ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಂತೆ ಏಪ್ರಿಲ್ 15 ರವರೆಗೆ ಲಾಕ್‍ಡೌನ್‍ಗೆ ಸಹಕರಿಸಬೇಕು: ಸಚಿವ ಬಿ.ಸಿ.ಪಾಟೀಲ್
ಮೈಸೂರು

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಂತೆ ಏಪ್ರಿಲ್ 15 ರವರೆಗೆ ಲಾಕ್‍ಡೌನ್‍ಗೆ ಸಹಕರಿಸಬೇಕು: ಸಚಿವ ಬಿ.ಸಿ.ಪಾಟೀಲ್

March 26, 2020

ಬೆಂಗಳೂರು, ಮಾ. 26; ರಾಜ್ಯದಲ್ಲಿ ಲಾಕ್‍ಡೌನ್ ಪರಿಸ್ಥಿತಿಯನ್ನು ಯಾರೂ ಸಹ ದುರುಪಯೋಗಪಡಿಸಿಕೊಳ್ಳುವುದಾಗಲೀ ಕಾಳಸಂತೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುವುದಾಗಲಿ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಖಡಕ್ ಸೂಚನೆ ಕೊಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯವಸ್ತುಗಳ ಖರೀದಿಗೆ ಹಾಗೂ ತುರ್ತು ಕೆಲಸಕ್ಕೆ ಹೋಗುವವರಿಗೆ ಮತ್ತು ವಾಹನಗಳಿಗೆ ಪರವಾನಿಗೆ ನೀಡಬೇಕು.

ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ, ಸ್ಕೇರ್ ಸಿಟಿ ಆಗದಂತೆ ನೋಡಿಕೊಳ್ಳಬೇಕು, ರಾಜ್ಯದ ಜನರಿಗೆ ಮೂಲಭೂತ ಅಗತ್ಯ ವಸ್ತುಗಳು ಕೊರತೆಯಾಗದಂತೆ ಸರ್ಕಾರ ಕ್ರಮಕೈಗೊಂಡಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಮಾಧ್ಯಮವು ಸಹ ತುರ್ತುಸೇವೆಯಲ್ಲಿದೆ. ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಸಚಿವರು ಹೇಳಿದರು.

ಆದಷ್ಟು ಬೇಗ ಜಿಲ್ಲಾಸ್ಪತ್ರೆ ವತಿಯಿಂದ ಹದಿನೈದು ಸಾವಿರ ಮಾಸ್ಕ್‍ಗಳನ್ನು ವಿತರಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗಿರುವ ಸೌಕರ್ಯಗಳ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ವಸ್ತುಗಳು ದೊರೆಯುವ ಅಂಗಡಿಗಳನ್ನು ಮುಚ್ಚಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಟಾರ್ಸ್‍ಪೋಸ್ ಕಾರ್ಯಾಚರಣೆ, ವೈದ್ಯಕೀಯ ಸಿಬ್ಬಂದಿಗಳ ಸೇವಾ ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

ಕೊರೊನಾದಂತಹ ಮಹಾಮಾರಿ ರಾಷ್ಟ್ರವನ್ನೇ ತಲ್ಲಣಗೊಳಿಸಿದೆ. ಕೊರೊನಾ ವೈರಾಣು ಓಡಿಸಲು ಹಾಗೂ ದೇಶದ ಜನರನ್ನು ಸುರಕ್ಷಿತಗೊಳಿಸಲು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಪ್ರಧಾನಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಲಾಕ್‍ಡೌನ್ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಟಾರ್ಸ್‍ಪೋರ್ಸ್ ಮೇಲೆ ಜನರಿಗೆ ಇನ್ನಷ್ಟು ನಂಬಿಕೆ ಬರುವಂತೆ ಕೆಲಸ ಮಾಡಬೇಕು. ಲಾಕ್‍ಡೌನ್‍ಗಾಗಲೀ ಕೊರೊನಾ ಮಾರಿಗಾಗಲೀ ಜನತೆ ಭಯಪಡುವುದು ಬೇಡ. ಜನರ ಜೊತೆ ಸರ್ಕಾರ ಇದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಜನತೆಯು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಪೊಲೀಸರ ಕೆಲಸವಷ್ಟೇ ಅಲ್ಲ. ಜನರು ಸ್ವಯಂಪ್ರೇರಿತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಲಾಕ್‍ಡೌನ್‍ಗೆ ಸಹಕರಿಸಿ, ಮನೆಯಿಂದ ಹೊರಬರದ ರೀತಿಯಲ್ಲಿ ಜನರು ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಬೇಕು.

ಯಾರೂ ಎದೆಗುಂದದೇ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಂತೆ ಏಪ್ರಿಲ್ 15 ರವರೆಗೆ ಲಾಕ್‍ಡೌನ್‍ಗೆ ಸಹಕರಿಸಬೇಕು ಎಂದು ಕೃಷಿ ಸಚಿವರು ಕರೆ ನೀಡಿದರು.

Translate »