ಕನ್ನಡಿಗರ ನೆನಪಿನಾಗಸದ ತುಂಬ ರಾಜಕುಮಾರ
ಅಂಕಣಗಳು

ಕನ್ನಡಿಗರ ನೆನಪಿನಾಗಸದ ತುಂಬ ರಾಜಕುಮಾರ

April 24, 2018

ಅಂದಿನ ಸಿನಿಮಾಗಳಲ್ಲಿ ಕಥೆಗಾರರು ಸಿನಿಮಾದ ನಾಯಕ ನಟನಿಗಾಗಿ ಕತೆ ಬರೆಯುತ್ತಿರಲಿಲ್ಲ ಕತೆ ಬಯಸಿದ ಪಾತ್ರಕ್ಕೆ ನಾಯಕ ಬದಲಾಗುತ್ತಿದ್ದ. ಅಂಥ ಕಾಲದಲ್ಲಿ ಬಂದ ಅಣ್ಣಾವ್ರು ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಿದ್ದರು. ಭಕ್ತ ಕನಕದಾಸ ಪಾತ್ರ ಮಾಡಿದ ಅದೇ ರಾಜ್‍ಕುಮಾರ್, ಜೇಮ್ಸ್‍ಬಾಂಡ್ ಪಾತ್ರವನ್ನೂ ಮಾಡುತ್ತಿದ್ದರು. ಅಂದರೆ ಆಗ ಕಲಾವಿದನಿಗೆ ಪರಕಾಯ ಪ್ರವೇಶದ ಸಾಮಥ್ರ್ಯ ಇರಬೇಕಿತ್ತು. ಶುದ್ಧ ಭಾವ ಪ್ರತಿಸ್ಪಂದನ ಇರಬೇಕಿತ್ತು. ಧ್ವನಿಯ ಏರಿಳಿತ ಮತ್ತು ಶ್ರಮವಹಿಸಿ ಅದನ್ನು ದುಡಿಸಿಕೊಳ್ಳುವ ಸತತ ಪರಿಶ್ರಮ ಇರಬೇಕಿತ್ತು. ಇದೆಲ್ಲಾ ಇದ್ದವರು ಕಲಾವಿದರಾಗುತ್ತಿದ್ದರೇ ವಿನಃ ಸ್ಟಾರ್ ಆಗುತ್ತಿರಲಿಲ್ಲ.

ಇಂದು ಕನ್ನಡ ಕಲಾ ಜಗತ್ತಿನ ಮಹಾ ನಕ್ಷತ್ರವೊಂದರ ಜನ್ಮದಿನ. ಬೆಳ್ಳಿ ತೆರೆಯ ಮೇಲೆ ಸಮ ಚಿತ್ತದಿಂದ ಸಂಚರಿಸಿ ರಾರಾಜಿಸಿದ ವರನಟ ಡಾ. ರಾಜ್‍ಕುಮಾರ್ ಹುಟ್ಟಿದ ದಿನ. ಇವತ್ತಿಗೂ ಡಾ. ರಾಜ್‍ಕುಮಾರ್ ಎಂದರೆ ಏನೋ ಒಂದು ಸಂಚಲನ. ಅಸಾಮಾನ್ಯ ವ್ಯಕ್ತಿತ್ವ ವೊಂದರ ನೆನಪು. ಪರಿಪೂರ್ಣ ಮನುಷ್ಯತ್ವ ವೊಂದರ ಉಜ್ವಲ ಬೆಳಕು. ಅವರು ತಮ್ಮ ಅಭಿನಯ ಚತುರತೆಯಿಂದಲೇ ಪ್ರೇಕ್ಷಕ ವರ್ಗವನ್ನು ತಣಿಸಲು ಹೊರಟವರಲ್ಲ! ತನಗೆ ನೀಡಿದ ಪಾತ್ರದಲ್ಲಿ ತಾನೇ ಪಾತ್ರ ವಾಗಿ, ಅದರ ಆಳಕ್ಕಿಳಿದು ಪಾತ್ರದ ಪರಕಾಯ ಪ್ರವೇಶ ಮಾಡುತ್ತಿದ್ದ ದಕ್ಷಿಣ ಭಾರತದ ಸುಸಂಸ್ಕøತ ನಟ ಡಾ. ರಾಜ್ ಕುಮಾರ್. ಇದೀಗ ಕನ್ನಡದ ಮುತ್ತೊಂದು ಕಣ್ಮರೆಯಾಗಿ ಹನ್ನೆರಡು ವರುಷ ಕಳೆದು ಹೋಯಿತು! ನನ್ನ ಹಾಗೂ ನನ್ನ ಹಿರಿಯ ತಲೆಮಾರಿನವರಿಗೆ ರಾಜ್‍ಕುಮಾರ್ ಸಿನಿಮಾ ಗಳು ಯಾವತ್ತಿಗೂ ಸಂಭಾವಿತ ಕನ್ನಡ ಸಂಸ್ಕೃತಿಯನ್ನು ಪರಿಚಯಿಸಿದೆ. ಅದು ಯಾವತ್ತಿಗೂ ಒಂದು ಸದಭಿರುಚಿಯ ಎಲ್ಲೆಯನ್ನ ಮೀರಿ ಚಿತ್ರಿಸಿಕೊಳ್ಳಲಿಲ್ಲ. ಕರ್ನಾಟಕದ ಸಾಂಸ್ಕøತಿಕ ವಾತಾವರಣ ವನ್ನು ಕೆಡಿಸುತ್ತಿರಲಿಲ್ಲ. ಕೆಟ್ಟದ್ದರ ಕಡೆಗೆ ಯುವಕರನ್ನ ಪ್ರಚೋದಿಸುತ್ತಿರಲಿಲ್ಲ. ನಾಡು-ನುಡಿಯ ವಿಷಯಗಳನ್ನು ಕುರಿತ ಸೀನುಗಳು ಅವರ ಪಾಲಿಗೆ ಸಿಕ್ಕರೆ ಸಾಕು ರಾಜ್‍ಕುಮಾರ್ ತಾನೇ ಮಯೂರನಾಗಿ, ಕೃಷ್ಣದೇವರಾಯನಾಗಿ, ಬಬ್ರುವಾಹನನಾಗಿ, ಇಮ್ಮಡಿ ಪುಲಿಕೇಶಿಯಾಗಿ ವಿಜೃಂಭಿಸಿ ಬಿಡುತ್ತಿದ್ದ ಮಹಾ ಪ್ರತಿಭೆ. ಇಂಥಾ ಆವೇಶ ಭರಿತ ಅಭಿನಯವನ್ನು ನೋಡುತ್ತಾ ಪ್ರೇಕ್ಷಕ ವಲಯದಲ್ಲಿ ಕುಳಿತಿರುತ್ತಿದ್ದ ಆ ಕಾಲದ ಯುವಕರ ಎದೆ ತನ್ನಷ್ಟಕ್ಕೆ ತಾನೇ ನೆಲ, ಜಲ, ಭಾಷೆ, ಭಾವಗಳ ಬೀಜ ಬಿತ್ತಿಕೊಳ್ಳು ತ್ತಿತ್ತು. ಅಭಿಮಾನ ತುಂಬಿ ಹರಿದು ಸಮ್ಮೋಹನಗೊಳ್ಳುತ್ತಿದ್ದರು. ಹೆತ್ತವರ ಬಾಳಿಗೆ ಬೆಳಕಾಗುವ ಮಕ್ಕಳೇ ನಿಜವಾದ ಮಕ್ಕಳು ಎಂಬಂತೆ ನೀತಿ ತುಂಬುವ ಚಿತ್ರ ಕತೆಗಳಿಗೆ ಜೀವ ತುಂಬುತ್ತಿದ್ದವರು ರಾಜ್‍ಕುಮಾರ್. ಭಕ್ತಿರಸ ಪ್ರಧಾನ ಚಿತ್ರಗಳ ಮೂಲಕ ಆ ವರ್ಗದ ಪ್ರೇಕ್ಷಕರ ಕಣ್ಣಾಲಿಗಳಲ್ಲಿ ತಾವು ನಂಬಿದ ಮೌಲ್ಯಗಳಿಗಾಗಿ ಪ್ರಾಣ ಹೋದರೂ ರಾಜಿ ಮಾಡಿಕೊಳ್ಳದ ಹಠ ಹುಟ್ಟಿಸುತ್ತಿದ್ದರು. ಇವತ್ತಿಗೂ ಸತ್ಯ ಹರಿಶ್ಚಂದ್ರ ಸಿನಿಮಾ ನೋಡಿ ಕಣ್ಣಲ್ಲಿ ಒಂದೂ ಹನಿ ನೀರಾಡಿಸದ ಪ್ರೇಕ್ಷಕ ಇಲ್ಲ. ಹೀಗೆ ತನಗೆ ದೊರೆತ ಅಭಿನಯದ ವೃತ್ತಿ ಪ್ರವೃತ್ತಿಗಳ ಮೂಲಕವೇ ಸಾಂಸ್ಕøತಿಕ ಕರ್ನಾಟಕ ಕಟ್ಟಿದ ರಾಜ್‍ಕುಮಾರ್ ಎಲ್ಲರಿಗೂ ಇಷ್ಟ ಆಗೋದು ಈ ಕಾರಣಕ್ಕೇನೆ.

ಅಣ್ಣಾವ್ರು ಓದಿದ್ದು ಕಡಿಮೆ, ಆದರೆ ಅವರ ಜೀವನ ಶಿಕ್ಷಣ ದೊಡ್ಡದು. ಅವರ ಅನುಭವ ದರ್ಪಣ ತೂಕದ್ದು. ನಮ್ಮ ತಂದೆÉ ಹೇಳುತ್ತಿದ್ದರು “ಇನ್ನೊಬ್ಬರ ಏಳಿಗೆ ಕಂಡು ಅಸೂಯೆ ಪಡಬಾರದು; ಆನಂದ ಪಡಬೇಕು ಅಂತ” – ನಮ್ಮ ಹಿರಿಯರು ಹೀಗೆ ಹೇಳುತ್ತಿದ್ದರು ಅಂತ ಮಾತಾಡು ತ್ತಿದ್ದ ಅಣ್ಣಾವ್ರು, ಶಾಲೆಯಲ್ಲಿ ಕಲಿತದ್ದ ಕ್ಕಿಂತ ಜೀವನ ಎನ್ನುವ ಅನುಭವ ಶಾಲೆ ಯಲ್ಲಿ ಕಲಿತು ಪಕ್ವವಾದವರು. ಹೀಗೆ ತಂದೆ-ತಾಯಿ, ಗುರು-ಹಿರಿಯರನ್ನ ಸ್ಮರಿಸಿ ಕೊಳ್ಳುವ ಮೂಲಕ ಕರ್ನಾಟಕದಲ್ಲಿ ಒಂದು ಸಾಂಸ್ಕøತಿಕ ಪರಂಪರೆಯನ್ನ ನಂಬಿ ಬದುಕುವ ಒತ್ತಾಸೆಯನ್ನ ಹೇಳಿ ಹೋದವರು ರಾಜ್‍ಕುಮಾರ್. ಅವರು ಯಾವಾಗಲೂ ತಂದೆ-ತಾಯಿಯರನ್ನು ಪ್ರೀತಿಸ್ದೆ ಇರೋರು ನನಗೆ ಇಷ್ಟ ಆಗಲ್ಲ ಅಂತಿದ್ರು. ಅಂದರೆ ರಕ್ತಸಂಬಂಧದ ಜೊತೆ ಬೆರೆತವನು ಮಾತ್ರ ಮನುಷ್ಯ ಸಂಬಂಧ ಗಳನ್ನು ಕಟ್ಟಿಕೊಳ್ಳಬಲ್ಲ ಎಂಬ ಸಾಮಾಜಿಕ ಸಂಗತಿಗಳು ಅವರ ಮಾತಿನಿಂದ ಹುಟ್ಟು ತ್ತಿದ್ದವು. ತಮ್ಮ ಚಿತ್ರಗಳ ಮೂಲಕ ಅವರು ಇದೆಲ್ಲವನ್ನು ಅಭಿನಯಿಸಿ ತೋರಿಸುತ್ತಿದ್ದರು.

ಕಲಿಕೆಗೆ ವಯಸ್ಸಿಲ್ಲ ಎಂಬುದಕ್ಕೆ ಅವರು ತನ್ನ ದೇಹದ ಚೌಕಟ್ಟಿಗೆ ಯೋಗ ಮುದ್ರೆಯ ಮೈಕಟ್ಟು ತೊಡಿಸಿದ್ದು ತನ್ನ ಐವತ್ತನೇ ವಯಸ್ಸಿನಲ್ಲಿ, ಅಂದರೆ ಅವರು ಯೋಗ ಕಲಿಯಲು ಶುರುಮಾಡಿದ್ದು ಐವತ್ತನೇ ವಯಸ್ಸಿನಲ್ಲಿ, ಕಲಿಕೆಗೆ ವಯಸ್ಸಿಲ್ಲ ರಾಜ್ ನೆನಪಿಗೆ ಇಂಥದೇ ಎಂಬ ಹೊತ್ತಿಲ್ಲ. ಅವರು ಅಭಿನಯಿಸಿದ ಚಿತ್ರಗಳ ಹೀರೋ ನಮ್ಮ ಮನೆಯಲ್ಲಿರುವ ಒಬ್ಬ ಅಣ್ಣನೋ, ತಮ್ಮನೋ, ಭಾವನೋ, ತಂದೆಯೋ ಆಗಿರುವಂತೆ ಭಾಸವಾಗಲು ಕಾರಣ ವೇನೆಂದರೆ ಚಿತ್ರದ ಕತೆ ಮತ್ತು ಹಾಡು ಗಳ ಅವಿಸ್ಮರಣೀಯ ಆನಂದ. ಇಂದಿಗೂ ಎಂದೂ ಮರೆಯದ ಹಾಡು ಎಂಬ ಹಳೆಯ ಮಧುರ ಗೀತೆಗಳನ್ನು ಕೇಳುತ್ತಾ ಹೋದರೆ ಆ ಗೀತ ಗುಚ್ಛದಲ್ಲಿ ಬಹು ಪಾಲು ಹಾಡುಗಳು ರಾಜ್‍ಕುಮಾರ್ ಅವರ ಹಳೆಯ ಚಿತ್ರದ ಹಾಡುಗಳೇ ತುಂಬಿರು ತ್ತವೆ. ಅಷ್ಟರಮಟ್ಟಿಗೆ ಅವರ ಚಿತ್ರಗಳ ಕತೆ ಮತ್ತು ಚಿತ್ರಕತೆ, ಹಾಡುಗಳು ಸಂಯೋಜನೆ ಗೊಳ್ಳುತ್ತಿದ್ದವು. ಹಾಗೆ ಸಂಯೋಜನೆಗೊಂಡ ಅವರ ಎಲ್ಲಾ ಚಿತ್ರಗಳ ಕಥಾ ಚೌಕಟ್ಟಿಗೆ ಕಾರಣ ಡಾ. ರಾಜ್ ಅಲ್ಲ! ಮಿತಭಾಷಿ ಯಾದ ಅವರ ಸಹೋದರ ವರದಪ್ಪÀನವರು. ಆ ಕಾಲಕ್ಕೆ ಕತೆ-ಚಿತ್ರಕತೆ, ಹಾಡುಗಳನ್ನು ವರದಪ್ಪನವರೇ ನಿರ್ಧರಿಸುತ್ತಿದ್ದರು. ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳನ್ನು ಅಣ್ಣಾವ್ರು ಎಂದೂ ದಿಕ್ಕರಿಸುತ್ತಿರಲಿಲ್ಲ. ಹಾಗೆ ನೋಡಿ ದರೆ ಅಭಿನಯ ಮತ್ತು ಶಾರೀರಗಳ ಕಲಾ ಸಂಗಮದಂತಿದ್ದ ಡಾ. ರಾಜ್‍ಕುಮಾರ್ ವ್ಯವಹಾರ ಚತುರರಲ್ಲ, ಮುಗ್ಧತೆ ಮತ್ತು ವಿನಯ ಅವರ ಆಸ್ತಿ. ಇಂಥ ಹೊತ್ತಿನಲ್ಲಿ ಜರೂರಾಗಿ ವ್ಯವಹಾರದ ಚುಕ್ಕಾಣಿ ಹಿಡಿದು ಅವರನ್ನು ರೂಪಿಸಿದ್ದು ಅವರ ಧರ್ಮಪತ್ನಿ ಪಾರ್ವತಮ್ಮನವರು. ರಾಜ್‍ಕುಮಾರ್ ಕೂಡ ತಮ್ಮ ಅಂತರಾಳದಲ್ಲಿ ವರದಪ್ಪ ಮತ್ತು ಪಾರ್ವತಮ್ಮನವರಿಗೆ ಅನಂತ ಪ್ರೀತಿಯ ಔನ್ನತ್ಯ ಸ್ಥಾನವನ್ನೇ ನೀಡಿದ್ದರು. ‘ನ್ಯಾಯವೇ ದೇವರು’ -ಚಿತ್ರದಲ್ಲಿ ರಾಜ್‍ಕುಮಾರ್ ಬಿ. ಸರೋಜಾದೇವಿಯವರ ಜೊತೆ “ಆಕಾಶವೆ ಬೀಳಲಿ ಮೇಲೆ ನಾನೆಂದು ನಿನ್ನವನು” -ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ ಪಾರ್ವತಕ್ಕ ಪಕ್ಕದಲ್ಲೇ ಹರಿಯುತ್ತಿದ್ದ ಕಾಲುವೆಯಲ್ಲಿ ಸದಾಶಿವನಗರದ ಮನೆಯಿಂದ ತಂದಿದ್ದ ಮಕ್ಕಳ ಬಟ್ಟೆ ಒಗೆಯುತ್ತಿದ್ದರಂತೆ. ರಾಜ್‍ರ ಕುಟುಂಬ ಅವರ ಚಿತ್ರಜೀವನವನ್ನು ನಿಭಾಯಿಸಿ ನಿರ್ವಹಿಸಿದ ಮಾರ್ಗದರ್ಶಿ, ಸಂಗಾತಿ ಪಾರ್ವತಮ್ಮ ರಾಜ್‍ಕುಮಾರ್. ರಾಜ್‍ಕುಮಾರ್ ಎಂದರೆ ಅವರೊಂದು ಕರ್ನಾಟಕದ ಸಂಸ್ಕೃತಿಯ ರಸಸಂಜೆ, ಎಂದೂ ಮರೆಯಲಾಗದ ಉದಾತ್ತ ಧ್ವನಿ. ನಕ್ಕು ನಗಿಸಿದ ಗುಲ್‍ಮೊಹರ್.

ಇವತ್ತಿನ ಲಾಂಗು ಲೆಂಗ್ತುಗಳ ಕತೆ ಯುವಕರನ್ನು ಇಂಪ್ರೆಸ್ ಮಾಡುವುದನ್ನು ನೋಡಿದರೆ ನಮ್ಮ ಹುಡುಗರು ನೈತಿಕ ಸಮಾಜದಿಂದ ದೂರವಾಗುತ್ತಿದ್ದಾರೆ ಅಂತ ಅನ್ನಿಸುವುದಿಲ್ಲವೆ? ಅಲ್ಲೆಲ್ಲಾ ನಮಗೆ ಡಾ. ರಾಜ್‍ಕುಮಾರ್ ಸಿನಿಮಾಗಳು ನೆನಪಾಗು ತ್ತವೆ. ಆದರೆ ರಾಜ್‍ಕುಮಾರ್ ನಟಿಸಿದ ಕಳ್ಳನ ಪಾತ್ರದಲ್ಲಿ ಕೂಡ ಒಂದು ನೈತಿಕತೆ ಇರುತ್ತಿತ್ತು. ಅಂದಿನ ಸಿನಿಮಾಗಳಲ್ಲಿ ಕಥೆ ಗಾರರು ಸಿನಿಮಾದ ನಾಯಕ ನಟನಿಗಾಗಿ ಕತೆ ಬರೆಯುತ್ತಿರಲಿಲ್ಲ ಕತೆ ಬಯಸಿದ ಪಾತ್ರಕ್ಕೆ ನಾಯಕ ಬದಲಾಗುತ್ತಿದ್ದ. ಅಂಥ ಕಾಲದಲ್ಲಿ ಬಂದ ಅಣ್ಣಾವ್ರು ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಿದ್ದರು. ಭಕ್ತ ಕನಕದಾಸ ಪಾತ್ರ ಮಾಡಿದ ಅದೇ ರಾಜ್‍ಕುಮಾರ್, ಜೇಮ್ಸ್ ಬಾಂಡ್ ಪಾತ್ರವನ್ನೂ ಮಾಡುತ್ತಿದ್ದರು. ಅಂದರೆ ಆಗ ಕಲಾವಿದನಿಗೆ ಪರಕಾಯ ಪ್ರವೇಶದ ಸಾಮಥ್ರ್ಯ ಇರಬೇಕಿತ್ತು. ಶುದ್ಧ ಭಾವ ಪ್ರತಿಸ್ಪಂದನ ಇರಬೇಕಿತ್ತು. ಧ್ವನಿಯ ಏರಿಳಿತ ಮತ್ತು ಶ್ರಮವಹಿಸಿ ಅದನ್ನು ದುಡಿಸಿಕೊಳ್ಳುವ ಸತತ ಪರಿಶ್ರಮ ಇರ ಬೇಕಿತ್ತು. ಇದೆಲ್ಲಾ ಇದ್ದವರು ಕಲಾವಿದ ರಾಗುತ್ತಿದ್ದರೇ ವಿನಃ ಸ್ಟಾರ್ ಆಗುತ್ತಿರಲಿಲ್ಲ. ರಾಜ್‍ಕುಮಾರ್ ಅಂದಿಗೂ ಎಂದೆಂದಿಗೂ ಕನ್ನಡ ಕಲಾ ಕಂಠೀರವನಾಗಿ ಕಲಾವಿದ ರಾಗಿಯೇ ಉಳಿಯಲು ಸಾಧ್ಯವಾದುದು ಈ ಕಾರಣದಿಂದ. ಅವರು ಯಾವತ್ತಿಗೂ ತಾನು ಏರಿದ ಎತ್ತರಕ್ಕೆ ತನ್ನ ಪ್ರತಿಭೆ ಯೊಂದೇ ಕಾರಣ ಅಂತ ಬೀಗಲಿಲ್ಲ. ತನ್ನನ್ನು ರೂಪಿಸಿದ ಅಭಿಮಾನಿಗಳಿಗೆ ಬಾಗಿದರು. ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಅವರ ಅಪ್ಪಾಜಿ ಯನ್ನು ನೆನೆದರು. ಬೆಳ್ಳಿ ತೆರೆಗೆ ಅವರನ್ನು ಪರಿಚಯಿಸಿದ ಎಚ್.ಎಲ್.ಎನ್. ಸಿಂಹ ಅವರನ್ನ ನೆನೆದರು. ಸುಬ್ಬಯ್ಯನಾಯ್ಡು ಅವರನ್ನ, ನಾಗೇಂದ್ರರಾಯರನ್ನ, ಲಕ್ಷ್ಮೀ ಬಾಯಿಯವರನ್ನ, ಕನ್ನಡದ ಅಭಿಮಾನಿ ಲೋಕವನ್ನ ನೆನೆದರು. ಹೀಗೆ ಕನ್ನಡದ ಜೀವ ಜಗತ್ತಿಗೆ ವಿನಯದ ಪಾಠ ಹೇಳಿ ಹೋದವರು ರಾಜ್‍ಕುಮಾರ್. ತನ್ನ ಅಭಿಮಾನಿಗಳನ್ನ ತನ್ನ ದೇವರು ಎಂದು ಕರೆದ ವಿನಯವಂತ ಭರತ ಖಂಡದಲ್ಲಿ ಬೇರೊಬ್ಬರಿಲ್ಲ. ಅದರಲ್ಲೂ ಅವರು ಆ ಎತ್ತರಕ್ಕೆ ಏರಿದ ದಿನಗಳಲ್ಲಿ ಅವರು ‘ಅಭಿಮಾನಿ ದೇವರುಗಳೆ’ ಎಂತಲೇ ತಮ್ಮ ಮಾತನ್ನು ಪ್ರಾರಂಭಿಸುತ್ತಿದ್ದುದರಲ್ಲಿ ಒಂದು ಆದರವಿತ್ತು. ನಯವಂತಿಕೆ ಇತ್ತು.

ನಾನಿನ್ನ ಮರೆಯಲಾರೆ ಚಿತ್ರಕ್ಕಾಗಿ ಬೈಕ್ ಓಡಿಸುವುದನ್ನು ಆ ವಯಸ್ಸಲ್ಲಿ ಕಲಿತ ರಾಜಣ್ಣ ಸನಾದಿ ಅಪ್ಪಣ್ಣ ಚಿತ್ರಕ್ಕಾಗಿ ಷಹನಾಯ್ ಕಲಿತರು. ಬಿಸ್ಮಿಲ್ಲಾ ಖಾನ್‍ರಿಂದ ಪ್ರಶಂಸಿಸ ಲ್ಪಟ್ಟರು. ಇಂಗ್ಲೀಷ್ ಸಂಭಾಷಣೆ ಮತ್ತು ಹಾಡಿಗಾಗಿ ಇಂಗ್ಲೀಷ್ ಕಲಿತರು. ಪ್ರೇಮದ ಕಾಣಿಕೆ ಚಿತ್ರಕ್ಕಾಗಿ ಸ್ಕೇಟಿಂಗ್ ಕಲಿತರು. ಕಲಿಕೆ ನಿರಂತರ ಎಂಬುದು ರಾಜ್‍ರವರ ತಿಳುವಳಿಕೆ. ಕಲಿಕೆಯ ಬಗೆಗೆ ಅವರದ್ದೇ ಆದ ಒಂದು ಮಾತಿದೆ ನೋಡಿ! ಯಾರು ಏನೇ ಸಾಧನೆ ಮಾಡುತ್ತಿರಲಿ ಸಾಯೋ ವರೆಗೆ ಅವನು ಕಲಿತಾನೇ ಇರಬೇಕು. ನಾಟಕ ರಂಗಕ್ಕೆ ಬಂದಾಗಿನಿಂದ ನಾನಿಲ್ಲಿ ಒಬ್ಬ ಸಾಮಾನ್ಯ ಅಭಿಮಾನಿಯಾಗಿ ಉಳಿದಿ ದ್ದೇನೆಯೇ ಹೊರತು ಕಲಾವಿದನ ಮಟ್ಟಕ್ಕೆ ನಾನು ಏರಲೇ ಇಲ್ಲ ಎನ್ನುತ್ತಿದ್ದರು. ತಾನು ನಟಸಾರ್ವಭೌಮ ಎಂಬ ಪಿತ್ಥ ಅವರ ನೆತ್ತಿಗೆ ಏರಲೇ ಇಲ್ಲ. ಹಾಗಾಗಿಯೇ ‘ರಾಜ್ ಕುಮಾರ್ ಎಂದರೆ ನಿರ್ದೇಶಕರ ನಟ’ -ಎಂಬಂತಾಗಿ ಹೋಗಲು ಅವರ ಈ ಸಂಕೀರ್ಣವಲ್ಲದ ವ್ಯಕ್ತಿತ್ವವೇ ಕಾರಣವಾಗಿತ್ತು.

ಅದೇ ಕಾಲಕ್ಕೆ ಪತ್ರಿಕೆಗಳಲ್ಲಿ ಕೆಲವರು ಇವರ ಬಗ್ಗೆ ಏನಾದರೂ ಕೆಟ್ಟದಾಗಿ ಬರೆದರೆ ಮನೆಯಲ್ಲಿ ಮಕ್ಕಳು ಆ ಪತ್ರಿಕೆಯವರನ್ನ ಬೈಯ್ಯುತ್ತಿದ್ದರಂತೆ. ಆದರೆ ಡಾ. ರಾಜ್ ಮಾತ್ರ ಮಕ್ಕಳನ್ನು ಸಮಾಧಾನ ಮಾಡಿ, ಹಾಗೆಲ್ಲಾ ಬೈಯ್ಯಬಾರದು ಕಂದ ನನ್ನನ್ನ ತೆಗಳಿ ಬರೆಯೋದರಿಂದ ಅವರಿಗೆ ಸಂತೋಷ ಸಿಕ್ಕರೆ ಆ ಸಂತೋಷಕ್ಕೆ ಕಾರಣ ನಾನೇ ತಾನೆ! ಅದರಿಂದ ಅವರಿಗೆ ಸಂತೋಷ ಸಿಗುವುದಾದರೆ ಬರೆಯಲಿ ಬಿಡು, ನೀವು ಮಾತ್ರ ಅವರನ್ನು ಬಯ್ಯಬಾರದು ಎನ್ನು ತ್ತಿದ್ದರಂತೆ. ಇಂಥಾ ಡಾ.ರಾಜ್‍ಕುಮಾರ್ ಬೇಡರ ಕಣ್ಣಪ್ಪನಿಂದ ಹಿಡಿದು ಶಬ್ಧವೇದಿಯ ವರೆಗೆ ನಿರ್ವಹಿಸಿದ ಪಾತ್ರ ಪ್ರಪಂಚ ಒಂದು ಆರೋಗ್ಯಕರ ಸಮಾಜ ಇರಬೇಕಾದ ರೀತಿ ನೀತಿಗೆ ನಕ್ಷೆ ಬರೆದಂತೆ ಸಾಕ್ಷಿಯಾಗಿದೆ. ಅಷ್ಟಕ್ಕೂ ಅವರು ಬರಿಯ ಚಿತ್ರಗಳ ಮೂಲಕ ಮಾತ್ರವೇ ಕನ್ನಡ ನಾಡಿನಲ್ಲಿ ಉಳಿಯ ಲಿಲ್ಲ. ಕನ್ನಡಿಗರಿಗೆ ತೊಂದರೆಯಾದಾಗ ಲೆಲ್ಲಾ ಬೀದಿಗಿಳಿದು ಹೋರಾಟ ಮಾಡಿ ದ್ದಾರೆ. ಕನ್ನಡಿಗರ ಬಹುದೊಡ್ಡ ಹೋರಾಟ ಗೋಕಾಕ್ ಚಳುವಳಿಯ ನೇತೃತ್ವ ವಹಿಸಿ ದವರು ರಾಜ್‍ಕುಮಾರ್. ಕನ್ನಡದ ಹೆಸರಿ ನಲ್ಲಿ ಕನ್ನಡ ಕುಲ ಒಂದಾಗಿ ಪ್ರತಿಭಟಿ ಸುವ ಶಕ್ತಿ ತುಂಬಿದ್ದು ಆವಾಗಲೆ. ನಾನಾಗ ಹೈಸ್ಕೂಲು ವಿದ್ಯಾರ್ಥಿಯಾಗಿದ್ದೆ. ಬೇಸಿಗೆ ರಜೆಗೆ ಅಂತ ನಮ್ಮ ದೊಡ್ಡಮ್ಮನ ಮನೆಗೆ ಬೆಂಗಳೂರಿಗೆ ಹೋಗಿದ್ದೆ, ಮೈಸೂರ್ ಬ್ಯಾಂಕ್ ಸರ್ಕಲ್ಲಿನಿಂದ ಗೋಪಾಲಗೌಡ ವೃತ್ತದವರೆಗೆ ಮೆರವಣಿಗೆ ಸಾಗುತ್ತಿತ್ತು. ರಾಜ್‍ಕುಮಾರ್ ಅವರನ್ನು ಹತ್ತಿರದಿಂದ ನೋಡುವ ಆಸೆಯಿಂದ ಕೆಂಪೇಗೌಡ ಚಿತ್ರಮಂದಿರದ ಮುಂದೆ ಜನರ ನೂಕು ನುಗ್ಗಲಿನಲ್ಲಿ ನಾನು ಹೇಗೋ ನುಸುಳಿ ಕೊಂಡು ನಿಂತಿದ್ದೆ, ತೆರೆದ ವಾಹನದಲ್ಲಿ ಅಣ್ಣಾವ್ರು ಮತ್ತು ಇತರೆ ಕಲಾವಿದರು ವಾಹನದಲ್ಲಿ ಕೈ ಬೀಸುತ್ತಿದ್ದರು. ವಾಹನ ಕೆಂಪೇಗೌಡ ಥಿಯೇಟರಿನ ಮುಂದೆ ಬರುತ್ತಿತ್ತು. ಜನರ ಹೋರಾಟ, ಹರ್ಷೋ ದ್ಘಾರ, ಉತ್ಸಾಹ ಜೋರಾಗುತ್ತಿತ್ತು. ಪೊಲೀಸರು ಜನರನ್ನು ಹತೋಟಿಗೆ ತರಲು ಲಾಠಿ ಬೀಸಿದರು. ರಾಜ್‍ಕುಮಾರ್ ರನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದ ನನಗೆ ಪೊಲೀಸಿನವನೊಬ್ಬ ಲಾಠಿ ಯಲ್ಲಿ ಸರಿಯಾಗಿ ಒಂದು ಏಟು ಕೊಟ್ಟ. ಹಾಗೆ ಏಟು ಬಿದ್ದಾಗಲೇ ಗೊತ್ತಾಗಿದ್ದು, ಕನ್ನಡದ ಕೆಲಸ ಎಂದರೆ ಬರೀ ಎವೆ ಯಿಕ್ಕದೆ ರಾಜಣ್ಣನನ್ನು ನೋಡುವುದಲ್ಲ! ಇದು ಕನ್ನಡದ ಚಳುವಳಿ ಲಾಠಿ ಏಟು ನಮಗೆ ಮೊದಲ ಬಳುವಳಿ ಅಂತ. ಏನೂ ಗೊತ್ತಿಲ್ಲದ ವಯಸ್ಸಲ್ಲಿ ಕನ್ನಡ ಚಳುವಳಿಯೆಂದರೆ ಹೇಗಿರುತ್ತೆ ಎಂತ ಕಣ್ತುಂಬಿಕೊಳ್ಳಲು, ಡಾ.ರಾಜ್ ನೇತೃತ್ವದ ಗೋಕಾಕ್ ಚಳುವಳಿ ನನ್ನ ನೆನಪಿನಲ್ಲಿ ಹಾಗೇಯೇ ಉಳಿದುಬಿಟ್ಟಿತು.

ಬೇಡರ ಕಣ್ಣಪ್ಪದಿಂದ ರಾಜಕುಮಾರ ನಾಗಿ 208 ಚಿತ್ರಗಳಲ್ಲಿ ಅಭಿನಯಿಸಿ ಕನ್ನಡದ ಮಾನ ಕನ್ನಡದ ಪ್ರಾಣದಂತೆ ಬದುಕಿದ ಡಾ. ರಾಜ್‍ಕುಮಾರ್, ಅಭಿನಯ ಎಂದರೆ ಏನು? ಒಬ್ಬ ನಟ ಹೇಗೆ ನಡೆದುಕೊಳ್ಳಬೇಕು ಸರಳ ಸಜ್ಜನಿಕೆಯ ಲೋಕೋಪಕಾರಗಳು ಸಾಮಾಜಿಕ ಅಂತಸ್ತಿನ ಎಲ್ಲೆ ಮೀರಿ ಹೇಗೆ ಠಳಾಯಿಸುತ್ತವೆ ಎಂಬುದನ್ನು ಮನುಷ್ಯ ಲೋಕಕ್ಕೆ ತೋರಿಸಿಕೊಡಲಿ ಕ್ಕೆಂದೇ ತಾರಾಮಂಡಲದಿಂದ ಭೂಮಿಗೆ ಬಂದು ಪವರ್ ಪಾಯಿಂಟ್ ಪ್ರೆಸೆಂಟೇಷನ್ ತೋರಿಸಿ ತನ್ನ ಕೆಲಸ ಮುಗಿಸಿ ಎದ್ದು ಹೋದ ಧೃವತಾರೆ ಯಂತೆ ಕಾಣಿಸುವ ಕರುನಾಡಿನ ಹೆಮ್ಮೆ. ರಾಜ್‍ಕುಮಾರ್ ಅವರ ಕಾಲದಲ್ಲಿಯೇ ನಟರಾಗಿದ್ದ ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಮುಂತಾದವ ರೆಲ್ಲ ರಾಜಕೀಯದ ಪ್ರಭಾವಕ್ಕೆ ಒಳಗಾಗಿ ಮುಖ್ಯಮಂತ್ರಿಗಳಾದರು. ಆದರೆ ರಾಜ್ ಕುಮಾರ್ ಮಾತ್ರ ಅಂಥಾ ಯಾವ ಆಕರ್ಷಣೆಗೂ ಒಳಗಾಗಲಿಲ್ಲ. ಎಲ್ಲಾ ಕನ್ನಡಿಗರು ಯಾವುದೇ ಗೊಡವೆಗಳಿಲ್ಲದೆ ರಾಜ್ ಅವರನ್ನು ಅಭಿಮಾನಿಸಲು ಇದೂ ಕೂಡ ಒಂದು ಕಾರಣ. ತನ್ನ ಅಭಿನಯಕ್ಕೆ ಅಭಿಮಾನಿಗಳು ತೋರಿಸಿದ ಸಿನಿಮಾ ಜನಪ್ರಿಯತೆಯನ್ನ ಅವರು ಯಾವತ್ತಿಗೂ ರಾಜಕಾರಣ ಮತ್ತಿತರ ಆಮಿಷಗಳಿಗೆ ಬಳಸಿಕೊಳ್ಳಲಿಲ್ಲ. ಇಷ್ಟಾ ಗಿಯೂ ನಾಲ್ಕನೇ ತರಗತಿಯನ್ನೂ ಮುಗಿಸದ ರಾಜ್‍ಕುಮಾರ್ ಅಪಭ್ರಂಶ ವಿಲ್ಲದೆ ಕನ್ನಡವನ್ನು ಉಚ್ಚಾರಣೆ ಮಾಡು ತ್ತಿದ್ದ ಕನ್ನಡದ ಶುದ್ಧತೆಯನ್ನು ಗಮನಿಸಿ ದರೆ ಕರ್ನಾಟಕದ ಜನತೆಗೆ ಬೆಳ್ಳಿತೆರೆಯ ಮೇಲೆ ಕನ್ನಡದ ಭಾಷಾ ಪ್ರಯೋಗ ಮತ್ತು ಪದ ಮಾಧುರ್ಯದ ಬಳಕೆ ತೋರಿಸಿಕೊಟ್ಟ ಕನ್ನಡದ ಮೇಷ್ಟ್ರು ಎಂದರೆ ಅಚ್ಚರಿಯೇನಲ್ಲ. ಕನ್ನಡದ ಯಾವೊಬ್ಬ ನಟನಿಗೂ ಸಿದ್ಧಿಸದ ಆ ಅಭಿನಯ, ಅದಕ್ಕೆ ತಕ್ಕ ಧ್ವನಿ ಮಾಧುರ್ಯ, ತೇಜಸ್ಸಿನ ಮುಖಲಕ್ಷಣ, ಹಾವಭಾವ ಎತ್ತರ ಮೈಕಟ್ಟುಗಳು ಮೇಳವಿಸಿದ ರಾಜ್ ಕುಮಾರ್ ವಿನಯವೆಂಬ ವಿದ್ಯೆಯ ವರ ಗಳನ್ನು ಪಡೆದ ವರನಟ. ಇಂದು ಅಂಥಾ ಮೇರುನಟ ಹುಟ್ಟಿದ ದಿನ. ಈ ದಿನವನ್ನ ಕರ್ನಾಟಕದ ರಾಜೋತ್ಸವ ಅಥವಾ ರಾಜ್ ನೆನಪಿನೋತ್ಸವ ಎಂದು ಕರೆದರೆ ಚೆನ್ನ. ಅದಕ್ಕಾಗಿ ನಮಗೆ ಇಷ್ಟ ವಾಗುವ ಒಂದು ಹಾಡು ಕೇಳೋಣ ನಾನೇೀೀೀ ರಾಜಕುಮಾರ ಕನ್ನಡ ತಾಯಿಯ ಪ್ರೇಮದ ಕುವರ ಅನೀತಿ ಅಳಿಸಿ ನ್ಯಾಯವ ಉಳಿಸಿ ಶಾಂತಿಯ ನೆಲೆಸಲು ಬಂದ ಕಿಶೋರ ರಾಜ್ ಕುಮಾರ್! ಏನಂತೀರಿ.

Translate »