ಮಕ್ಕಳ ಕಳ್ಳರೆಂಬ ಸಮೂಹ ಸನ್ನಿ
ಅಂಕಣಗಳು, ದೀಪ ಸಾಲು

ಮಕ್ಕಳ ಕಳ್ಳರೆಂಬ ಸಮೂಹ ಸನ್ನಿ

June 12, 2018

ಇದೊಂದು ಘಟನೆಯನ್ನು ನಿಮಗೆ ಹೇಳಲೇಬೇಕು. ನಾವೆಲ್ಲ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾಗ ಈಗಿನಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋ, ವ್ಯಾನು, ಬಸ್ಸುಗಳು ಇನ್ನು ರೋಡಿಗಿಳಿಯದಿದ್ದ ಕಾಲ ಅದು. ಅಷ್ಟಕ್ಕೂ ಶಾಲೆ ಬಿಟ್ಟ ಮೇಲೆ ತಂದೆ-ತಾಯಿಗಳು ಗೇಟಿನ ಹತ್ತಿರ ನಿಂತು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ಧಾವಂತ ಗಳು ಇರದಿದ್ದ ಕಾಲವದು. ಶಾಲೆ ಬಿಟ್ಟ ಮೇಲೆ ಹಳೇ ಸ್ಕೂಲ್ ಬ್ಯಾಗಿನ ದಾರ ಕ್ಕೊಂದು ಗಂಟು ಹಾಕಿ, ಬೆನ್ನಿಗಾನಿಸಿ ಕೊಂಡು ಎದೆಯ ಮುಂಭಾಗದ ಬ್ಯಾಗಿನ ದಾರಕ್ಕೆ ಕೈ ಸಿಕ್ಕಿಸಿಕೊಂಡು ಅವರವರ ಏರಿಯಾಗಳ ಮಕ್ಕಳು ಮಾತಾಡಿಕೊಂಡು ಮನೆ ಸೇರುತ್ತಿದ್ದರೆ ಬಾನಂಗಳದಲ್ಲಿ ಬೆಳ್ಳಕ್ಕಿಯ ಸಾಲು ಗೂಡಿನ ಕಡೆಗೆ ಹಾರು ತ್ತಿದ್ದಂತೆ ಕಾಣುತ್ತಿತ್ತು.

ಇಂಥಾ ಹೊತ್ತಿನಲ್ಲಿ ಒಂದು ದಿನ, ನಮ್ಮ ಶಾಲೆಯ ಬಳಿ ಅದೊಂದು ವಿಚಿತ್ರ ವಾದ  ಘಟನೆ  ನಡೆದುಹೋಯ್ತು. ಮಾಸಲು ಬಟ್ಟೆಯ ಮುದುಕನೊಬ್ಬ ನಮ್ಮ ಪ್ರೈಮರಿ ಶಾಲೆಯ ಗೇಟಿನ ಬಳಿ ನಿತ್ಯವೂ ಬರುತ್ತಿದ್ದ. ಮಧ್ಯಾಹ್ನ ಮಕ್ಕಳನ್ನು ಊಟಕ್ಕೆ ಬಿಟ್ಟಾಗ ಶಾಲೆಯ ಗೇಟಿನ ಬಳಿ ಬರುತ್ತಿದ್ದ ಆ ಮುದುಕ ನಮ್ಮ ತರಗತಿ ಯಲ್ಲೇ ಓದುತ್ತಿದ್ದ ಹುಡುಗನೊಬ್ಬನನ್ನು ಕೈ ಬೀಸಿ ಕರೆಯುತ್ತಿದ್ದ, ಅವನಿಗೆ ತನ್ನ ಕಾಸಿನಲ್ಲೇ  ನೆಲ್ಲಿಕಾಯಿ,  ಸೀಬೆಕಾಯಿ ಕೊಡಿಸುತ್ತಿದ್ದ . ಒಮ್ಮೊಮ್ಮೆ ಬರುವಾಗ ಕಾಯಿ ಬೆಲ್ಲ ತರುತ್ತಿದ್ದ. ಆ ಹುಡುಗ ನನ್ನು ಬಿಟ್ಟು ಮುದುಕ ಬೇರೆ ಯಾವ ಹುಡುಗರನ್ನೂ ತನ್ನ ಹತ್ತಿರಕ್ಕೆ ಕರೆಯು ತ್ತಿರಲಿಲ್ಲ. ನಿರ್ದಿಷ್ಟವಾಗಿ ಆ ಒಬ್ಬನೇ ಹುಡುಗನಿಗೆ ತಿಂಡಿ ಕೊಡಿಸುತ್ತಿದ್ದ. ಹಾಗೆ ಕೊಡಿಸಿ ಹುಡುಗನನ್ನು ಮುದ್ದು ಮಾಡು ತ್ತಿದ್ದ. ಆ ಹುಡುಗನಿಗೆ ಅದು ಸಹ್ಯ ಅನ್ನಿಸು ತ್ತಿರಲಿಲ್ಲ. ಅವನ ಮುಖದ ತುಂಬೆಲ್ಲ ಅತಿಯಾಗಿ ಗಡ್ಡ ಮೀಸೆ ಬೆಳೆದಿದ್ದರಿಂದ, ಮುತ್ತು ಕೊಡಲು ಬಂದಾಗ ಹುಡುಗ ಮುಖ ಕಿವುಚುತ್ತಿದ್ದ. ಆದರೆ, ಮಾಸಲು ಬಟ್ಟೆಯೊಂದಿಗೆ ಅರೆ ಹುಚ್ಚನಂತೆ ಕಾಣು ತ್ತಿದ್ದವನ ಎದೆಯಲ್ಲಿ ಮಾತ್ರ ಆ ಹುಡುಗನ ಬಗ್ಗೆ ವಿಪರೀತ ವ್ಯಾಮೋಹ, ಮಮಕಾರ ಬೆಳೆಸಿಕೊಂಡಿದ್ದ. ದೇವರ ಮೇಲೆ ಹೂವು ತಪ್ಪಿದರೂ ಆ ಮುದುಕ ಮಾತ್ರ ಪ್ರತಿದಿನಿ ಆ ಹುಡುಗನಿಗೆ ತಿನ್ನಲು ಏನಾದರೊಂದು ತಿನಿಸನ್ನು ಕೈಯಲ್ಲಿ ಹಿಡಿದು ಗೇಟು ಕಾಯುವ ವ್ರತ ತಪ್ಪುತ್ತಿರಲಿಲ್ಲ. ನಮ್ಮ ಓರಗೆಯ ಗೆಳೆಯರೆಲ್ಲಾ ಆ ಮುದುಕನನ್ನ ಕಂಡು ಹೆದರಿ ಓಡುತ್ತಿದ್ದೆವು. ಅವನಿಂದ ಅನತಿ ದೂರ ನಿಂತು ಅವನನ್ನು ಅಣಕಿಸು ತ್ತಿದ್ದೆವು. ಏಕೆಂದರೆ ಅವನು ತರುತ್ತಿದ್ದ ಯಾವ ತಿಂಡಿಯನ್ನೂ ಆತ ನಮಗಾರಿಗೂ ಕೊಡುತ್ತಿರಲಿಲ್ಲ. ಅದಕ್ಕೆ  ನಾವು ಹಾಗೆ ಮಾಡುತ್ತಿದ್ದೆವು, ಆದರೆ ಆ ಮುದುಕ ಆ ಹುಡುಗನಿಗೆ ಮಾತ್ರ ಎಲ್ಲವನ್ನೂ ಕೊಡುತ್ತಿದ್ದ. ಅವನಿಗಾಗಿ ಗೇಟು ಕಾಯು ತ್ತಿದ್ದ. ತಿಂಡಿ ಕೊಟ್ಟು ನೀರು ಕುಡಿಸಿ ಮುದ್ದು ಮಾಡಿ ಬಿಟ್ಟು ಹೋಗುತ್ತಿದ್ದ. ಅವನು ಎಲ್ಲಿಂದ ಬರುತ್ತಿದ್ದ? ಆತ ಯಾರು? ಏಕೆ ಹೀಗೆ ಮಾಡುತ್ತಿದ್ದ ಅಂತ ಶೋಧನೆ ಮಾಡುವ ಮನಸ್ಥಿತಿಯಲ್ಲಿ ಅಲ್ಲಿ ಯಾರೂ ಇರಲಿಲ್ಲ. ತುಂಬ ದಿನ ಗಳವರೆಗೆ ಈ ಪ್ರಕರಣ ಹೀಗೆಯೇ ನಡೆಯು ತ್ತಿತ್ತು. ಯಾವುದೂ ಅಡ್ಡಿಯಾಗಲಿಲ್ಲ, ಯಾರಿಗೂ   ತೊಂದರೆಯಾಗಲಿಲ್ಲ. ನಮ್ಮೂರಿನಲ್ಲಿ ಇದ್ದಕ್ಕಿದಂತೆ ಒಂದು ಸುಳ್ಳು ಸುದ್ದಿ ಹಬ್ಬಿತು. ಅದು ಊರಿಗೆ ಮಕ್ಕಳ ಕಳ್ಳರು ಬಂದಿದ್ದಾರಂತೆ. ಒಂಟಿ ಯಾಗಿ ಸಿಕ್ಕುವ ಶಾಲೆಯ ಮಕ್ಕಳನ್ನು ಅವರು ಅಪಹರಿಸುತ್ತಾರಂತೆ ಎನ್ನುವ ವಿಷಯ ಊರ ತುಂಬಾ ಹರಿದಾಡಿತು. ಯಾವಾಗ ಈ ವಿಷಯ ವ್ಯಾಪಕವಾಗಿ ಪ್ರಚಾರಕ್ಕೆ ಬಂತೋ ಮಕ್ಕಳನ್ನು ಶಾಲೆ ಯಿಂದ ಮನೆಗೆ ಕರೆದುಕೊಂಡು ಹೋಗಲು ಪೋಷಕರು ಶಾಲೆಯ ಗೇಟಿನ ಬಳಿಬಂದು ತಮ್ಮ ತಮ್ಮ ಮಕ್ಕಳಿಗಾಗಿ ಕಾಯುತ್ತಾ ನಿಲ್ಲು ವುದು ಆರಂಭವಾಯಿತು. ಪೋಷಕರು ಬರಲು ಪ್ರಾರಂಭವಾದ ವಿಷಯ ಆ ಮುದುಕ ನಿಗೂ ಗೊತ್ತಾಯಿತು. ಆಗ ಆ ಮುದುಕ  ತನ್ನ ಮುದ್ದಿನ ಆ ಹುಡುಗನಿಗಾಗಿ ಒಂದು ದುಸ್ಸಾಹಸಕ್ಕೆ ಕೈ ಹಾಕಿದ. ಪೋಷಕರು ಬರುವ ಒಂದೈದು ನಿಮಿಷ ಮೊದಲೇ ತಾನು ಮುಂಚಿತವಾಗಿ ಬಂದು ಆ ಹುಡುಗನಿಗೆ  ಏನಾದರೊಂದು ತಿಂಡಿ ಕೊಟ್ಟು ಹೊರಟು  ಬಿಡಲು ಸಮಯಕ್ಕಾಗಿ ಹೊಂಚು ಹಾಕುತ್ತಿದ್ದ.

ಮಕ್ಕಳನ್ನು ಕದಿಯುವ ಕಳ್ಳರ ಬಗ್ಗೆ ವದಂತಿ ಹಬ್ಬಿಸಿದವರು ಜೊತೆಗೆ ಮತ್ತೊಂದು ಮಹತ್ತರ ಸಂಗತಿಯನ್ನೂ ಹರಿಯಬಿಟ್ಟಿ ದ್ದರು. ಮಕ್ಕಳ ಕಳ್ಳರು ಮಕ್ಕಳನ್ನು ಕದಿ ಯಲು ಸುಮ್ಮನೆ ಬರಿಗೈಲಿ ಬರುವುದಿಲ್ಲ. ಬರುವಾಗ ಏನಾದರೊಂದು ತಿಂಡಿ ತಂದು, ಆ ತಿಂಡಿಯನ್ನು ಉಪಾಯ ಮಾಡಿ ಮಕ್ಕಳಿಗೆ ತಿನ್ನಲು ಕೊಡುತ್ತಾರೆ. ಆ ತಿಂಡಿಗೆ ಮತ್ತು ಬರುವ ಔಷಧಿ ಹಾಕಿರುತ್ತಾರೆ. ತಿಂಡಿ ತಿಂದ ಮಗು ಪ್ರಜ್ಞೆ ತಪ್ಪುತ್ತೆ, ಆಗ ಮಕ್ಕಳ ಕಳ್ಳರು ಮಕ್ಕಳನ್ನು ಅಪಹರಿಸು ತ್ತಾರೆ. ಅಂತ ಹುಯಿಲೆಬ್ಬಿಸಿದ್ದÀರು. ಬಂತಲ್ಲ ಗ್ರಹಚಾರ! ಪಾಪ ನಮ್ಮ ಶಾಲೆಗೆ ಬರುತ್ತಿದ್ದ ಆ ಮುದುಕನಿಗೆ ದುರದೃಷ್ಟವೋ ಏನೋ ಹೀಗೆ ಊರಲ್ಲಿ ಹಬ್ಬಿಸಿರುವ ವದಂತಿಯ ಸಾರಾಂಶವೆಲ್ಲಾ ಆ ನೆಲ್ಲಿಕಾಯಿ ಮುದುಕನ ಚಟುವಟಿಕೆಗಳಿಗೆ ತಾಳೆಯಾಗುತ್ತಿತ್ತು. ನಮ್ಮ ಊರಲ್ಲಿ  ಆ  ಕಾಲದಲ್ಲೇ  ಯುವಕರ ಗುಂಪೊಂದು ಮಕ್ಕಳ ಕಳ್ಳರ ಗ್ಯಾಂಗನ್ನು ತಾವೇ ಹಿಡಿದು ಬುದ್ಧಿ ಕಲಿಸಲು ಹೊರ ಟಿತ್ತು. ‘ಹಿಟ್ಟು ಹಳಸಿತ್ತು’, ನಾಯಿ ಹಸಿದಿತ್ತು’ ಅನ್ನೋ ಗಾದೆ ಮಾತಿನ ಹಾಗೆ ಆ ನೆಲ್ಲಿ ಕಾಯಿ ಮುದುಕ ಈ ಪ್ರಕರಣದಲ್ಲಿ ವಿನಾಕಾರಣ ತಗುಲಿಹಾಕಿಕೊಂಡ. ಅಂದುಕೊಂಡ ಹಾಗೆಯೇ ಎಂದಿನಂತೆ ಆ ಹುಡುಗನಿಗೆ ಅದೇನೋ ತಿಂಡಿ ತಂದು ಶಾಲೆಯ ಗೇಟಿನ ಬಳಿ ನಿಂತು ಊಟಕ್ಕೆ ಬೆಲ್ಲು ಹೊಡೆದ ಕೂಡಲೇ ಆ ಹುಡುಗನಿಗಾಗಿ ಕಾಯುತ್ತಾ ನಿಂತ. ಹುಡುಗ ನಮ್ಮೊಟ್ಟಿಗೆ ಶಾಲೆಯಿಂದ ಹೊರಬಂದ, ಬಂದವನೇ ಗೇಟಿನ ಕಡೆ ನೋಡಿದ ಗೇಟಿನ ಬಳಿ ನಿಂತಿದ್ದ ನೆಲ್ಲಿಕಾಯಿ ಮುದುಕ ಒಂದು ಕೈಯಲ್ಲಿ ತಿಂಡಿ ತೋರಿಸಿ ಮತ್ತೊಂದು ಕೈಲಿ ಹುಡುಗನನ್ನು ಕರೆಯು ತ್ತಿದ್ದ ಸುಳ್ಳು ವದಂತಿಯಲ್ಲಿ ತಿಳಿಸಿದ್ದ ಹಾಗೆಯೇ ಅನುಮಾನಾಸ್ಪದವಾಗಿ ನಡೆದು ಕೊಂಡಂತೆ ಅದು ಕಾಣುತ್ತಿತ್ತು. ತಿಂಡಿಯ ಆಸೆಗಾಗಿ ಹಿಂದಿನಂತೆ ಆ ಹುಡುಗ ಮುದುಕನ ಬಳಿಗೆ ಓಡೋಡಿ ಬಂದ. ಆದರೆ ಅಷ್ಟ ರಲ್ಲಾಗಲೇ ಅಲ್ಲಿ ಬಂದು ನಿಂತಿದ್ದ ಅವರ ಅಮ್ಮ ಮಕ್ಕಳ ಕಳ್ಳ, ಮಕ್ಕಳ ಕಳ್ಳ ಅಯ್ಯೋ ನನ್ನ ಮಗೂ ಮಗೂ ಅಂತ ಬೊಬ್ಬೆ ಹಾಕಿ ದಳು. ನಮ್ಮ ಶಾಲೆಯಿದ್ದದ್ದು ಪೇಟೆ ಬೀದಿಯಲ್ಲಿ ತುಂಬಾ ಜನ ಓಡಾಡುವ ಜಾಗ ಅದು. ಕೂಡಲೇ ಜನ ಸೇರಿದರು. ಆ ಮುದುಕನ ಬಳಿಗೆ ಓಡಿ ಬಂದ ಆ ಮಗುವನ್ನು ಆ ಮುದುಕನಿಂದ ಕಿತ್ತು ಜನ ಅದರ ತಾಯಿಯ ಕೈಗೆ ಕೊಟ್ಟರು. ಕೈಯಲ್ಲಿದ್ದ ತಿಂಡಿಯಲ್ಲಿ ಅವನು ಮತ್ತು ಬರಿಸುವ ಔಷಧಿ ಹಾಕಿದ್ದಾನೆ ಅಂತ ಭಾವಿಸಿ ಅದನ್ನು ಕಿತ್ತು ಕೊಂಡು ಥಳಿಸಿದರು… ಥಳಿಸಿದರೂ ದೇವರೇ! ಮನಸೋ ಇಚ್ಛೆ ಆ ಮುದುಕ ನನ್ನು ಹೊಡೆದು ಅಟ್ಟಾಡಿಸಿಬಿಟ್ಟರು. ಆ ಹಲ್ಲೆ ಎಷ್ಟರ ಮಟ್ಟಿಗೆ ನಡೆಯಿತು ಎಂದರೆ ಆ ಮುದುಕ ಸಾವು ಬದುಕಿನ ನಡುವೆ ಹೋರಾಡುವ ಹಂತಕ್ಕೆ ತಲುಪಿದ. ತಲೆ, ಮೂಗು, ಕೈಕಾಲುಗಳೆಲ್ಲ ರಕ್ತ ಸಿಕ್ತವಾಗಿ ಹೋದವು. ಆ ಮುದುಕನನ್ನು ಜನ ಹೊಡೆ ಯುತ್ತಿದ್ದರೆ ಶಾಲೆಯ ಮಕ್ಕಳೆಲ್ಲಾ, ಅಧ್ಯಾಪಕ ರೆಲ್ಲಾ ನಿಂತು ನೋಡುತ್ತಿದ್ದರೇ ವಿನಃ ಯಾರೊ ಬ್ಬರೂ ಹತ್ತಿರ ಹೋಗಿ ಏನು ನಡೆಯು ತ್ತಿದೆ? ಯಾಕೆ ಹೊಡೆಯುತ್ತಿದ್ದೀರಿ? ಏನಾ ಯಿತು? ಎಂದು ವಿಚಾರಿಸುವ ಗೋಜಿಗೆ ಹೋಗಲಿಲ್ಲ. ಎಲ್ಲರೂ ಮಕ್ಕಳ ಕಳ್ಳರನ್ನು ಹಿಡಿದು ಥಳಿಸಬೇಕು ಎಂಬ ಸಮೂಹ ಸನ್ನಿಗೆ ಒಳಗಾಗಿದ್ದರು. ಜನ ಆ ಮುದುಕ ನಿಗೆ ಹೊಡೆಯುತ್ತಿದ್ದರೆ ದಿನಾಲೂ ಅವನು ತರುತ್ತಿದ್ದ ತಿಂಡಿ ತಿಂದು ಮುದ್ದು ಮಾಡಿಸಿ ಕೊಳ್ಳುತ್ತಿದ್ದ ಆ ಹುಡುಗ ಮಾತ್ರ ತನ್ನ ತಾಯಿಯ ಬಳಿ ನಿಂತು ‘ತಾತ-ತಾತ’ ಎಂದು ಅಳುತ್ತಿದ್ದ. ಅವನು ಹಾಗೆ ‘ತಾತ-ತಾತ’ ಎನ್ನುತ್ತಿದ್ದುದನ್ನು ನೋಡಿ ಆ ಹುಡುಗನ ತಾಯಿ ಅವನ ಬಾಯಿ ಮೇಲೆ ಫÀಟಾರ್ ಅಂತ ಬಡಿದು ಕಳ್ಳರನ್ನೆಲ್ಲಾ ‘ತಾತ’ ಅಂತೀಯ ನಡೀ ಮನೆಗೆ ಅಂತ, ಅಳುತ್ತಿದ್ದ ಮಗನನ್ನು ಬಡಿದುಕೊಂಡೇ ಎಳೆದುಕೊಂಡು ಮನೆಗೆ ಹೋದಳು. ಆ ಮುದುಕ ಅನಾಥ ಶವದಂತೆ ಬಿದ್ದಿದ್ದ. ಆ ಮೇಲೆ ಬಂದ ಪೊಲೀಸರು, ಜಟಕಾ ಗಾಡಿಗೆ ಹಾಕಿಕೊಂಡು ಆತನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಮರುದಿನ ಬೆಳಿಗ್ಗೆ ಶಾಲಾ ಪ್ರಾರ್ಥನೆಯ ಅಸೆಂಬ್ಲಿ ವೇಳೆಯಲ್ಲಿ ಶಿಕ್ಷಕರು ಸಾಮೂಹಿಕ ವಾಗಿ ಮಕ್ಕಳಿಗೆ ಶಾಲೆಯಲ್ಲಿ ಎಚ್ಚರಿಕೆ ಕೊಟ್ಟರು. ಅಪರಿಚಿತರು ಯಾರಾದರೂ ಬಂದು ಕರೆದರೆ ಅವರ ಕೂಡ ಹೋಗಬಾರದು, ತಿನ್ನಲು ಏನನ್ನಾದರೂ ಕೊಟ್ಟರೆ ಯಾರೂ ತಿನ್ನ ಬಾರದೆಂದು ಎಚ್ಚರಿಕೆ ಕೊಟ್ಟು ತರಗತಿಗೆ ಕಳುಹಿಸಿದರು. ಆವತ್ತು ಮಧ್ಯಾಹ್ನ ಊಟದ ವಿರಾಮದಲ್ಲಿ ಶಾಲೆಯ ಗೇಟು ತೆರೆದಿತ್ತು. ಆ ಹುಡುಗ ಅಜ್ಜ ಬಂದಾನೆಂದು ಅವನಿ ಗಾಗಿ ಅಳುತ್ತಾ ಕಾಯುತ್ತಿದ್ದ, ಆದರೆ ಅಜ್ಜ ಬರಲಿಲ್ಲ. ಗೇಟಿನ ಮುಂದೆ ನೆಲ್ಲಿಕಾಯಿ ಮಾರುತ್ತಿದ್ದ ಅಜ್ಜಿ ನಮ್ಮ ಶಿಕ್ಷಕರೊಬ್ಬರಿಗೆ ಹೇಳುತ್ತಿದ್ದಳು “ಸ್ವಾಮ್ಯಾರೆ ನೆನ್ನೆ ಒದೆ ತಿಂದ್ನಲ್ಲ ಆ ಮುದುಕ ಅವನು ಮಕ್ಕಳ ಕಳ್ಳ ಅಲ್ವಂತೆ ದೊಡ್ಡ ಮಾವತ್ತೂರಿನ ಕಡೆಯವನಂತೆ ಅವನೂ ಚೆನ್ನಾಗಿ ಬಾಳಿ ಬದುಕಿದವನಂತೆ. ಆಸ್ತಿಯನ್ನೆಲ್ಲಾ ಬರೆಸಿ ಕೊಂಡು ಅವರ ಮಗ ಸೊಸೆ ಮನೆ ಬಿಟ್ಟು ಓಡಿಸಿಬಿಟ್ಟವರಂತೆ. ಆದರೆ ಆಯಪ್ಪನಿಗೆ ಇರೋ ಒಬ್ನೆ ಒಬ್ಬ ಮೊಮ್ಮಗನನ್ನ ಕಂಡರೆ ಪ್ರಾಣ ಅಂತೆ, ನಿಮ್ಮ್ಮಿಸ್ಕೂಲ್ನಾಗೋತ್ತಾ ಇರೋ ಆ ಹುಡುಗ ಥೇಟ್ ಆತನ ಮೊಮ್ಮಗನ ಥರಾ ಕಾಣಿಸ್ತಾ ಇದ್ನಂತೆ. ಅದಕ್ಕೇ ದಿನಾಲೂ ಬಂದು ಆ ಹುಡುಗನನ್ನು ನೋಡ್ಕೊಂಡು ಸಮಾಧಾನ ಪಟ್ಕೊಂಡು ಹೋಗ್ತಿದ್ನಂತೆ. ಆದರೆ ಈ ಮಕ್ಕಳ ಕಳ್ಳರ ಸುದ್ದಿ ಸಮಾ ಚಾರ ಯಾವ್ದುವೆ ಆಯಪ್ಪನಿಗೆ ಗೊತ್ತಿಲ್ಲ ಸ್ವಾಮಿ, ಪಾಪ ಆ ಬಡಪಾಯಿ ಮುದುಕ, ಈ ಜನಗಳ ಕ್ವಾಪಕ್ಕೆ ಬಲಿಯಾಗೋದ! ಏನ್ ಮಾಡೋದ್ ಹೇಳಿ ಎಲ್ಲ ಅವರ್‍ವರ್ ತಂದಿದ್ದು.-ಎನ್ನುತ್ತಾ ಮಾತಾಡುತ್ತಿದ್ದಳು. ಶಾಲೆಯಲ್ಲಿ ಗಂಟೆ ಬಾರಿಸಿತು ಮುದುಕನಿ ಗಾಗಿ ಕಾಯುತ್ತಾ ನಿಂತಿದ್ದ ಆ ಹುಡುಗ ಬೆಂಚಿನ ಮೇಲೆ ಕುಳಿತು ಮಗ್ಗಿ ಕಲಿಯು ತ್ತಿದ್ದ ನಮ್ಮಂತ ಹುಡುಗರ ಕಣ್ಣಲ್ಲಿ ಈ ಪ್ರಸಂಗ ಅಚ್ಚಳಿಯದೇ ಉಳಿದಿತ್ತು.

ಹಳ ದಿನಗಳಿಂದ ಇದನ್ನು ಬರೆಯ ಬೇಕೆಂದುಕೊಂಡು ಬರೆಯಲಾಗಲಿಲ್ಲ. ಆದರೆ ವರ್ತಮಾನ ಕರ್ನಾಟಕದಲ್ಲಿ ಈಗ ಇಂತದೇ ಒಂದು ಸಮೂಹ ಸನ್ನಿಗೆ ಒಳಗಾಗಿ ಕೆಲವರು ಅಮಾಯಕ ಜೀವಗಳನ್ನು ಯದ್ವಾ ತದ್ವಾ ಬಡಿದು ಹಲ್ಲೆ ನಡೆಸುತ್ತಿರುವ ಪ್ರಸಂಗ ಗಳು ವರದಿಯಾಗುತ್ತಿವೆ. ಬರಿಯ ಕರ್ನಾಟಕ ಮಾತ್ರವಲ್ಲ ನಿನ್ನೆ ಹೈದರಾಬಾದ್‍ನ ಚಂದ್ರ ಯಾನಗುತ್ತ ಎಂಬಲ್ಲಿ ಭಿಕ್ಷುಕನೊಬ್ಬನನ್ನು ಮಕ್ಕಳಕಳ್ಳ ಎಂದು ತಪ್ಪು ತಿಳಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಅಂತ ವರದಿಯಾಗಿದೆ. ಕನ್ನಡದ ಮನಸುಗಳನ್ನು ಔದಾರ್ಯ ವಂತರು ಎಂದು ಕರೆಯುತ್ತಾರೆ. ಆದರೆ ನಮ್ಮ ಯುವಕರು ನಡೆದ ಘಟನೆಯನ್ನು ವಿವೇಚಿಸದೆ ಕಾನೂನನ್ನು ಕೈಗೆತ್ತಿಕೊಂಡು ತಾವೇ ಶಿಕ್ಷೆ ಕೊಟ್ಟು ಬಿಡುವ ಹಂತಕ್ಕೆ ಬಂದಿ ದ್ದಾರೆ. ಈ ವರ್ತನೆ ನಮ್ಮ ತಲೆಮಾರಿಗೆ ಖಂಡಿತ ಅಪಾಯಕಾರಿ. ಇವತ್ತು ಕರ್ನಾಟಕ ವಷ್ಟೇ ಅಲ್ಲ; ದಕ್ಷಿಣ ಭಾರತದ ತಮಿಳು ನಾಡು, ಆಂಧ್ರಪದೇಶ, ಕೇರಳ ಸೇರಿದಂತೆ ನಾಲ್ಕು ರಾಜ್ಯಗಳಲ್ಲೂ ಮಕ್ಕಳ ಕಳ್ಳರ ಸಮೂಹ ಸನ್ನಿಯ ಅಧ್ವಾನಗಳು ಹೆಡೆಯೆತ್ತಿವೆ. ಕೊಪ್ಪಳದ ಕಾರಟಗಿಯಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ಅಣ್ಣ ತಂಗಿಯನ್ನು ಹಿಡಿದು ಥಳಿಸಿದ್ದಾರೆ. ಅವರ ಕಾರನ್ನು ಜಖಂಗೊಳಿಸಿದ್ದಾರೆ. ಪೊಲೀಸರು ಬಂದ ಮೇಲೆ ಗೊತ್ತಾಗಿದೆ! ರಾಜಶೇಖರಗೌಡ ಮತ್ತು ಅವನ ತಂಗಿ ಮೋನಿಕಾ ಬಸವನದುರ್ಗದ ನಿವಾಸಿಗಳು, ಯಾವುದೋ ಕೆಲಸದ ನಿಮಿತ್ತ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಟೈರ್ ಬ್ಲಾಸ್ಟ್ ಆಗಿ ಕಾರು ನಿಲ್ಲಿಸಿದರು ಅಂತ. ಅಷ್ಟರಲ್ಲಾಗಲೇ ಮಕ್ಕಳ ಕಳ್ಳರ ಬಗ್ಗೆ ಸಮೂಹ ಸನ್ನಿಗೆ ಒಳಗಾಗಿದ್ದ ಗ್ರಾಮಸ್ಥರ ಗುಂಪೊಂದು ಅವರ ಮೇಲೆ ಹಲ್ಲೆ ಮಾಡಿದೆ. ಅಪರಿಚಿತರು, ಆಗಂತುಕರು, ಅಮಾಯಕರು, ಎಲ್ಲೆಂದ ರೆಲ್ಲಿ ಸಾರ್ವಜನಿಕವಾಗಿ ಓಡಾಡಲೂ ಆಗದ ಭಯದ ವಾತಾವರಣ ಸೃಷ್ಟಿಯಾಗಿದೆ. ಅಷ್ಟೇ ಆಗಿದ್ದರೂ ಪರಿಹಾರ ಹುಡುಕಬಹುದಾಗಿತ್ತು, ಆದರೆ ಈ ಸಂಬಂಧ ಜನ ಆಂಧ್ರಪದೇಶ ಮತ್ತು ತೆಲಂಗಾಣಗಳಲ್ಲಿ ಐವರನ್ನು, ತಮಿಳು ನಾಡಿನಲ್ಲಿ ನಾಲ್ವರನ್ನು ಕೊಂದೇ ಬಿಟ್ಟಿದ್ದಾರೆ. ಕಳೆದ ವಾರ ಬೆಂಗಳೂರಿನಲ್ಲಿ ಕಾಲೂರಾಂ ಎಂಬ ರಾಜಸ್ತಾನ ಮೂಲದ ಹುಡುಗ ನೊಬ್ಬನನ್ನು ನಡು ರಸ್ತೆಯಲ್ಲಿ ಕೆಡವಿಕೊಂಡು ಬ್ಯಾಟು ಬಿಸಿ ಬಡಿದು ಕೊಂದೇ ಬಿಟ್ಟರಲ್ಲಾ! ಆ ದೃಶ್ಯಗಳನ್ನು ಟಿ.ವಿ. ಮಾಧ್ಯಮಗಳಲ್ಲಿ ನೋಡುತ್ತಿದ್ದರೆ ಎದೆ ಝಲ್ಲೆನಿಸುತ್ತಿತ್ತು, ಯಾವ ತಾಯಿ ಹೆತ್ತ ಮಗನೋ! ಮಾಡದ ತಪ್ಪಿಗೆ ಬಲಿಯಾಗಿ ಹೋದ, ಅದರಲ್ಲೂ ಸುಮ್ಮನೆ ಕೊಲ್ಲಲಿಲ್ಲ, ಬಡಿದು ಬಡಿದು ಕೊಂದರು. ಆಮೇಲೆ ಪೊಲೀಸ್ ಕಮಿಷನರ್ ಮಾತಾಡಿ ದರು, ಮುಖ್ಯಮಂತ್ರಿಗಳು ಮನವಿ ಮಾಡಿ ದರು. ಇಷ್ಟೆಲ್ಲಾ ಅಧ್ವಾನಗಳಿಗೆ ಕಾರಣವೇ ನಮ್ಮ ಸಾಮಾಜಿಕ ಜಾಲತಾಣಗಳು. ಒಂದು ತಿಂಗಳ ಹಿಂದೆ ಬಳ್ಳಾರಿಯಲ್ಲಿ ಇದು ಶುರು ವಾಯಿತು. ಮಕ್ಕಳ ಕಳ್ಳರು ಬಂದಿದ್ದಾರೆ, ನಿಮ್ಮ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿಟ್ಟು ಕೊಳ್ಳಿ ಎಂದು ವಾಟ್ಸಪ್ ಸಂದೇಶ ವೊಂದು ಹರಿದಾಡಿದ ಪರಿಣಾಮ ಇಂದು ಇಷ್ಟೊಂದು ಅಮಾಯಕ ಜೀವಗಳು ಬಲಿಯಾಗಿ ಹೋದವು. ಇನ್ನೂ ಕೆಲವರು ಕೊರಟಗೆರೆಯ ಬಳಿ ಬೆಟ್ಟದಲ್ಲಿ ನಿಂತು ಯಾರೋ ಮಕ್ಕಳ ಕಣ್ಣು, ಕಿಡ್ನಿ, ಎದೆಯ ಭಾಗಗಳನ್ನು ತಿನ್ನಲು ಬಂದಿದ್ದಾರಂತೆ, ಅವರನ್ನ ಬೆಟ್ಟದಲ್ಲಿ ಹುಡುಕುತ್ತಿದ್ದೇವೆ, ನಿಮಗೇನಾದರೂ ಸಿಕ್ಕರೆ ಮಾಹಿತಿ ಕೊಡಿ, ನಮಗಿಲ್ಲಿ ಅಂತಹವರು ಯಾರೂ ಕಂಡಿಲ್ಲ. ಅವರು ಹಾಗಿದ್ದಾರಂತೆ, ಹೀಗಿದ್ದಾ ರಂತೆ, ಅಂತ ಮಾತಾಡಿ ಕೈಯಲ್ಲಿ ಆಯುಧ ಗಳನ್ನಿಡಿದು ವಿಡಿಯೋ ಪೋಸ್ಟ್ ಮಾಡಿ ದ್ದರು. ಮಕ್ಕಳ ಕಳ್ಳರನ್ನು ಹುಡುಕಿಕೊಂಡು ಮಚ್ಚು ಕೊಡಲಿ ಹಿಡಿದು ಹೀಗೆ ಬೆಟ್ಟ ಗುಡ್ಡಗಳಲ್ಲಿ ಅಲೆಯುತ್ತಿರುವ ಯುವಕರು ಇಂಥಾ ಅಪಾಯಕಾರಿ ಸಮೂಹ ಸನ್ನಿಗೆ ಒಳಗಾದರೆ ಹೇಗೆ? ಕಾನೂನು ರಕ್ಷಕ ರಾದ ಪೊಲೀಸರಿದ್ದಾರೆ. ಎಂತೆಂಥವ ರನ್ನೊ ಹೆಡೆಮುರಿಕಟ್ಟಿ ಜೈಲಿಗಟ್ಟಿದ ಟಫ್‍ಕಾಫ್‍ಗಳಿದ್ದಾರೆ. ಅಂಥವರೇನಾ ದರೂ ಇದ್ದರೆ ಅವರಿಗೆ ಮಾಹಿತಿ ನೀಡಿ ಸಹಕರಿಸಿ ನಿರಾಧಾರ ಸುದ್ದಿಯ ಸಮ್ಮೋಹನಕ್ಕೆ ಒಳಗಾಗಿ ಅತಿರೇಕ ಸೃಷ್ಟಿಸಿ ಜೀವ ಹಾನಿ ಮಾಡಬಾರದು.

ಸಾಮಾಜಿಕ ಜಾಲತಾಣಗಳು ಇವತ್ತು ಜಗಳತಾಣಗಳಾಗಿ,   ಕೆಸರೆರಚಾಟದ ಪಂದ್ಯಾವಳಿಯಂತಾಗಿ ಹೋಗಿದೆ. ಇಂತಹ ವಾಟ್ಸಪ್  ಪೋಸ್ಟ್‍ಗಳು  ತರುವ ದುರ್ವಾರ್ತೆಗಳು ಹೇಗಿರುತ್ತವೆ ನೋಡಿ! ಮೊನ್ನೆ ತಾನೆ ಯಾರೊ ಮಹಾನು ಭಾವರು ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದು ಇನ್ನೂ ಮುಂದುವರೆದು ಸಮಾಜದ ಸಾಮಾಜಿಕ ಸ್ವಾಸ್ಥ್ಯದ ಮೇಲೆ ದಾಳಿ ಮಾಡಿದರೆ ಹೇಗೆ? ಮಕ್ಕಳನ್ನು ಕದ್ದು, ಅವರನ್ನ ಅಂಗವಿಕಲರನ್ನಾಗಿ ಮಾಡಿ ಭಿಕ್ಷೆ ಬೇಡಲು ಕಳುಹಿಸುತ್ತಾರೆ. ಅವರ ಅಂಗಾಂಗ ಬಿಚ್ಚಿ ಮಾರಾಟ ಮಾಡು ತ್ತಾರೆ ಎಚ್ಚರಿಕೆಯಿಂದಿರಿ ಎಂದು ಮೊದಲು ವಾಟ್ಸಪ್ ಮಾಡಿದ ಸಮಾಜ ಸುಧಾರಕ ನೊಬ್ಬನನ್ನು ಪೊಲೀಸರು ಈಗಾಗಲೇ ತಮಿಳುನಾಡಿನಲ್ಲಿ ಬಂಧಿಸಿದ್ದಾರಂತೆ. ಈ ಅಂತೆ ಕಂತೆಗಳ ಸಂತೆ ಕಟ್ಟುವುದ ರಿಂದಲೇ  ಅನಾಹುತದ  ಆಹುತಿಗೆ ಅಮಾಯಕರು ಬಲಿಯಾಗುತ್ತಾರೆ. ಚಿಂದಿ ಆಯುವವರು, ಕಂಪೆನಿಯ ವಸ್ತುಗಳನ್ನು ಹೆಗಲ ಮೇಲೆ ಹೊತ್ತು ಮನೆಮನೆಗೆ ತೆರಳಿ ಮಾರಾಟ ಮಾಡುವವರು ಮುಂತಾದ ಬಡವರನ್ನು ಅನುಮಾನದಿಂದ ನೋಡ ಲಾಗುತ್ತಿದೆ. ಮಕ್ಕಳಿಗೆ ತಿಂಡಿ ತೀರ್ಥ ಕೊಡುವವರು ಕಣ್ಣಿಗೆ ಬಿದ್ದರೆ ಮುಗೀತು ಕತೆ. ಅವರು ಒಳ್ಳೆಯವರೇ ಆದರೂ ಧರ್ಮ ದೇಟು ಗ್ಯಾರಂಟಿ ಎನ್ನುವ ಸ್ಥಿತಿ ತಲೆ ದೋರಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ  ವಿವೇಕಿಗಳಾಗಿ ವರ್ತಿಸುವುದು ಒಳ್ಳೆಯದು.

ಅಷ್ಟಾಗಿಯೂ  ಏಕಪಕ್ಷೀಯವಾಗಿ ತೀರ್ಮಾನಿಸುವ ವಿಷಯ ಇದಲ್ಲ ಎಂಬ ಅರಿವು ನಮಗೂ ಇದೆ. ಭಾರತದಂಥ ದೇಶದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಪ್ರತೀ ಗಂಟೆಗೆ 11 ಮಕ್ಕಳು ಅಪಹರಣಕ್ಕೆ ಒಳಗಾಗುತ್ತಾರೆ. ಪ್ರತಿ ದಿನ 174 ಮಕ್ಕಳ ಅಪಹರಣವಾಗುತ್ತದೆ. ಇಂಥಾ ಮಕ್ಕಳನ್ನು ಕಾರ್ಖಾನೆಯ ಕೆಲಸಕ್ಕೆ, ಮನೆಗೆಲಸಕ್ಕೆ ಹೊಸ ಔಷಧಗಳ ಮೂಲಕ ಪ್ರಯೋಗಕ್ಕೆ, ಹೆಣ್ಣು ಮಕ್ಕಳಾದರೆ ವೇಶ್ಯಾವಾಟಿಕೆಗೆ, ಸ್ವಲ್ಪ ಬಲಿತ ಮಕ್ಕಳಾದರೆ ವಿದೇಶಕ್ಕೆ ಕಳಿಸಿ ಅಲ್ಲಿ ಬಲವಂತದ ಮದುವೆಗೆ, ದೊಡ್ಡ ದುಡ್ಡು ಸಿಕ್ಕರೆ ಮಕ್ಕಳಿಲ್ಲದವರಿಗೆ ದತ್ತು ಸ್ವೀಕಾರಕ್ಕೆ  ಬಳಸುತ್ತಾರೆ. ಅಂತ ವರದಿಯೊಂದು ಹೇಳಿದೆ. ಕೆಲವು ದೇಶ ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥ ಮಕ್ಕಳನ್ನು ವಶಕ್ಕೆ ಪಡೆದು ಅವರ ಕೈಗೆ ಬಂದೂಕು ಕೊಟ್ಟು ಶತ್ರು ದೇಶದ ಮೇಲೆ ಛೂ ಬಿಡುವುದಕ್ಕೂ ಇಂಥಾ ಅಪಹೃತ ಮಕ್ಕಳು ಬಳಕೆಯಾಗುತ್ತಾರೆಂತ ವರದಿಗಳು ಹೇಳಿವೆ. ಇಷ್ಟೆಲ್ಲಾ ಗೊತ್ತಿದ್ದೂ ನಾವು ಮಾಡ ಬೇಕಾದ ಸಕಾಲದ ವಿವೇಚನೆಯೆಂದರೆ, ನಮ್ಮ ಮಕ್ಕಳ ಜೋಪಾನವೂ ನಮ್ಮ ಜವಾ ಬ್ದಾರಿ, ಹಾಗೆಯೇ ಅಮಾಯಕ ಜೀವಗಳ ವಿನಾಕಾರಣದ ಮಾರಣ ಹೋಮದ ಬಗ್ಗೆ ದನಿಯೆತ್ತಿ ಸುಶಿಕ್ಷಿತ ಸಮಾಜದ ವಕ್ತಾರರಂತೆ ಯೋಚಿಸುವುದೂ ಕೂಡ ನಮ್ಮ ಸರಿದಾರಿ, ಏನಂತೀರಿ?

ಸಾಮಾಜಿಕ ಜಾಲತಾಣಗಳು ಇವತ್ತು ಜಗಳತಾಣಗಳಾಗಿ, ಕೆಸರೆರಚಾಟದ ಪಂದ್ಯಾವಳಿಯಂತಾಗಿ ಹೋಗಿದೆ. ಇಂತಹ ವಾಟ್ಸಪ್ ಪೋಸ್ಟ್‍ಗಳು ತರುವ ದುರ್ವಾರ್ತೆಗಳು ಹೇಗಿರುತ್ತವೆ ನೋಡಿ! ಮೊನ್ನೆ ತಾನೆ ಯಾರೊ ಮಹಾನುಭಾವರು ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅದು ಇನ್ನೂ ಮುಂದುವರೆದು ಸಮಾಜದ ಸಾಮಾಜಿಕ ಸ್ವಾಸ್ಥ್ಯದ ಮೇಲೆ ದಾಳಿ ಮಾಡಿದರೆ ಹೇಗೆ? ಮಕ್ಕಳನ್ನು ಕದ್ದು, ಅವರನ್ನ ಅಂಗವಿಕಲರನ್ನಾಗಿ ಮಾಡಿ ಭಿಕ್ಷೆ ಬೇಡಲು ಕಳುಹಿಸುತ್ತಾರೆ. ಅವರ ಅಂಗಾಂಗ ಬಿಚ್ಚಿ ಮಾರಾಟ ಮಾಡುತ್ತಾರೆ ಎಚ್ಚರಿಕೆಯಿಂದಿರಿ ಎಂದು ಮೊದಲು ವಾಟ್ಸಪ್ ಮಾಡಿದ ಸಮಾಜ ಸುಧಾರಕನೊಬ್ಬನನ್ನು ಪೊಲೀಸರು ಈಗಾಗಲೇ ತಮಿಳುನಾಡಿನಲ್ಲಿ ಬಂಧಿಸಿದ್ದಾರಂತೆ. ಈ

ಅಂತೆ ಕಂತೆಗಳ ಸಂತೆ ಕಟ್ಟುವುದರಿಂದಲೇ ಅನಾಹುತದ ಆಹುತಿಗೆ ಅಮಾಯಕರು ಬಲಿಯಾಗುತ್ತಾರೆ.

Translate »