ಕಾಫಿ ಲೋಟದ ಹುಡುಗ ಐ ಲವ್ ಯು
ಅಂಕಣಗಳು, ದೀಪ ಸಾಲು

ಕಾಫಿ ಲೋಟದ ಹುಡುಗ ಐ ಲವ್ ಯು

June 12, 2018

ಬದುಕಿನ ತಿರುವಿನಲ್ಲಿ ಏನೆಲ್ಲಾ ನೆನಪುಗಳು ಅವಿತು ಕುಳಿತು ಮತ್ತೆ ಮತ್ತೆ ಮುತ್ತಿಕೊಳ್ಳುತ್ತವೆ ಎಂದರೆ ಕೆಲವೊಂದು ನೆನಪುಗಳು ನಮ್ಮನ್ನು ಎಚ್ಚರಿಸಿ ಪಾಠ ಹೇಳಿ ಹೋಗಿರುತ್ತವೆ. ಮತ್ತಷ್ಟು ನೆನಪುಗಳು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತವೆ. ಇನ್ನೊಂದಿಷ್ಟು ನೆನಪುಗಳು ನಮ್ಮನ್ನು ಹೊಟ್ಟೆ ಹುಣ್ಣಾ ಗಿಸುವಂತೆ ನಗಿಸಿ ತಳದಲ್ಲೆಲ್ಲೋ ಒಂದು ಮೆಸೇಜು ಕೊಟ್ಟು ಹೋಗಿರುತ್ತವೆ. ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ನಗೆ ದೀಪದ ಬೆಳಕು ಹೀಗೆ ಹಾದು ಹೋಗಿರುತ್ತದೆ.

ಸರಳತೆ, ಸಜ್ಜನಿಕೆ, ಪ್ರಮಾಣಿಕತೆ, ದಕ್ಷತೆ, ಪ್ರೀತಿ, ಅಭಿಮಾನ ಮುಂತಾದ ಸಾಮಾಜಿಕ ಸೌಂದರ್ಯಗಳನ್ನು ನೆನಪಿಸುವ ಜೀವನ ಚರಿತ್ರೆಯನ್ನು ದಾಖಲೆಗಳಿಂದ ಹೆಕ್ಕಿ ತೆಗೆದರೆ, ಸಾವಿರ ಸಾವಿರ ಸಂಖ್ಯೆಯಲ್ಲಿ ಒದಗಬಹುದಾದ ಅನುಭವ ಗಮ್ಯ ಕುತೂಹಲಗಳು ನಮ್ಮನ್ನು ಕೆರಳಿಸುತ್ತವೆ. ಸಾಧಿಸುವ ಛಲದಲ್ಲಿ ಓಡುತ್ತಿರುವವರಿಗೆ ಸಾಧÀಕರು ಕ್ರಮಿಸಿದ ದಾರಿ ಮುಖ್ಯವಾದರೆ, ಅಸಂಖ್ಯಾತ ಸಾಮಾನ್ಯ ನಾಗರಿಕರಿಗೆ ಅವರು ಏನೇನು ಅಲ್ಲದ ಕಾಲದಲ್ಲಿ ಪಲ್ಲವಿಸಿದ ಅವರ ಜೀವನ ವಿಧಾನ ಗಳ ತಿರುವುಗಳಲ್ಲಿರುವ ಕೌತುಕಗಳು ಆಕರ್ಷಿಸುತ್ತವೆ. ಹಾಗಂತ ಪ್ರತಿ ಯೊಂದನ್ನೂ ದೊಡ್ಡವರ ಮಾದರಿ ಗಳಿಂದಲೇ ಕಲಿಯಬೇಕೆಂದೇನು ಇಲ್ಲ. ಚಿಕ್ಕವರ ಬದುಕುಗಳೂ ಕೂಡ ನಮಗೆ ಕುತೂಹಲವೇ. ಹಾಗೆ ನಾನು ಕಂಡ, ಹುಡುಗಾಟದ ಹುಡುಗನೊಬ್ಬನ ಆಕಸ್ಮಿಕ ಘಟನೆ ನನ್ನನ್ನು ಮೂಕ ವಿಸ್ಮಿತನನ್ನಾಗಿ ಮಾಡಿತ್ತು. ಬಡವರ ಮನೆ ಊಟ ಚಂದ, ಬಲ್ಲಿದರ ಮನೆ ಮಾತು ಚಂದ, ಅನ್ನೋ ಗಾದೆ ಮಾತಿಗೆ ಅನ್ವರ್ಥವಾದಂತೆ ಒಂದು ಪ್ರಸಂಗ ನಡೆಯಿತು.

ಕೆಲ ವರ್ಷಗಳ ಹಿಂದೆ ಹೋಬಳಿ ಯೊಂದರ ಕಾಲೇಜಿನಲ್ಲಿ ಉಪನ್ಯಾಸಕ ನಾಗಿ ಕೆಲಸ ಮಾಡುತ್ತಿದ್ದೆ. ಅಲ್ಲಿದ್ದ ಹುಡುಗರ ಪೈಕಿ ಮಹೇಶ ಅಂತ ಒಬ್ಬ ಹುಡುಗ ಪಿ.ಯು.ಸಿ. ಓದುತ್ತಿದ್ದ. ಹುಡುಗಾಟದ ಹುಡುಗನ ಥರ ಕಾಣು ತ್ತಿದ್ದ. ಹೇಳಿಕೊಳ್ಳುವಷ್ಟು ಬುದ್ದಿ ವಂತನಲ್ಲ. ನೋಡೋಕೆ ತುಂಬಾ ಕಪ್ಪಗಿದ್ದ, ಸಾಧಾರಣ ಮೈಕಟ್ಟು. ಹತ್ತಾರು ಹುಡುಗರ ನಡುವೆ ಯಾವುದಾದರು ಒಂದು ಈವೆಂಟಿನಲ್ಲಿ ತಾನು ಮಿಂಚ ಬೇಕು, ಕಾಲೇಜಿನಲ್ಲಿ ಎಲ್ಲರ ಗಮನ ಸೆಳೆಯಬೇಕು, ಕೇಂದ್ರ ವ್ಯಕ್ತಿಯಾಗ ಬೇಕು ಅಂತ ಪ್ರಯತ್ನಿಸಿ ಪ್ರಯತ್ನಿಸಿ ಸೋಲುತ್ತಿದ್ದ. ಹಾಗೆ ಮಾಡುವಾಗ ಅವನ ಆಂಗಿಕ ಅಭಿನಯಗಳು ಬಫೂನ್ ಥರ ಕಾಣಿಸುತ್ತಿದ್ದವು. ಹುಡುಗ, ಹುಡುಗಿಯರೆಲ್ಲ ಆತನನ್ನು ನೋಡಿ ಘೊಳ್ ಎಂದು ನಗುತ್ತಿದ್ದರು. ಅಲ್ಲಿ ಆತನ ಉತ್ಸಾಹಕ್ಕೆ ತಣ್ಣೀರೆರಚುವ ಮಂದಿ ಕೆಲವರಿದ್ದರು, ಇಂಥವರ ನಡುವೆ ಒಂದಿಷ್ಟು ಲವಲವಿಕೆಯ ಮಾತುಗಳಿಂದ ಅವನನ್ನು ನಾನು ಮತ್ತೆ, ಮತ್ತೆ ಕ್ರಿಯಾಶೀಲನನ್ನಾಗಿ ಮಾಡುತ್ತಿದ್ದೆ. ನನಗೆ ಅದು ಇಷ್ಟವಾಗು ತ್ತಿತ್ತು. ಅದಕ್ಕೆ ಪ್ರತಿಯಾಗಿ ಆತ ನನ್ನ ಬಗ್ಗೆ ವಿಪರೀತ ವ್ಯಾಮೋಹ ಬೆಳೆಸಿ ಕೊಂಡ. ನಮ್ಮ ಮನೆಗೆ ಒಮ್ಮೆ ಬನ್ನೀ ಸಾರ್ ಎಂದು ಪದೇ ಪದೆ ಗೋಗರೆ ಯುತ್ತಿದ್ದ. ಬರುತ್ತೇನೆಂದು ಹೇಳಿ ನಾನು ಸುಮ್ಮನಾಗಿದ್ದೆ. ಅವನು ಕರೆಯು ವುದು ಬಿಡಲಿಲ್ಲ. ನಾನು ಹೋಗಿ ಬರುವ ಮನಸ್ಸು ಮಾಡಲಿಲ್ಲ. ಹೀಗೆ ಒಂದೂ ವರೆ ವರ್ಷ ತುಂಬಿಹೋಯಿತು. ಒಮ್ಮೆ ಯಾವುದೋ ಕೆಲಸದ ನಿಮಿತ್ತ ನನ್ನ ಗೆಳೆಯನ ಸ್ಕೂಟರಿನಲ್ಲಿ ಅಲ್ಲೇ ಇದ್ದ ಪಕ್ಕದ ಹಳ್ಳಿಯೊಂದಕ್ಕೆ ಹೋಗಿ ಬರು ತ್ತಿದ್ದೆ. ಆ ಊರಿನಲ್ಲಿ ದೊಡ್ಡದೊಂದು ಕೆರೆಯಿತ್ತು. ಆ ಕೆರೆಯ ಏರಿಯ ಕೆಳಗೆ ನಾನು ಮತ್ತು ನನ್ನ ಗೆಳೆಯ ಸ್ಕೂಟರಿ ನಲ್ಲಿ ಹೋಗುತ್ತಿದ್ದರೆ ಬೈಕ್ ಸವಾರ ನೊಬ್ಬ ಹಿಂದಿನಿಂದ ನಮ್ಮನ್ನು ಛೇಸ್ ಮಾಡಿಕೊಂಡು ಬಂದ. ಬಂದವನೇ ನಮ್ಮನ್ನು ಕೈಸನ್ನೆ ಮಾಡಿ ಗಾಡಿ ನಿಲ್ಲಿಸಿದ. ಗಾಡಿ ನಿಲ್ಲಿಸಿ, ಸಾರ್ ಅವನ್ಯಾರೋ ಹುಡುಗ ಸುಮಾರು ಒಂದು ಕಿಲೋ ಮೀಟರ್ ನಿಂದ ನಿಮ್ಮನ್ನು ಕೂಗಿಕೊಂಡು ಓಡಿ ಕೊಂಡು ಬರುತ್ತಿದ್ದಾನೆ. ಪಾಪ! ನಿಮ್ಮ ಕಡೆಯ ಹುಡುಗ ಇರಬೇಕು ನೋಡಿ ಸರ್ ಎಂದು ಹೇಳಿ ಹೊರಟು ಹೋದ. ಹಿಂತಿರುಗಿ ನೋಡಿದರೆ ಹಿಂದೆ ಮುಂದೆ ಆ ತರಹದವರು ಯಾರೂ ಕಾಣಲಿಲ್ಲ. ಪಕ್ಕದಲ್ಲೇ ಇರುವ ಕೆರೆ ಏರಿಯ ದಂಡೆಯ ಮೇಲೆ ಯಾರೋ ಓಡಿ ಬರುತ್ತಿದ್ದುದು ಕಾಣುತ್ತಿತ್ತು. ಹಾಗೆ ಓಡಿ ಬರುತ್ತಿರುವ ಆ ಆಸಾಮಿ ಬರುವವ ರೆಗೂ ನಾವು ಕಾದು ನಿಂತೆವು. ಓಡಿ ಓಡಿ ಸುಸ್ತಾಗಿ ಹೋಗಿದ್ದ ಆ ಆಸಾಮಿ. ನಮ್ಮ ಹತ್ತಿರಕ್ಕೆ ಬಂದ, ನಮಸ್ಕಾರ ಸಾರ್ ಎಂದ, ಏರುಬ್ಬಸದ ನಡುವೆ ಅವನು ನಗುತ್ತಿದ್ದ. ನಕ್ಕಾಗ ಅವನ ಮುಖದಲ್ಲಿ ಅವನ ಹಲ್ಲೊಂದು ಕಾಣು ತ್ತಿತ್ತೇ ವಿನಃ ಆತನ ಮುಖದ ಚಹರೆ ಸಂಪೂರ್ಣ ಧೂಳಿನಿಂದ ತುಂಬಿ ಹೋಗಿತ್ತು. ಕೆರೆ ಏರಿಯ ಪಕ್ಕದಲ್ಲಿ ಯಾರದ್ದೋ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವನಿಗೆ ಸ್ಕೂಟರ್‍ನಲ್ಲಿ ನಾನು ಹೋಗುತ್ತಿರುವುದು ಕಂಡಿದೆ. ಸರಿ, ಹೇಗಾದರೂ ಮಾಡಿ ನಮ್ಮ ಸ್ಕೂಟ ರನ್ನು ನಿಲ್ಲಿಸಲೇಬೇಕೆಂದು ಓಡಿದ್ದಾನೆ. ಓಡಿ. ಓಡಿ, ಓಡಿ ಸುಸ್ತಾಗಿದ್ದಾನೆ, ಮಣ್ಣಿ ನಿಂದ ಕೂಡಿದ ರಸ್ತೆಯಾದ್ದರಿಂದ ಬೇಸಿಗೆಯ ಧೂಳು, ಇಡೀ ಮೈ ಮುಖ ಕೈ ಕಾಲುಗಳಿಗೆಲ್ಲಾ ಮೆತ್ತಿಕೊಂಡಿದೆ. ಕಣ್ಣು, ಹಲ್ಲು , ಬಿಟ್ಟರೆ ಮುಖವೆಲ್ಲಾ ಕೆಂಪನೆಯ ಧೂಳು, ಯಾರಪ್ಪ ನೀನು ಎಂದು ಕೇಳಿದೆ. ಅವನು ತನ್ನ ಮುಖ ವನ್ನು ತನ್ನ ಎರಡೂ ಕೈಗಳಿಂದ ಉಜ್ಜಿ ಕೊಂಡ, ಓಹ್! ಆಗ ಗೊತ್ತಾಯ್ತು ನೋಡಿ ಆತ ಕಾಲೇಜಿನಲ್ಲಿ ಬಫೂನ್ ಥರ ಎಲ್ಲರನ್ನೂ ನಗಿಸುತ್ತಿದ್ದ ನನ್ನ ಪ್ರೀತಿಪಾತ್ರ ವಿದ್ಯಾರ್ಥಿ. ಅವನು ಆ ಅವತಾರದಿಂದ ರಸ್ತೆಯಲ್ಲೂ ನಮ್ಮನ್ನು ನಗಿಸಿದ್ದ. ಆದರೆ ಆ ನಗುವಿನ ಆಳದಲ್ಲಿ ಆ ಹುಡುಗನ ಎದೆಯಲ್ಲಿದ್ದ ಅಮಾಯಕ ಪ್ರೀತಿಯೊಂದು ನನಗೆ ಮಾತ್ರ ಕಾಣುತ್ತಿತ್ತು.

ಆ ಹುಡುಗ ಬಡ ಬಡ ಅಂತ ಮಾತಾಡುತ್ತಿದ್ದ. ನಮ್ಮನೆ ಇಲ್ಲೇ ಇದೆ ಸರ್, ಬೇರೆಯವರ ಹೊಲದಲ್ಲಿ ಜೋಳ ಕುಯ್ತಿದ್ದೆ. ನಿಮ್ಮನ್ನು ನೋಡಿ ಕೂಗಿದೆ, ನಿಮಗೆ ಕೇಳಿಸಲಿಲ್ಲ ಅದಕ್ಕೆ ಓಡಿ ಬಂದೇ ಸಾರ್. ನಿಮ್ಮ ಹಿಂದೆ ಬಂದ ಸ್ಕೂಟರಿನವರು ನಿಮ್ಮನ್ನು ನಿಲ್ಲಿಸಿ ಕೊಟ್ಟರು ಎಂದ. ಎಂದಿನ ತನ್ನ ಅಮಾ ಯಕ ನಗೆ ನಕ್ಕು, ಜೀವಸಲೆಯಂತೆ ನಿಂತಿದ್ದ. ಸರಿ! ಅವನ ಬಹು ದಿನಗಳ ಬಯಕೆ ಅವನ ಮನೆಗೆ ಹೋಗಿ ಬಂದು ಬಿಡೋಣ ಅಂತ ತೀರ್ಮಾನಿಸಿ ನನ್ನ ಗೆಳೆಯನನ್ನು ಒಪ್ಪಿಸಿ ಅವರ ಮನೆಗೆ ಹೋದೆ. ನನ್ನ ಗೆಳೆಯ ಸ್ವಲ್ಪ ಮುಖ ಕಿವುಚಿಕೊಂಡೇ ಬಂದ. ಆತ ಸ್ವಲ್ಪ ಪ್ರಾಕ್ಟಿಕಲ್ಲು. ಅಲ್ಲೇ ಹತ್ತಿರದಲ್ಲೇ ಇದ್ದ ತನ್ನ ಮನೆಗೆ ಆ ಹುಡುಗ ಉತ್ಸಾಹ ದಿಂದಲೇ ಕರೆದುಕೊಂಡು ಹೋದ.

ಇದೇ ಸಾರ್ ನಮ್ಮ ಮನೆ ಒಳಗೆ ಬನ್ನಿ ಎಂದು ಕರೆದ. ಅದು ಮನೆಯಲ್ಲ, ಪುಟ್ಟ ಗುಡಿಸಲು. ಇಪ್ಪತ್ತು ತೆಂಗಿನ ಗರಿಗಳನ್ನು ತ್ರಿಭುಜಾಕಾರದಲ್ಲಿ ಜೋಡಿಸಿರುವುದೇ ಅವನ ಮನೆ. ತೆಂಗಿನ ಗರಿಯಲ್ಲಿಯೇ ಮಾಡಿದ ನೆರಿಕೆಯ ಬಾಗಿಲು ತೆರೆದು ಒಳ ಕರೆದ, ನನ್ನ ಗೆಳೆಯ ನಾನು ಇಲ್ಲೇ ಇರ್ತೀನಿ ನೀನು ಹೋಗಿ ಬಾ ಪರ ವಾಗಿಲ್ಲ ಎಂದ. ಆದರೂ ಒತ್ತಾಯಿಸಿ ಬಾ ಅಂತ ಅವನನ್ನೂ ಕರೆದುಕೊಂಡು ತಲೆ ಬಗ್ಗಿಸಿ ಒಳನಡೆದೆ. ಪಾಪ ಹುಡುಗ, ಮೇಷ್ಟ್ರು ಮನೆಗೆ ಬಂದಿದ್ದಾರೆ ಅಂತ ಬಹಳ ಉತ್ಸಾಹದಲ್ಲಿ ಓಡಾಡುತ್ತಿದ್ದ. ಅವನ ತಾಯಿ ಮನೆಯಲ್ಲಿರಲಿಲ್ಲ. ಕೆಲಸಕ್ಕೆ ಹೋಗಿದ್ದರು. ಹುಡುಗ ನಮಗೆ ಕುಳಿತು ಕೊಳ್ಳಲು ಹೇಳಿ ತಾನೇ ಕಾಫಿ ಮಾಡು ತ್ತೇನೆ ಸಾರ್ ಎಂದ. ಬೇಡಪ್ಪ ಎಂದೆ. ಹುಡುಗ ಬಿಡಲೇ ಇಲ್ಲ. ಅವನ ಪ್ರೀತಿ ಮತ್ತು ಉತ್ಸಾಹದ ಮುಂದೆ ನಮ್ಮ ದೇನು ನಡೆಯುವಂತಿರಲಿಲ್ಲ. ಆಗಲಿ ಎಂದೆ, ನಾವಿಬ್ಬರೂ ಕುಳಿತುಕೊಳ್ಳಲು ಅಲ್ಲೇ ಮೂಲೆಯಲ್ಲಿ ನಿಲ್ಲಿಸಿದ್ದ ಈಚಲು ಗರಿಯ ಚಾಪೆಯೊಂದನ್ನು ಹೊರತೆಗೆದ. ಅದು ರೋಲ್ ಮಾಡಿಸುತ್ತಿದ್ದರಿಂದ ಸಿನಿಮಾವೊಂದರಲ್ಲಿ ಸಾಧುಕೋಕಿಲ ಚಾಪೆ ಹಾಸಿಕೊಳ್ಳಲು ಹೋದರೆ, ಈ ತುದಿಯಿಂದ ಹಾಸಿದರೆ ಆ ತುದಿ ಯಿಂದಲೂ ಅದು ಸುತ್ತಿಕೊಂಡು ಬಿಡುವ ಹಾಸ್ಯ ದೃಶ್ಯ ನೆನಪಾಗುವಂತಿತ್ತು.

ಸರಿ, ನಾನು ಮತ್ತು ಆ ಹುಡುಗ ಎರಡೂ ತುದಿಗಳ ಚಾಪೆ ಹಿಡಿದುಕೊಂಡು ನನ್ನ ಸ್ನೇಹಿತನನ್ನು ಮಧ್ಯದಲ್ಲಿ ಕೂರಿಸಿದೆವು. ಒಂದು ಮೂಲೆಯಲ್ಲಿ ನಾನೂ ಕೂತೆ. ಹುಡುಗ ಕಾಫಿ ಮಾಡಲು ಒಲೆ ಹಚ್ಚಿದ, ಒಲೆ ತುಂಬ ಧಗಧಗ ಅಂತ ತೆಂಗಿನ ಗರಿ ಉರಿಯತೊಡಗಿತು. ಹಾಲು ಕಾಫಿ ಪುಡಿ ಒಟ್ಟಿಗೇ ಹಾಕಿ, ಕೈಯಲ್ಲಿ ಹಿಡಿದಿದ್ದ ಪಾತ್ರೆಯನ್ನು ಒಮ್ಮೆಲೆ ಒಲೆಯ ಮೇಲಿಟ್ಟ, ಒಮ್ಮೆಲೇ ಆ ಪಾತ್ರೆ ಒಲೆಯ ಒಳಗಡೆ ಹೋಗಿ ಕುಳಿತುಕೊಂಡು ಬಿಟ್ಟಿತು, ಕಾರಣ ಅದು ಕಾಫಿ ಮಾಡುವ ಪಾತ್ರೆ ಅಲ್ಲ. ಹುಡುಗನಿಗೆ ಅದು ಗೊತ್ತಿಲ್ಲ, ನಮ್ಮನ್ನು ನೋಡಿದ ಉತ್ಸಾಹದಲ್ಲಿ ಆತ ಕಾಫಿ ಪಾತ್ರೆ ಬದಲಿಗೆ ಬೇರೆ ಗಾತ್ರದ ಪಾತ್ರೆ ತೆಗೆದುಕೊಂಡು ಬಿಟ್ಟಿದ್ದಾನೆ. ಒಲೆ ದೊಡ್ಡದು ಪಾತ್ರೆ ಚಿಕ್ಕದು. ಒಲೆಯ ಮೇಲೆ ಪಾತ್ರೆ ನಿಲ್ಲಲಿಲ್ಲ ಬೆಂಕಿಯ ಬಿಸಿಗೆ ಪಾತ್ರೆಯನ್ನು ಕೈಯಲ್ಲಿ ಹಿಡಿಯಲಾಗದೆ ಪಾತ್ರೆಯನ್ನು ಒಲೆಯ ಒಳಗೆ ಬಿಟ್ಟು ಬಿಟ್ಟ. ಹಾಗೆ ಪಾತ್ರೆ ಕೆಳಗೆ ಬಿದ್ದ ಒತ್ತಡಕ್ಕೆ ಕೆಳಗಿದ್ದ ಬೂದಿಯೆಲ್ಲಾ ಡುಬ್ಬಂತ ಮೇಲಕ್ಕೆ ಹಾರಿ ಹಾಲಿನ ಪಾತ್ರೆ ಸೇರಿತು. ಆದರೂ ಹುಡುಗ ಛಲಬಿಡದ ವಿಕ್ರಮ ನಂತೆ ಕಾಫಿ ಮಾಡುವ ಕಾಯಕ ಬಿಡ ಲಿಲ್ಲ. ಗೂಡಲ್ಲಿದ್ದ ಬೆಲ್ಲದ ಅಚ್ಚು ತೆಗೆದು ತನ್ನ ಧೂಳಿನ ಕೈಯಿಂದಲೇ ಅದನ್ನು ಮುರಿದು, ಕಾಫಿ ಪಾತ್ರೆಗೆ ಹಾಕಿದ. ಹಳೇ ಬಟ್ಟೆಯಿಂದ ಕಾಫಿ ಪಾತ್ರೆಯನ್ನು ಒಲೆ ಯಿಂದ ಹೊರತೆಗೆದ, ಬಿಳಿ ಬಟ್ಟೆಯಿಟ್ಟು ಅದನ್ನು ಸೋಸಿ ಲೋಟಕ್ಕೆ ಹಾಕಿ, ತಟ್ಟೆಯಲ್ಲಿಟ್ಟು ಗುರುಭಕ್ತಿಯಿಂದ ನಮ್ಮ ಮುಂದೆ ನಿಂತು ತಗೊಳ್ಳಿ ಸಾರ್, ಅಂತ ವಿಶ್ವ ಸುಂದರಿಯ ನಗೆ ನಕ್ಕ. ನನ್ನ ಪಕ್ಕದಲ್ಲಿದ್ದ ನನ್ನ ಗೆಳೆಯ ಕಾಫಿ ತಯಾ ರಾದ ಈ ಬಗೆಯನ್ನು ಕಣ್ಣಾರೆ ಕಂಡು, ಬೆದರಿ ಅಲ್ಲಾಡಿ ಬೆಂಡಾಗಿ ಹೋಗಿದ್ದ. ಇಲ್ಲಾ ಇಲ್ಲಾ ಇತ್ತೀಚೆಗೆ ನಾನು ಕಾಫಿ ಕುಡಿಯುವುದನ್ನೇ ನಿಲ್ಲಿಸಿಬಿಟ್ಟಿ ದ್ದೇನೆ. ನನಗೆ ಗ್ಯಾಸ್ಟ್ರಿಕ್ಕು ನನಗೆ ಕಾಫಿ ಬೇಡ ಎಂದುಬಿಟ್ಟ. ಗೆಳೆಯ ಮತ್ತೊಮ್ಮೆ ನನ್ನ ಕಡೆ ನೋಡಿ ಇನ್ನು ನೀನು ಇಲ್ಲಿಂದ ಹೊರಡದೇ ಹೋದರೆ ನಿನ್ನನ್ನು ಇಲ್ಲೇ ಬಿಟ್ಟು ನಾನು ಹೊರಡುತ್ತೇನೆ ಎನ್ನುವ ಅರ್ಥದಲ್ಲಿ ನನ್ನ ಮುಖ ನೋಡಿದ. ಆ ಹುಡುಗ ಮೇಷ್ಟ್ರ ಮೇಲಿನ ಪ್ರೀತಿಗೆ ಕಾಫಿ ಮಾಡಲು ಪಟ್ಟಪಡಿಪಾಟಲನ್ನು ನೋಡಿ ನಗು ತಡೆಯಲಾಗಲಿಲ್ಲ. ನಮ್ಮ ಜೊತೆ ಆ ಹುಡುಗನೂ ನಗುತ್ತಿದ್ದ. ಆ ಹುಡುಗ ಕೊಟ್ಟ ಕಾಫಿ ಯನ್ನು ನಾನೊಬ್ಬನೇ ಖುಷಿಯಿಂದ ಕುಡಿದೆ. ಮೇಷ್ಟ್ರಿಗೆ ಕಾಫಿ ಕುಡಿಸಿದ ನೆಂಬ ಅಭಿಮಾನದ ಮಿಂಚು ಅವನ ಕಣ್ಣಲ್ಲಿ ಹೊಳೆಯುತ್ತಿತ್ತು. ಪ್ರೀತಿಯಿಂದ ಅವನನ್ನೊಮ್ಮೆ ಅಪ್ಪಿಕೊಂಡೆ, ಅಪ್ಪಿ ಕೊಂಡಾಗ ಸಾರ್ ಬಟ್ಟೆ ಕೊಳೆ ಯಾಯಿತು ಅಂತ ಧೂಳು ಕೊಡ ವಲು ಹೋದ. ಅವನು ಕೈಯಲ್ಲಿ ವರೆಸಿದ್ದರಿಂದ ಕೈ ಧೂಳು ಮತ್ತಷ್ಟು ಪ್ರಖರವಾಗಿಯೇ ನನ್ನ ಬಿಳಿ ಶರ್ಟಿಗೆ ಮೆತ್ತಿಕೊಂಡಿತು. ಒಂದು ತಕ್ಕೊಂಡ್ರೆ ಮತ್ತೊಂದು ಫ್ರೀ ಅನ್ನೋ ಕಾಲ ಇದು. ಇರಲಿ ಬಿಡು ಪರವಾಗಿಲ್ಲ ಎಂದುಕೊಂಡು ನೆರಿಕೆಯ ಬಾಗಿಲು ತೆಗೆದು ಆಚೆ ಬರುವಷ್ಟರಲ್ಲಿ ಎದುರಿಗೆ ಅವರ ತಾಯಿ ಬಂದರು. ಅಷ್ಟೊತ್ತಿ ಗಾಗಲೇ ಮಗರಾಯ ಮಾಡಿದ ಉಪಚಾರಗಳೆಲ್ಲ ಆಕೆಗೂ ಕಾಣುತ್ತಿತ್ತು. ಆಕೆ ಊಟ ಮಾಡಿಕೊಂಡು ಹೋಗಿ ಸಾರ್ ಎಂದರು. ನಾನು ಪರವಾಗಿಲ್ಲ, ಇನ್ನೊಮ್ಮೆ ಬರ್ತೀನಿ ಎಂದೆ. ನನ್ನ ಮಗನಿಗೆ ನಿಮ್ಮನ್ನ ಕಂಡ್ರೆ ತುಂಬಾ ಇಷ್ಟ ಸಾರ್ ಎಂದರು. ನನಗೂ ಅಷ್ಟೇ ಇಷ್ಟ ಎಂದೆ, ‘ಬಡವರ ಮನೆ ಊಟ ಚಂದ-ಬಲ್ಲಿದರ ಮಾತು ಚಂದ’ ಅನ್ನೋ ಗಾದೆ ಮಾತು ಹುಟ್ಟಿದ್ದೇ ಇಂಥ ಗ್ರಾಮ ಭಾರತದಲ್ಲಿ. ಇಂಥಾ ನಿಸ್ಪೃಹ , ನಿರ್ಮಲ ಮನಸ್ಸುಗಳಲ್ಲಿ ಅಂತ ಅನ್ನಿಸಿತ್ತು.

ನನ್ನ ಗೆಳೆಯ ಗಾಡಿಯನ್ನು ಇಪ್ಪತ್ತಡಿ ದೂರ ನಿಲ್ಲಿಸಿಕೊಂಡು ಹಾರ್ನ್ ಮಾಡ್ತಿದ್ದ. ಹುಡುಗ ಬೆಳಿಗ್ಗೆ ಮತ್ತೆ ಅದೇ ಕಾಲೇಜಿನಲ್ಲಿ ಮೇಷ್ಟ್ರು ಕಾಫಿ ಕುಡಿದ ಕಥೆ ಹೇಳಿ ಮತ್ತೆ ಬಫೂನ್ ಆಗಲು ತಯಾರಾಗುತ್ತಿದ್ದ. ಅದರ ನಡುವೆ ಅವನ ಎದೆಯಾಳದಲ್ಲಿ ಅಭಿಮಾನದ ಸೆಲೆಯೊಂದು ಜಿನುಗುತ್ತಿತ್ತು. ಅಮೃತ ಬಿಂದುಗಳು ನನಗೆ ಮಾತ್ರ ಕಾಣುತ್ತಿತ್ತು. ಇಂಥ ಸ್ಥಿತಿಯಲ್ಲಿ ನಾನಾಗಿದ್ದರೆ ಯಾರನ್ನೂ ಮನೆಗೆ ಕರೆಯದೆ ದೊಡ್ಡಸ್ತಿಕೆಯ ಪೋಜು ಕೊಟ್ಟು ನಾಟಕೀಯವಾಗಿ ಬದುಕಿ ಬಿಡುತ್ತಿದ್ದೆ. ಆದರೆ ಅದೇ ಆ ಗ್ರಾಮ ಭಾರತದ ಹುಡುಗ, ಸಹಜವಾಗಿ ಬದುಕುವ, ಇದ್ದದ್ದನ್ನು ಇದ್ದಂತೆಯೇ ತೋರಿಸಿ ಕೊಳ್ಳುವ ಬದುಕಿನ ಸ್ವಾಭಿಮಾನದ ಪಾಠವನ್ನು ನನಗೆ ತನಗರಿವಿಲ್ಲದೆಯೇ ಹೇಳಿಬಿಟ್ಟ. ಮುಚ್ಚಿಟ್ಟು ಬದುಕುವ ಸಣ್ಣತನವನ್ನು ಬೆತ್ತಲು ಮಾಡಿ, ಬಿಚ್ಚಿಟ್ಟು ಬದುಕುವ ಆ ಹುಡುಗನ ಎದೆ ತುಂಬಿದ ಪ್ರೀತಿ, ಅಂತರಂಗ ಬಹಿರಂಗಗಳು ನನ್ನನ್ನು ವಿಸ್ಮಿತನನ್ನಾಗಿ ಮಾಡಿದ್ದವು. ನಾವು ಹೊರಡುವಾಗ ಅವನು, ತಾಯಿಯಂತೆ ನಕ್ಕ, ಅವನ ಒಡಲಾಳದ ಪ್ರೀತಿ, ತೆರೆದ ಬದುಕು, ಎರಡನ್ನೂ ನನಗೆ ಎಂದಿಗೂ ಮರೆ ಯಲಾಗುವುದಿಲ್ಲ. ಅಸಾಮಾನ್ಯರ ಬದುಕಿನಷ್ಟೇ ಜನ ಸಾಮಾನ್ಯರ ಬದುಕೂ ಕೂಡ ನಮಗೆ ಅನು ಕರಣೀಯ, ಆದರಣೀಯ, ಅಲ್ವಾ?

Translate »