ಇಂದಿರಾ ಕ್ಯಾಂಟೀನ್ ಹೆಸರಿಡುವಾಗ ಕನಕದಾಸ ನೆನಪಾಗಲಿಲ್ಲವೇ?
ಮೈಸೂರು

ಇಂದಿರಾ ಕ್ಯಾಂಟೀನ್ ಹೆಸರಿಡುವಾಗ ಕನಕದಾಸ ನೆನಪಾಗಲಿಲ್ಲವೇ?

May 29, 2020
  • ವಿಪಕ್ಷಗಳಿಗೆ ಸಂಸದ ಪ್ರತಾಪ್‍ಸಿಂಹ ಪ್ರಶ್ನೆ
  • ವೀರಸಾವರ್ಕರ್ ಹೆಸರಿಡಲು ವಿರೋಧಕ್ಕೆ ಟೀಕೆ

ಮೈಸೂರು, ಮೇ 28(ಆರ್‍ಕೆಬಿ)- ಯಲಹಂಕ ಫ್ಲೈ ಓವರ್‍ಗೆ ವೀರ ಸಾವರ್ಕರ್ ಹೆಸರಿಡಲು ವಿರೋಧ ವ್ಯಕ್ತವಾಗಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಸುತ್ತೂರು ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ವೀರ ಸಾರ್ವಕರ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅಂತಹವರ ಹೆಸರಿಡಲು ಇವರೇಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ವಿಪಕ್ಷಗಳು ಇಂತಹ ಕ್ಷುಲ್ಲಕ ರಾಜಕಾರಣ ಬಿಡಬೇಕು. ಜನರು ಬುದ್ಧಿವಂತರಾಗಿದ್ದರೆ. ಕಾಂಗ್ರೆಸ್ ಈಗಲೂ ದಡ್ಡತನ ಪ್ರದರ್ಶನ ಮಾಡುತ್ತಿದೆ. ಕಾಂಗ್ರೆಸ್‍ನವರು ಈಗಲಾದರೂ ಎಚ್ಚೆತ್ತು ರಚನಾತ್ಮಕ ರಾಜಕೀಯ ಮಾಡಲಿ ಎಂದು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‍ನವರಿಗೆ ಇಂದಿರಾ ಕ್ಯಾಂಟೀನ್ ಹೆಸರಿಡುವಾಗ ಕನಕದಾಸರ ಹೆಸರು ನೆನಪಾಗಲಿಲ್ಲವೇಕೆ? ನಾಗರಹೊಳೆ, ಬಂಡೀಪುರ ಅಭಯಾರಣ್ಯಕ್ಕೆ ನೆಹರು ಕುಟುಂಬದ ಹೆಸರಿಡುವಾಗ ಕನ್ನಡದವರ ನೆನಪಾಗಲಿಲ್ಲವೇಕೆ? ಈಗ ಮಾತ್ರ ಅವರಿಗೆ ಕನ್ನಡದವರ ನೆನಪು ಬಂತೇ? ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿಗಳಿಬ್ಬರು ವೀರಸಾವರ್ಕರ್ ಇದ್ದ ಅಂಡಮಾನ್ ನಿಕೋಬಾರ್ ಜೈಲನ್ನು ಒಮ್ಮೆ ನೋಡಿ ಬರಲಿ ಎಂದು ತರಾಟೆಗೆ ತೆಗೆದುಕೊಂಡರು.

Translate »