ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ, ರಾಜ್ಯದಲ್ಲಿ ಸರ್ಕಾರವೇ ಇಲ್ಲ: ಸಿದ್ದರಾಮಯ್ಯ
ಮೈಸೂರು

ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ, ರಾಜ್ಯದಲ್ಲಿ ಸರ್ಕಾರವೇ ಇಲ್ಲ: ಸಿದ್ದರಾಮಯ್ಯ

December 4, 2020

ಮೈಸೂರು. ಡಿ.3(ಎಸ್‍ಬಿಡಿ)- ರಾಜ್ಯದಲ್ಲಿ ಸರ್ಕಾ ರವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಟೀಕಿಸಿದ್ದಾರೆ.

ಮೈಸೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಮೂಲಕ ರಾಜ್ಯದ ಜನತೆಗೆ ಕನಕದಾಸರ ಜಯಂತ್ಯೋತ್ಸವದ ಶುಭಾ ಶಯ ತಿಳಿಸಿದ ಅವರು, ಮಾಧ್ಯಮದವರ ನಾನಾ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈವರೆಗೂ ಸರ್ಕಾರ ಟೇಕ್ ಆಫ್ ಆಗಿಯೇ ಇಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ಇದೆ. ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ. ಈ ಹಿಂದೆಯೂ ಸಮರ್ಥವಾಗಿ ಇರಲಿಲ್ಲ, ಈಗಲೂ ಇಲ್ಲ. ತಿಂಗಳ ಹಿಂದೆಯೇ ಹೇಳಿದಂತೆ ಮುಖ್ಯಮಂತ್ರಿ ಬದಲಾ ವಣೆ ಚಿಂತನೆ ಬಿಜೆಪಿ ನಾಯಕರಲ್ಲಿದೆ ಎಂದು ಪುನರುಚ್ಛರಿ ಸಿದ ಸಿದ್ದರಾಮಯ್ಯ, ಮಾಹಿತಿ ತಿಳಿಯಲು ಕೇಂದ್ರ ನಾಯಕರೊಂದಿಗೆ ಒಡನಾಟ ಇರಬೇಕೆಂದೇನಿಲ್ಲ. ಬೇರೆ ಮೂಲಗಳಿಂದಲೂ ಮಾಹಿತಿ ಸಿಗುತ್ತದೆ. ನಾನೇನು ಬಿಜೆಪಿಯವರಿಗೆ ಹೈಕಮಾಂಡಾ? ಎಂದು ಕುಟುಕಿದರು.

ಒಡೆಯುವ ಹುನ್ನಾರ: ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗ(ಎಸ್‍ಟಿ)ಕ್ಕೆ ಸೇರಿಸಬೇಕೆಂಬ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ, ಇದರ ಹಿಂದೆ ಆರ್‍ಎಸ್‍ಎಸ್‍ನವರ ಕೈವಾಡವಿದ್ದು, ಈಶ್ವರಪ್ಪ ಕೈಗೊಂಬೆಯಾಗಿದ್ದಾರೆ. ಇದು ಸಮುದಾಯ ಒಡೆಯುವ ಹುನ್ನಾರ. ಈ ಮೂಲಕ ನನ್ನನ್ನೂ ಟಾರ್ಗೆಟ್ ಮಾಡಿ, ಐಸೊಲೇಟ್ ಮಾಡುವ ತಂತ್ರಗಾರಿಕೆ ಅಡಗಿದೆ. ಕುರುಬರಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಜನರ ದಾರಿ ತಪ್ಪಿಸಲಾಗುತ್ತಿದೆ. ರಾಜಕೀಯೇತರ ಹೋರಾಟ ವಾಗಿದ್ದರೆ ನಾನೂ ಭಾಗವಹಿಸುತ್ತಿದೆ. ಆದರೆ ಇದರ ಹಿಂದೆ ಸಮುದಾಯವನ್ನೇ ಒಡೆಯುವ ಹುನ್ನಾರ ಇರುವುದರಿಂದ ನಾನು ಹೋಗುವುದಿಲ್ಲ. ಮತ್ಯಾರೇ ಭಾಗವಹಿಸಿದರೂ ನನ್ನದೇನು ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪಗೆ ಟಾಂಗ್: ಎಸ್‍ಟಿಗೆ ಸೇರಿಸಬೇಕೆಂಬ ಹೋರಾ ಟಕ್ಕೆ ಬರುವಂತೆ ಒಂದೇ ಒಂದು ಬಾರಿ ಈಶ್ವರಪ್ಪ ಫೋನ್ ಮಾಡಿದ್ರು. ಇಲ್ಲಪ್ಪ ನಾನು ಬರೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದೆ. `ನಾವು ನೂರು ಬಾರಿ ಕರೆದಿದ್ದೆವು, ನೀವು ಹಾಗೆ ಕರೆದಿಲ್ಲ’ ಎಂದು ಹೇಳಿದ್ದೆ. ಅದನ್ನು ಜನರಿಗೆ ತಪ್ಪಾಗಿ ಹೇಳಿದ್ದಾರೆ. ಸಮುದಾಯದ ಪರ
ಈಶ್ವರಪ್ಪ ಅದ್ಯಾವಾಗ ಹೋರಾಟ ಮಾಡಿದ್ದಾರೆ ಹೇಳಿ. ಸ್ವಾರ್ಥಕ್ಕಾಗಿ ರಾಯಣ್ಣ ಬ್ರಿಗೇಡ್ ಮಾಡಿದ್ದರು. ಅದೀಗ ಎಲ್ಲಿದೆ. ಕುರುಬರ ಮಠ ಕಟ್ಟುವಾಗ ಸಹಕಾರವನ್ನೂ ನೀಡಲಿಲ್ಲ, ಕಾರ್ಯಕ್ರಮದಲ್ಲಿ ಭಾಗಿಯಾಗಲೂ ಇಲ್ಲ. ಉಡುಪಿಯಲ್ಲಿ ಕನಕನ ಕಿಂಡಿ ಮುಚ್ಚಲು ಹೋದಾಗ ಈಶ್ವರಪ್ಪ ಮಠದ ಪರವಾಗಿಯೇ ಮಾತನಾಡಿದ್ದರು. ಮಿಸಲಾತಿ, ಸಮುದಾಯದ ಪರ ಎಂದೂ ಅವರು ಹೋರಾಟ ಮಾಡಿಲ್ಲ. ಸಂವಿಧಾನದ ಬಗ್ಗೆ ಅನಂತಕುಮಾರ್ ಹೆಗ್ಡೆ, ತೇಜಸ್ವಿಸೂರ್ಯ ಮಾತನಾಡಿದಾಗ ಈಶ್ವರಪ್ಪ ಖಂಡಿಸಲೂ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ಕ್ಯಾಬಿನೇಟ್‍ನಲ್ಲಿ ತೀರ್ಮಾನ ಮಾಡಿ, ಕೇಂದ್ರಕ್ಕೆ ಶಿಫಾರಸು ಮಾಡಲಿ. ನಂತರ ಪಾರ್ಲಿಮೆಂಟ್ ನಲ್ಲಿ ತೀರ್ಮಾನ ಆದರೆ ಆಯ್ತು. ಅದಕ್ಕೆ ಬೃಹತ್ ಸಮಾವೇಶ ಮಾಡುವ ಅಗತ್ಯವಿಲ್ಲ ಎಂದು ಕುಟುಕಿದರು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೀಸಲಾತಿಗೆ ಹೋರಾಟ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಇದರ ಹಿಂದೆ ಬಿಜೆಪಿ ಇದ್ದು, ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳನ್ನು ವಿಭಜಿಸುವ ಉದ್ದೇಶದಿಂದ ಈ ರೀತಿ ಹುನ್ನಾರ ನಡೆಸಲಾಗಿದೆ ಎಂದರು.

ಬೇಜವಾಬ್ದಾರಿ ಹೇಳಿಕೆ: ಸಾಲ ಮಾಡಿ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೃಷಿ ಸಚಿವರಾಗಿ ರೈತರ ಬಗ್ಗೆ ಅತ್ಯಂತ ಜವಾಬ್ದಾರಿಯುತವಾಗಿ ಮಾತನಾಡಬೇಕು. ಅವರು ಹಾಗೆ ಹೇಳಿದ್ದರೆ ಖಂಡಿತವಾಗಿ ಬೇಜವಾಬ್ದಾರಿ ಹೇಳಿಕೆಯಾಗುತ್ತದೆ. ಅದು ತಪ್ಪು ಎಂದರು.

ರೈತರಿಗೆ ಬೆಂಬಲ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲ ಇದೆ. ನಮ್ಮ ಪಕ್ಷದ ಕಾರ್ಯಕರ್ತರೂ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ರೈತ ವಿರೋಧಿ ಕಾಯ್ದೆ ತಂದಿರುವುದರಿಂದ ಅವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರೈತರ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಕಾಯ್ದೆ ವಾಪಸ್ ಪಡೆಯುತ್ತಾರಾ? ಇಲ್ಲವಾ? ಎಂದು ಸ್ಪಷ್ಟಪಡಿಸಬೇಕು. ಅದನ್ನು ಬಿಟ್ಟು ಸಮಿತಿ ರಚಿಸುತ್ತೇವೆ ಎಂದರೆ ಹೋರಾಟಗಾರರು ಕೇಳುತ್ತಾರಾ? ಎಂದು ಹೇಳಿದರು.

ಅಸಂವಿಧಾನಿಕ: ಲವ್ ಜಿಹಾದ್ ವಿರೋಧಿ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ರೀತಿ ಕಾಯ್ದೆ ಮಾಡಿದರೆ ಅದು ಅಸಂವಿಧಾನಿಕವಾಗಲಿದೆ. ನ್ಯಾಯಾಲಯದಲ್ಲಿ ನಿಲ್ಲುವು ದಿಲ್ಲ ಎಂಬುದು ನನ್ನ ಭಾವನೆ. ನನ್ನ ಹೇಳಿಕೆಗೆ ಬೇರೆ ರೀತಿ ಅರ್ಥ ಕಲ್ಪಿಸಲಾಗಿದೆ. ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ತುಂಬಿದ್ದರೆ ಅವರು ಇಷ್ಟಪಟ್ಟವರನ್ನು ವಿವಾಹ ವಾಗಬಹುದು ಎಂದು ಕರ್ನಾಟಕ ಹಾಗೂ ಉತ್ತರ ಪ್ರದೇಶ ಹೈಕೋರ್ಟ್‍ಗಳು ಹೇಳಿವೆ. ಇಂತಹವರನ್ನೇ ಮದುವೆಯಾಗಬೇಕು ಎಂದು ಹೇಳಲು ನೀವ್ಯಾರು?. ಅವರು ಅಂದುಕೊಂಡಿರುವ ಕಾನೂನು ಊರ್ಜಿತವಾಗುವುದಿಲ್ಲ ಎಂದು ತಿಳಿಸಿದರು.

ಗ್ರಾಪಂಗೆ ಎಷ್ಟು ಕೊಟ್ಟಿದ್ದಾರೆ?: ಪ್ರತಿ ಗ್ರಾಮ ಪಂಚಾಯ್ತಿಗೆ ನೇರವಾಗಿ 1.50 ಕೋಟಿ ರೂ. ಅನುದಾನ ನೀಡುವ ಬಗ್ಗೆ ಮಾತನಾಡಿ, ಬಿಜೆಪಿ ಸರ್ಕಾರ ಬಂದು 1 ವರ್ಷ 4 ತಿಂಗಳಾಯ್ತು. ಈವರೆಗೆ ಎಷ್ಟು ಹಣ ಕೊಟ್ಟಿದ್ದಾರೆ ಮೊದಲು ತಿಳಿಸಲಿ. ಮಹಾತ್ಮ ಗಾಂಧೀಜಿ ಅವರ `ಗ್ರಾಮ ಸ್ವರಾಜ್’ ಘೋಷಣೆಯನ್ನು ಬಳಸಿಕೊಂಡು ಜನರ ಬಳಿಗೆ ಹೊರಟಿದ್ದಾರೆಂದು ಹೇಳಿದರು.

ಎಲ್ಲರಿಗೂ ಒಳ್ಳೆಯದಾಗಲಿ: ತಮಿಳುನಾಡಿನಲ್ಲಿ ನಟ ರಜನಿಕಾಂತ್ ಹೊಸ ಪಕ್ಷ ಕಟ್ಟುವ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲರೂ ಭ್ರಷ್ಟಾಚಾರ ರಹಿತ ಪಕ್ಷ ಮಾಡ್ತೀವಿ ಅಂತಾರೆ. ಆಮೇಲೆ ಏನಾಗುತ್ತದೆ ಎಂದು ನೋಡಬೇಕಲ್ಲ. ಪ್ರಜಾಪ್ರಭುತ್ವದಲ್ಲಿ ಪಕ್ಷ ಕಟ್ಟಲು ಸ್ವತಂತ್ರವಿದೆ. ರಜನಿಕಾಂತ್ ಮಾತ್ರವಲ್ಲ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರುತ್ತೇನೆ ಎಂದರು.

Translate »