ಯುವ ಕಾಂಗ್ರೆಸ್-ಮೈಸೂರು ಚುನಾವಣೆ ಅಕ್ರಮ: ಕಾರ್ಯಕರ್ತರ ಆರೋಪ-ಪ್ರತಿಭಟನೆ
ಮೈಸೂರು

ಯುವ ಕಾಂಗ್ರೆಸ್-ಮೈಸೂರು ಚುನಾವಣೆ ಅಕ್ರಮ: ಕಾರ್ಯಕರ್ತರ ಆರೋಪ-ಪ್ರತಿಭಟನೆ

February 5, 2021

ಮೈಸೂರು,ಫೆ.4(ವೈಡಿಎಸ್)-ಕೆಪಿಸಿಸಿ ಯುವ ಘಟಕದ ಅಧ್ಯಕ್ಷರು ಮತ್ತು ಇತರೆ ಪದಾಧಿಕಾರಿಗಳ ಚುನಾವಣೆಯ ಫಲಿತಾಂಶದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‍ನ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದ ಕಾರ್ಯಕರ್ತರು ಪಕ್ಷದ ಕಚೇರಿ ಎದುರು ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು. ರೈಲು ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಮೈಸೂರು ಘಟಕದ ಕಚೇರಿ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ, ಪದಾಧಿಕಾರಿ ಆಗಬೇಕೆಂದು 3 ತಿಂಗಳಿಂದ ಜಿಲ್ಲಾದ್ಯಂತ ಸಂಚರಿಸಿ, ಗ್ರಾಮಗಳಿಗೆ ತೆರಳಿ, ಮನೆ-ಮನೆಗೆ ಭೇಟಿ ನೀಡಿ ಯುವಕರನ್ನು ಸದಸ್ಯರನ್ನಾಗಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು. ಇಂದು ಪ್ರಕಟವಾದ ಫಲಿತಾಂಶ ಸರಿಯಿಲ್ಲ. ನಿಷ್ಟಾವಂತರು ಸೋತಿದ್ದಾರೆ. ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಚುನಾವಣೆ ಅಕ್ರಮಕ್ಕೆ ಕಾರಣರಾದವ ರನ್ನು ಪಕ್ಷದಿಂದ ಉಚ್ಛಾಟಿಸಿ, ಚುನಾವಣೆ ರದ್ದು ಮಾಡಿ. ಶುಕ್ರವಾರ 100ಕ್ಕೂ ಅಧಿಕ ಕಾರ್ಯಕರ್ತರು ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕಾರ್ಯಕರ್ತರಾದ ಮನೋಜ್, ಹಿನಕಲ್ ಮಂಜು, ಬಿಳಿಕೆರೆ ಸ್ವಾಮಿ, ಮಹಮದ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »