ಅರಮನೆ ಅಂಗಳದಲ್ಲಿನಮೋ ಯೋಗ
ಮೈಸೂರು

ಅರಮನೆ ಅಂಗಳದಲ್ಲಿನಮೋ ಯೋಗ

June 21, 2022

ಮೈಸೂರು,ಜೂ.20 (ಎಂಟಿವೈ)-ಮೈಸೂರಿನ ಐತಿಹಾಸಿಕ ಅಂಬಾ ವಿಲಾಸ ಅರಮನೆ ಅಂಗಳ ಪ್ರಧಾನಿ ಮೋದಿ ನೇತೃತ್ವದ ಸಾಮೂಹಿಕ ಯೋಗ ಪ್ರದ ರ್ಶನಕ್ಕೆ ಅಣಿಯಾಗಿದೆ.

ಅರಮನೆ ಆವರಣದಲ್ಲಿ ಮಂಗಳವಾರ(ಜೂ.21) ನಡೆಯಲಿರುವ ಅಂತರ ರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆಯಲಿ ರುವ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಗಣ್ಯರು ಸೇರಿ ದಂತೆ ಎಲ್ಲಾ ಯೋಗಪಟು ಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸ ಲಾಗಿದೆ. ಹಸಿರು ಮ್ಯಾಟ್ ಮೇಲೆ ನಿಗದಿತ ಅಂತರದಲ್ಲಿ ನೀಲಿ ಮ್ಯಾಟ್ ಅಳವಡಿಸಿ, ವ್ಯವಸ್ಥಿತ ಯೋಗ ಪ್ರದರ್ಶ ನಕ್ಕೆ ಅಣಿ ಮಾಡಲಾಗಿದೆ. ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಎಚ್ಚರಿಕೆ ಯಿಂದ ಸಿದ್ಧತೆ ಪೂರ್ಣ ಗೊಳಿಸಲಾಗಿದೆ. ಅರಮನೆ ಸುತ್ತಲೂ ಪೊಲೀಸರ ಸರ್ಪ ಗಾವಲಿದ್ದು, ಕಾರ್ಯಕ್ರಮ ದಲ್ಲಿ ಸಣ್ಣ ಲೋಪವೂ ಆಗ ದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ 12 ಸಾವಿರ ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿ 3 ಸಾವಿರ ಗಣ್ಯರು, ಅಧಿಕಾರಿ ವರ್ಗದವರು ಪಾಲ್ಗೊಳ್ಳಲು ಸ್ಥಳಾವಕಾಶ ಕಾಯ್ದಿರಿಸಲಾಗಿದೆ. ನಾಳೆ ಮುಂಜಾನೆ ಯಿಂದಲೇ ಯೋಗಪಟುಗಳು ಅರಮನೆ ಆವರಣಕ್ಕೆ ಆಗಮಿಸುವುದರಿಂದ ಮ್ಯಾಟ್ ಹಾಸುವ ಕಾರ್ಯವನ್ನು ಸೋಮವಾರವೇ ಪೂರ್ಣಗೊಳಿಸಲಾಗಿದೆ.

ಆಯುಷ್‍ನಿಂದ ಯೋಗ ಮ್ಯಾಟ್: ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಕಳೆದ 15 ದಿನದಿಂದ ಅರಮನೆ ಆವರಣದಲ್ಲಿ ಸಿದ್ಧತಾ ಕಾರ್ಯ ನಡೆದಿದ್ದು, ಅರಮನೆ ಮುಂಭಾಗದ ಪ್ರಾಂಗಣ ಸೇರಿದಂತೆ ಜಯಮಾರ್ತಾಂಡ ದ್ವಾರದ ರಸ್ತೆ, ತ್ರಿನೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಪಾರ್ಕ್, ವರಾಹಸ್ವಾಮಿ ದೇವಾಲಯ ಪಕ್ಕದ ಪಾರ್ಕ್, ಭುವನೇಶ್ವರಿ ದೇವಾಲಯ ಪಕ್ಕದ ಪಾರ್ಕ್‍ನಲ್ಲೂ ಯೋಗ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಮಾಡಿಕೊಂಡಿದ್ದ ಯೋಗಪಟುಗಳಿಗೆ ಅರಮನೆ ಪ್ರವೇಶಕ್ಕೂ ಮುನ್ನ ಆಯುಷ್ ಇಲಾಖೆಯಿಂದ ಮ್ಯಾಟ್ ಕಿಟ್ ನೀಡುವ ಆಲೋಚನೆ ಇತ್ತು. ಆದರೆ, ಯೋಗಪಟುಗಳು ಎಲ್ಲೆಂದರಲ್ಲಿ ಯೋಗ ಮ್ಯಾಟ್ ಹಾಸಿ ಅಭಾಸ ಉಂಟು ಮಾಡಬಹುದೆಂಬ ಕಾರಣಕ್ಕೆ ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಶಾಲೆಗಳ ತರಬೇತುದಾರರು ಇಂದು ಬೆಳಗ್ಗಿನಿಂದಲೇ ಕ್ರಮಬದ್ಧ ಹಾಗೂ ಏಕಪ್ರಕಾರ ವಾಗಿ ಯೋಗ ಮ್ಯಾಟ್ ಹಾಸುವ ಮೂಲಕ ಶಿಸ್ತು ಕಾಪಾಡುವ ಪ್ರಯತ್ನ ಮಾಡಿದ್ದಾರೆ.

ಯೋಗ ಪ್ರದರ್ಶನಕ್ಕಾಗಿ ಅರಮನೆ ಆವರಣವನ್ನು ವಿವಿಧ ಬ್ಲಾಕ್‍ಗಳಾಗಿ ವಿಂಗಡಿಸ ಲಾಗಿದೆ. ಒಂದು ಬ್ಲಾಕ್‍ನಿಂದ ಮತ್ತೊಂದು ಬ್ಲಾಕ್‍ಗೆ ಹಾದು ಹೋಗದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದರಿಂದ ಯೋಗಪಟುಗಳು ನಿಗದಿತ ಸ್ಥಳದಲ್ಲೇ ಯೋಗ ಮಾಡಬೇಕಿದೆ. ಈಗಾಗಲೇ ಮ್ಯಾಟ್ ಹಾಸಿರುವುದರಿಂದ ಮುಂಜಾನೆ ಯೋಗಪಟು ಗಳು ತಮ್ಮ ತಮ್ಮ ಬ್ಲಾಕ್‍ಗೆ ತೆರಳಿ ನಿಗದಿತ ಸ್ಥಳದಲ್ಲಿ ಯೋಗ ಮಾಡಲಿದ್ದಾರೆ.

ಅಂತಿಮ ಹಂತದ ಭದ್ರತಾ ಪರಿಶೀಲನೆ: ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಅರಮನೆ ಆವರಣದ ಜಯಮಾರ್ತಾಂಡ ದ್ವಾರದ ಬಳಿ ನಿರ್ಮಿಸಿರುವ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುವುದರಿಂದ ಅಂತಿಮ ಹಂತದ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಅರಮನೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಅರಮನೆಯ ಪ್ರಮುಖ ದ್ವಾರಗಳಾದ ಬಲರಾಮ-ಜಯರಾಮ, ಬ್ರಹ್ಮಪುರಿ, ಕರಿಕಲ್ಲುತೊಟ್ಟಿ, ಅಂಬಾವಿಲಾಸ, ವರಾಹ ಹಾಗೂ ಜಯಮಾರ್ತಾಂಡ ದ್ವಾರದ ಬಳಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ಅದರೊಂದಿಗೆ ಒಂದೊಂದು ದ್ವಾರದ ಬಳಿಯೂ ಒಂದು ತುಕಡಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ಗೇಟ್ ಬಳಿಯೂ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಅರಮನೆ ಆವರಣ ಪ್ರವೇಶಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮೆಟಲ್ ಡಿಟೆಕ್ಟರ್ ಹಾದು ಹೋಗಬೇಕಾಗಿದೆ. ಅರಮನೆಗೆ ಆಗಮಿಸುವ ಪ್ರತಿಯೊಬ್ಬರ ಮೇಲೂ ತೀವ್ರ ನಿಗಾವಹಿಸಲಾಗುತ್ತದೆ.

ಮುಂಜಾನೆ 3.30ರಿಂದ ಪ್ರವೇಶ: ಅರಮನೆ ಆವರಣದಲ್ಲಿ ನಡೆಯುವ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿರುವ ಯೋಗಪಟು ಗಳು ಮುಂಜಾನೆ 3.30ರಿಂದಲೇ ಅರಮನೆಗೆ ಆಗಮಿಸಲು ಸೂಚಿಸಲಾಗಿದೆ. ಯೋಗ ಶಾಲೆ ಹಾಗೂ ವಿವಿಧ ಶಾಲಾ-ಕಾಲೇಜುಗಳಿಂದ ಯೋಗಪಟುಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ ಶಾಸಕ ಎಸ್.ಎ.ರಾಮದಾಸ್ ಅರಮನೆ ಆವರಣದಲ್ಲಿ ಮಾರ್ಗದರ್ಶನ ನೀಡಲಿರುವ ತರಬೇತುದಾರರೊಂದಿಗೆ ಸಮಾಲೋಚಿಸಿ ದರು. ಯೋಗಪಟುಗಳಿಗೆ ಉತ್ತಮ ಮಾರ್ಗದರ್ಶನ ನೀಡಿ, ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.

Translate »