ಅಂಧ ಹೆಣ್ಣು ಮಕ್ಕಳ ಆಶ್ರಯದಾ
ನಿಮ್ಮ ಪತ್ರಗಳು

ಅಂಧ ಹೆಣ್ಣು ಮಕ್ಕಳ ಆಶ್ರಯದಾ

April 24, 2018

ಮಾನ್ಯರೆ,

ಲೂಯಿ ಬ್ರೈಲ್ ಅಂಧರ ಪಾಲಿನ ವಿದ್ಯಾ ಪುರುಷ ಸರಸ್ವತಿ. ಅಂಧ ಹೆಣ್ಣು ಮಕ್ಕಳ ಪಾಲಿಗೆ, ನಮ್ಮ ಮೈಸೂರಿನಲ್ಲಿ, ಒಂದು ವಿಶ್ವವಿದ್ಯಾನಿಲಯ ಮಾಡುತ್ತಿರುವಂತಹ ಕಾಯಕ ವನ್ನು ಮಾಡುತ್ತಿರುವವರು, ಎನ್.ಆರ್. ಅಂಧ ಹೆಣ್ಣು ಮಕ್ಕಳ ವಸತಿ ಶಾಲೆಯ ಅಘೋಷಿತ, ಆಜೀವ ಕುಲಪತಿ ಆರ್.ಗುರು, ಸಾವಿರಾರು ಅಂಧ ಹೆಣ್ಣು ಮಕ್ಕಳ ಪಾಲಿನ ಅನ್ನದಾತ.

ಮೈಸೂರಿನಲ್ಲಿ ಎಫ್.ಕೆ.ಇರಾನಿಯವರಿಂದ ಹಿಡಿದು ಅನೇಕ ಉದ್ಯಮಿಗಳು ಆಗಿಹೋಗಿದ್ದಾರೆ. ಆದರೆ ಸಜ್ಜನ-ಹೃದಯವಂತ-ಶಿಸ್ತು-ದಕ್ಷತೆ ಮೈಗೂಡಿಸಿಕೊಂಡಿ ರುವ, ಸಮಾಜಮುಖಿ-ಸಾಂಸ್ಕೃತಿಕ-ಸಂಸ್ಕಾರವಂತ ಉದ್ಯಮಿ ಆರ್. ಗುರುರಂತಹ ಅವರು ವಿರಳ.

ಹೆಣ್ಣು ಮಕ್ಕಳ ವಿದ್ಯಾಭ್ಯಾಸವೆಂದರೆ ಒಂದು ರೀತಿಯ ಕಡೆಗಣನೆಯೇ. ಅದರಲ್ಲೂ ಅಂಧ ಹೆಣ್ಣುಮಕ್ಕಳ ಭವಿಷ್ಯ ನಿಜವಾಗಿ ಅಂಧಕಾರವೇ. ಅಂತಹ ಮಕ್ಕಳ ಭವಿಷ್ಯವನ್ನು ಸರ್ಕಾರಗಳು ಕೈಗೆತ್ತಿಕೊಳ್ಳಬೇಕು. ಮೈಸೂರಿನಲ್ಲಿ ಅಂಧ ಬಾಲಕರ ವಸತಿ ಶಾಲೆಯನ್ನೇನೋ ಸರ್ಕಾರ ನಡೆಸುತ್ತಿದೆ. ಆದರೆ ಅಂಧ ಹೆಣ್ಣು ಮಕ್ಕಳ ಬಾಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುವವರು ಯಾರು ? ಇದನ್ನು ಮನಗಂಡ ಆರ್. ಗುರು, ಅಂಧ ಬಾಲಕಿಯರ ಬಾಳ ಬೆಳಕಾದರು. ಸರ್ಕಾರದ ಕಡೆ ಕೈಚಾಚದೆ, ತಮ್ಮ ಸ್ವಂತ ಖರ್ಚಿನಿಂದ ವಸತಿ ಶಾಲೆ ತೆರೆದು, ಸಾವಿರಾರು ಅಂಧ ಬಾಲಕಿಯರ ಪಾಲಿಗೆ ಬಾಳ ಬೆಳಕಾದರು. ಮೇಟಗಳ್ಳಿಯಲ್ಲಿ ನಡೆಯುತ್ತಿರುವ ಈ ಶಾಲೆ ಬಹುಶಃ ರಾಷ್ಟ್ರಕ್ಕೇ ಮಾದರಿ. ಇದರಲ್ಲಿ ಯಶಸ್ವಿ ಉದ್ಯಮಿ ಆರ್. ಗುರುರವರ ಅಂತಃಕರಣದ ಅನಾವರಣವಾಗಿದೆ.

ರೋಟರಿಯಿಂದ ಹಿಡಿದು ಪ್ರತಿಷ್ಠಿತ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಎಂ.ಎ.ಟಿ.ಎಫ್, ಅನೇಕ ಸಾಮಾಜಿಕ ಸೇವಾ ಸಂಸ್ಥೆ, ಸಂಗೀತ ಸಂಸ್ಥೆಗಳಲ್ಲಿ ಆರ್. ಗುರುರವರ ಕೊಡುಗೆ ಇದೆ. ಅವರು ಮನಸ್ಸು ಮಾಡಿದ್ದರೆ ಎಂದೋ ಶಾಸಕರಾಗಬಹುದಿತ್ತು. ಆರ್. ಗುಂಡೂರಾಯರು ಮುಖ್ಯಮಂತ್ರಿಗಳಾಗಿ ದ್ದಾಗ, ಗುರುರವರಿಗೆ ರಾಜಕೀಯ ಕ್ಷೇತ್ರಕ್ಕೆ ಬಹಿರಂಗ ಆಹ್ವಾನ ನೀಡಿದ್ದರು. ಆದರೆ ಗುರೂರವರು ಎಂದೂ ನಿರ್ಲಿಪ್ತ. ಮುಂದಿನ ಬಾರಿಯಾದರೂ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಅವರು ಭಾಜನರಾಗಲಿ. ಇದು ಮೈಸೂರು ನಾಗರಿಕರೆಲ್ಲರ ಆಶಯವಾಗಿದೆ.

– ಡಾ|| ಕೆ.ರಘುರಾಂ ವಾಜಪೇಯಿ, ಹಿರಿಯ ಸಮಾಜ ಸೇವಕರು, ಮೈಸೂರು. ತಾ.23.4.2018

Translate »