದ್ದರು. ರೀಡೂ ಪ್ರಕರಣ ಅಂದ ಕೂಡಲೇ ಸಿದ್ದರಾಮಯ್ಯ ಬಾಯಿ ಮುಚ್ಕೊಂಡು ಸುಮ್ನೆ ಕುಳಿತರು. ಇದು ಇವರಿಬ್ಬರ ರಾಜಕಾರಣ ಎಂದು ಸಿದ್ದರಾ ಮಯ್ಯ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಮೀಸಲಾತಿ ಹೋರಾಟಗಳ ವಿಚಾರ ಕುರಿತು ಮಾತ ನಾಡಿದ ಅವರು,
ರಾಜ್ಯದಲ್ಲಿ ಇನ್ನೆಷ್ಟು ಮೀಸಲಾತಿ ಹೋರಾಟ ಶುರುವಾಗುತ್ತದೋ ಗೊತ್ತಿಲ್ಲ. ಸವಿತಾ ಸಮಾಜದವರೂ ಹೋರಾಟ ಶುರು ಮಾಡುತ್ತಾರೆ. ಉಪ್ಪಾರ ಸಮಾಜದವರು ಹೋರಾಟ ಶುರು ಮಾಡುತ್ತಾರೆ. ಹಾಗೇ ಉಳಿದ ಸಮುದಾಯಗಳು ಕೂಡ ಆರಂಭ ಮಾಡುತ್ತಾರೆ ಎಂದರು. ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕೆ ಇಳಿಸಲಾಗುವುದು. ಮಸ್ಕಿಯಲ್ಲಿ ಪಕ್ಷದ ಶಕ್ತಿ ಕಡಿಮೆ ಇರಬಹುದು. ಸಿಂಧಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕುತ್ತೇವೆ. ನಮ್ಮ ಪಕ್ಷದಲ್ಲಿ ಹಣದ ಕೊರತೆ ಇರಬಹುದು. ಸಾಲ ಮಾಡಿಯಾದರೂ ಪಕ್ಷ ಉಳಿಸಬೇಕು. ದೇವೇಗೌಡರು ಒಂದು ಸಲಹೆ ಕೊಟ್ಟಿದ್ದಾರೆ. ಅವರ ಸುದೀರ್ಘ ಜೀವನದಲ್ಲೇ ನಾವು ಹೋಗುತ್ತೇವೆ. ಯಾವ ಪಕ್ಷದ ಅಡಿಯಳಾಗಿ ನಾವು ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರದಲ್ಲಿ ನಮಗೆ ಸಹಕಾರ ಇರಲಿಲ್ಲ. ಆದರೂ ಸಾಲಮನ್ನಾ ಭರವಸೆಯನ್ನು ಈಡೇರಿಸಿದೆವು. ಸಮ್ಮಿಶ್ರ ಸರ್ಕಾರದ ಬಗ್ಗೆ ಹಲವು ಟೀಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಹಲವು ಕಾರ್ಯಕ್ರಮ ತಂದೆವು. ನಮ್ಮ ಸರ್ಕಾರ ಸಾಲಮನ್ನಾಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ರೈತರಿಗೆ ಬೆಳೆ ಸಾಗಾಣಿಕೆ ವೆಚ್ಚ ಕೊಟ್ಟೆವು. ಉಗ್ರಾಣದಲ್ಲಿ ರೈತರು ಬೆಳೆ ಸಂಗ್ರಹಿಸಿಡಲು ವ್ಯವಸ್ಥೆ ಮಾಡಿದೇವು. ಶೇ.3ರ ಬಡ್ಡಿ ದರದಲ್ಲಿ ಗೃಹಲಕ್ಷ್ಮಿ ಸಾಲ ಯೋಜನೆ ತಂದೆವು. ಬಡವರ ಬಂಧು ಯೋಜನೆ ತಂದೆವು. ರಾಜ್ಯದಲ್ಲಿ ಮೊದಲ ಬಾರಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದೆವು. ಇವತ್ತು ಕೊರೊನಾದಿಂದ ಶಾಲೆಗಳು ಮತ್ತು ಸರ್ಕಾರದ ಮಧ್ಯೆ ಸಂಘರ್ಷ ಇದೆ. ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ 1000 ಪಬ್ಲಿಕ್ ಶಾಲೆ ಆರಂಭಿಸಲಾಯಿತು. ಖಾಸಗಿ ಶಾಲೆಗಳಲ್ಲಿ ಬಡವರು ಮಕ್ಕಳನ್ನು ಓದಿಸಲು ಕಷ್ಟ. ಹಾಗಾಗಿ ಸರ್ಕಾರದಿಂದಲೇ ಪಬ್ಲಿಕ್ ಶಾಲೆ ಯೋಜನೆ ತಂದೆವು. ಆದರೆ, ಬಿಜೆಪಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮುಂದುವರೆಸಿಲ್ಲ. ಈ ಯೋಜನೆ ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Translate »