ಹೆಂಡತಿ-ಮಕ್ಕಳ ಸಾಕಲಾರದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು
ಕೊಡಗು, ಮೈಸೂರು

ಹೆಂಡತಿ-ಮಕ್ಕಳ ಸಾಕಲಾರದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು

December 4, 2020

ಪೊನ್ನಂಪೇಟೆ, ಡಿ.3-ಹೆಂಡತಿ-ಮಕ್ಕಳನ್ನು ಸಾಕ ಲಾರದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಕೃಷಿ ದಿನದ ಪ್ರಯುಕ್ತ ಏರ್ಪಡಿಸಿದ್ದ ಬಿದಿರು ಸಸ್ಯ ಕ್ಷೇತ್ರ, ಬಿದಿರು ಸಂಸ್ಕರಣೆ ಮತ್ತು ಬಿದಿರು ಮೌಲ್ಯವರ್ಧನ ಘಟಕ ಗಳನ್ನು ಅರಣ್ಯ ಸಚಿವ ಆನಂದ್ ಸಿಂಗ್ ಜೊತೆ ಗೂಡಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ದುಡಿದು ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಹೀಗಿರು ವಾಗ ರೈತರು ಇದ್ದು ಜಯಿಸದೇ ತಮ್ಮ ಕುಟುಂಬ ದವರ ಬಗ್ಗೆಯೂ ಯೋಚಿಸದೇ ಆತ್ಮಹತ್ಯೆ ಮಾಡಿ ಕೊಂಡು ಜೀವನ ಹಾಳು ಮಾಡಿಕೊಳ್ಳುವ ಬದಲು ಸರ್ಕಾರದ ಸವಲತ್ತು ಉಪಯೋಗಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕೃಷಿ ನಂಬಿದರೆ ಕೈಬಿಡುವುದಿಲ್ಲ ಎಂದ ಅವರು, ಕೆ.ಆರ್. ಪೇಟೆಯಲ್ಲಿ ಚಿನ್ನದ ಆಭರಣಗಳನ್ನು ಧರಿಸಿದ್ದ ಮಹಿಳೆ ಯೊಬ್ಬರನ್ನು ಮಾತನಾಡಿಸಿದಾಗ ಆಕೆ, ಈ ಆಭರಣ ಗಳು ಭೂಮಿಯಿಂದ ಬಂದದ್ದು. ಕಳೆದ 35 ವರ್ಷಗಳಿಂದ ಹೊಲದಲ್ಲಿ ಬೇಸಾಯ ಮಾಡಿ, ಇದನ್ನು ಪಡೆದಿದ್ದೇನೆ ಎಂದರು. ಆ ಮಹಿಳೆ ಸಾವಯವ ಕೃಷಿಯಲ್ಲಿ ತೊಡಗಿಸಿ ಕೊಂಡು ತೋಟಗಾರಿಕಾ ಬೆಳೆಗಳನ್ನು ಬೆಳೆದು ಜೀವನ ರೂಪಿಸಿಕೊಂಡಿದ್ದಾರೆ. ಹೀಗೆ ಮಹಿಳೆಯರು ಕೃಷಿಯಿಂದ ಲಾಭ ಪಡೆಯುತ್ತಿರುವಾಗ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು? ನಿಜವಾದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದರು.

ಮಂಡ್ಯದಲ್ಲಿ ನೀರಾವರಿ ಸೌಲಭ್ಯ ವಿದ್ದರೂ ಅತೀ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ನೀರಾವರಿ ಇಲ್ಲದೇ ವನ ಬೇಸಾಯ ಇರುವ ಕೋಲಾರದಲ್ಲಿ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇವೆ ಎಂದ ಅವರು, ಕೋಲಾರ ಜಿಲ್ಲೆಯಲ್ಲಿ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಬಹು ಬೆಳೆ ಪದ್ಧತಿಯಿಂದ ಕೃಷಿ ಕ್ಷೇತ್ರದಲ್ಲಿ ಆದಾಯ ಗಳಿಸಬಹುದು. ಕೃಷಿಯಲ್ಲಿ ಅಭಿವೃದ್ಧಿ ಕಾಣಲು ಇಸ್ರೇಲ್ ಮಾದರಿ ಬೇಕಿಲ್ಲ. ಕೋಲಾರ ಕೃಷಿ ಮಾದರಿ ಅಳವಡಿಸಿ ಕೊಂಡರೆ ರೈತರು ಆತ್ಮಹತ್ಯೆಗೆ ಮುಂದಾಗುವುದು ತಪ್ಪುತ್ತದೆ ಎಂದು ಕಿವಿಮಾತು ಹೇಳಿದರು.

ರೈತರು ಹೇಡಿಗಳಂತೆ ಆತ್ಮಹತ್ಯೆ ಮಾಡಿಕೊಳ್ಳ ಬಾರದು. ಆತ್ಮವಿಶ್ವಾಸದಿಂದ ಬದುಕಬೇಕು. ಇದ್ದು ಜಯಿಸ ಬೇಕು. ಕೃಷಿಯನ್ನು ನಂಬಿದರೆ ಅದು ನಮ್ಮನ್ನು ಕೈಬಿಡು ವುದಿಲ್ಲ. ಆದರೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿ ಕೊಂಡು ಸರ್ಕಾರ ನೀಡುವ ಸೌಲಭ್ಯಗಳನ್ನು ಉಪಯೋ ಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಕೃಷಿ, ಅರಣ್ಯ, ತೋಟಗಾರಿಕೆ, ಪಶುಪಾಲನೆ ಹಾಗೂ ಮೀನುಗಾರಿಕೆ ಇಲಾಖೆಗಳು ಒಂದಕ್ಕೊಂದು ಪೂರಕ ವಾಗಿ ಕಾರ್ಯನಿರ್ವಹಿಸುತ್ತಿವೆ. ಅರಣ್ಯ ಮಹಾ ವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ನೀಡಲಾಗುತ್ತಿದೆ. ಕುಗ್ರಾಮಗಳಿಗೂ ಅಡುಗೆ ಅನಿಲ ಪೂರೈಕೆ ಆಗುತ್ತಿರುವುದರಿಂದ ಕಾಡು ಕಡಿಯುವುದು ಕಡಿಮೆಯಾಗಿದೆ. ರಾಷ್ಟ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ, ಭಾರತದಲ್ಲಿ ಬಿದಿರಿನ ಉತ್ಪಾದನೆಯನ್ನು ಹೆಚ್ಚಿಸಿ ಅದರಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಿ ರೈತರ ಹಾಗೂ ದೇಶದ ಆರ್ಥಿಕತೆಗೆ ಪೂರಕವಾಗುವಂತೆ ರಾಷ್ಟ್ರೀಯ ಬಿದಿರು ಅಭಿಯಾನದಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರಿಗೆ, ಬಿದಿರು ಅವಲಂಬಿತ ಕಸುಬುದಾರರಿಗೆ ಹಾಗೂ ಉದ್ದಿಮೆದಾ ರರಿಗೆ ಬಿದಿರು ಸಂಪನ್ಮೂಲ ಕೇಂದ್ರವು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಬಿದಿರು ಬೇಸಾಯಕ್ಕೆ ಬೇಕಾಗುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ರೈತರಿಗೆ ಕಾಲ ಕಾಲಕ್ಕೆ ಮಾಹಿತಿ ಒದಗಿಸಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್, ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಕೊಡಗಿನ ಸಾಂಪ್ರದಾಯಿಕ ಒಡಕತ್ತಿ ನೀಡಿ ಸನ್ಮಾನಿಸಲಾಯಿತು. ಶಾಸಕ ಕೆ.ಜಿ.ಬೋಪಯ್ಯ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಎಂ.ಕೆ.ನಾಯಕ್, ರಾಷ್ಟ್ರೀಯ ಬಿದಿರು ನಿರ್ದೇಶಕ ರಾಜ್‍ಕುಮಾರ್ ಶ್ರೀವತ್ಸ, ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಹೀರಾಲಾಲ್, ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ, ಮಡಿಕೇರಿ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್, ಜಂಟಿ ಕೃಷಿ ನಿರ್ದೇಶಕ ಶಾಬಾನಾ ಎಂ.ಶೇಖ್, ಪೊನ್ನಂಪೇಟೆ ವ್ಯವಸ್ಥಾಪನಾ ಆಡಳಿತ ಮಂಡಳಿ ಸದಸ್ಯ ಡಾ.ಸಿ.ಜಿ.ಕುಶಾಲಪ್ಪ, ಕೃಷಿ ತೋಟಗಾರಿಕೆ ವಿವಿ ಆಸ್ತಿ ಅಧಿಕಾರಿ ಕೆ.ಜಿ.ಚಾಮರಾಜ ಇನ್ನಿತರರಿದ್ದರು.

ಆತ್ಮಹತ್ಯೆಗೆ ಮುಂದಾಗುವವರು ಹೇಡಿಗಳು: ಸಚಿವರ ಸ್ಪಷ್ಟನೆ

ತಾವು ರೈತರನ್ನು ಹೇಡಿ ಎಂದು ಸಂಭೋದಿಸಿಲ್ಲ. ಆತ್ಮಹತ್ಯೆಯಂ ತಹ ಕೆಲಸ ಹೇಡಿತನದ್ದು ಎಂದಿದ್ದೇನೆ. ಯಾರೇ ಆಗಲೀ, ಆತ್ಮಹತ್ಯೆಯಂತಹ ಹೇಡಿತನದ ಕೆಲಸಕ್ಕೆ ಮುಂದಾಗಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಪೊನ್ನಂಪೇಟೆಯಲ್ಲಿ ತಾವು ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂ ತೆಯೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಬಿ.ಸಿ.ಪಾಟೀಲ್, ಕಷ್ಟ-ನಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು ಎಂದಿದ್ದೇನೆ. ಕಷ್ಟಗಳು ಇಂದಿನಂತೆ ನಾಳೆ ಇರುವುದಿಲ್ಲ. ಕತ್ತಲಾದ ಮೇಲೆ ಬೆಳಕು ಬಂದೇ ಬರುತ್ತದೆ. ಕೋಲಾರ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅವರು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ಅದರಿಂದಾಗಿ ಕೋಲಾರ ಕೃಷಿ ಪದ್ಧತಿ ಮಾದರಿ ಎಂದು ಹೇಳಿದ್ದೇನೆ. ರೈತರ ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯುವ ನಿಟ್ಟಿನಲ್ಲಿ ಒಂದು ದಿನ ರೈತರೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಸಮಸ್ಯೆಗಳಲ್ಲಿ ಸಿಲುಕಿರುವ ರೈತರು ಶ್ರಮ ವಹಿಸಿ ಆ ಸುಳಿಯಿಂದ ಹೊರ ಬರಬೇಕೇ ಹೊರತು, ಸಾವಿಗೆ ಶರಣಾಗಬಾರದು ಎಂದು ಅವರು ಹೇಳಿದರು.

Translate »