ಸಿನಿಮಾಗಳಲ್ಲಿ ಹೆಸರಾಂತ ಕವಿಗಳ ಪದ್ಯಗಳನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ
ಮೈಸೂರು

ಸಿನಿಮಾಗಳಲ್ಲಿ ಹೆಸರಾಂತ ಕವಿಗಳ ಪದ್ಯಗಳನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ

July 10, 2018

ಮೈಸೂರು:  ಇಂದು ಹೆಸರಾಂತ ಕವಿಗಳ ಪದ್ಯಗಳನ್ನು ಸಿನಿಮಾಗಳಲ್ಲಿ ಅರ್ಥಹೀನವಾಗಿ ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ವಿಜಯ ವಿಠಲ ಕಾಲೇಜು ಸಭಾಂಗಣದಲ್ಲಿ ಸೋಮವಾರ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದ್ದ ಕವಿ ಜಿ.ಪಿ.ರಾಜರತ್ನಂ ಕವಿ ಕಾವ್ಯ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. ಜಿ.ಪಿ.ರಾಜರತ್ನಂ ಅವರು ತೀರಿಕೊಂಡ ತಮ್ಮ ಪತ್ನಿಯನ್ನು ಕುರಿತು `ನೀ ನಂಗೆ ಬೆಳಕಾಗಿದ್ದೆ ನಂಜಿ…’ ಎಂಬ ಪದ್ಯ ಮತ್ತು ಡಾ.ದ.ರಾ.ಬೇಂದ್ರೆಯವರು ತಮ್ಮ ತೊಡೆಯ ಮೇಲೆ ಪುತ್ರನ ಶವವನ್ನಿಟ್ಟುಕೊಂಡು `ನೀ ಹೀಂಗ ನೋಡಬ್ಯಾಡ ನನ್ನ.. ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ..’ ಎಂಬ ಪದ್ಯ ಬರೆದಿದ್ದರು. ಆದರೆ ಈ ಶೋಕಭರಿತ ಪದ್ಯಗಳನ್ನು ಸಿನಿಮಾಗಳಲ್ಲಿ ಪ್ರೇಮ ಗೀತೆಗಳಾಗಿ ಬಳಸಿಕೊಳ್ಳಲಾಗಿದೆ ಎಂದು ಆಕ್ಷೇಪಿಸಿದರು.

ಕವಿ ಡಾ.ಜಿ.ಪಿ.ರಾಜರತ್ನಂ ರಂಜಿಸಿದ ಕವಿ, ಜನಸಾಮಾನ್ಯರ ಕವಿ, ಬಾವುಕ ಕವಿ, ಅವರ ಬಗ್ಗೆ ಎಷ್ಟು ಕೇಳಿದರೂ ಬೇಸರವಾಗುವುದಿಲ್ಲ. ಕವಿ ಕಾವ್ಯ ನಮನ ಕಾರ್ಯಕ್ರಮ ಇಡೀ ಮೈಸೂರಿನಲ್ಲಿ ನಡೆಯುತ್ತಿದೆ ಎಂದರೆ ಅದು ವಿಜಯ ವಿಠಲ ಕಾಲೇಜಿನಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಿ.ರಾಜರತ್ನಂ ಅವರಿಗೆ ಕವಿ ಕಾವ್ಯ ನಮನ ಸಲ್ಲಿಸಿದ ಮೈಸೂರು ಮಹಾರಾಣಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿ, ಹೆಂಡ, ಹೆಂಡ್ತಿ, ಕನ್ನಡ ಪದಗೋಳ್ ಅಂದ್ರೆ ಪ್ರಾಣ ಎಂದವರು ಜಿ.ಪಿ.ರಾಜರತ್ನಂ, ರತ್ನನಿಗೆ ಮಾತ್ರ ಕನ್ನಡದ ಬಗ್ಗೆ ಪ್ರಾಣ ಇದ್ದರೆ ಸಾಲದು, ಎಲ್ಲರಿಗೂ ಕನ್ನಡ ನಾಡು ನುಡಿಯ ಬಗ್ಗೆ ಪ್ರಾಣ ಇರಬೇಕು ಎಂದರು.

ಕನ್ನಡದ ಸ್ಥಿತಿ ಬಗ್ಗೆ ಆತಂಕ: ನಾವಿಂದು 28,000 ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಬಂದಿದ್ದೇವೆ. 8000 ಶಾಲೆಗಳಲ್ಲಿ ಕನ್ನಡ ಶಾಲೆಗಳನ್ನು ವಿಲೀನಗೊಳಿಸುವ ಬಗ್ಗೆ ಚರ್ಚೆ ನಡೆದಿದೆ. ಇದು ಕನ್ನಡದ ಸ್ಥಿತಿಯ ಬಗ್ಗೆ ಆತಂಕ ಉಂಟು ಮಾಡಿದೆ. – ಡಾ.ಬಿ.ವಿ.ವಸಂತಕುಮಾರ್, ಪ್ರಾಧ್ಯಾಪಕ

ಜನಸಾಮಾನ್ಯರ ಭಾಷೆಯನ್ನೇ ಬಳಸಿರುವ ರಾಜರತ್ನಂ ಸೇತುವೆಯ ಕವಿ ಎನಿಸಿದ್ದರು. ಜಾತಿ, ಧರ್ಮಗಳ ನಡುವೆ ಸೇತುವೆ ಕಟ್ಟಿದ ಕವಿ. ನೋವನ್ನು ಮರೆಸುವ, ಸಂತಸವನ್ನು ತರುವ ಕವಿತೆಗಳನ್ನು ರಾಜರತ್ನಂ ತೋರಿಸಿದ್ದಾರೆ ಎಂದರು.
ಇಂದು ಎಲ್ಲವೂ ಇದೆ. ಆದರೆ ನಗು ಮಾತ್ರ ಇಲ್ಲದಂತಾಗಿದೆ ಎಂದ ಅವರು, ನಾವು ಕವಿ ಮತ್ತು ಕಾವ್ಯಗಳನ್ನು ಕಳೆದುಕೊಂಡಿರುವುದರಿಂದ ಹೀಗಾಗಿದೆ. ಒಬ್ಬೊಬ್ಬ ಕವಿಗೂ ಒಂದೊಂದು ಆಕರ್ಷಣೆ ಇರುತ್ತದೆ. ಜಿ.ಪಿ.ರಾಜರತ್ನ ಸೇತುವೆಯ ಕವಿ ಎನಿಸಿದ್ದರು ಎಂದು ತಿಳಿಸಿದರು.

ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಕವಿ ಕಾವ್ಯ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.. ವಿಜಯ ವಿಠಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹೆಚ್.ಸತ್ಯಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.

Translate »